ಇತ್ತೀಚೆಗೆ ಜಾನುವಾರುಗಳು ಚೂಪಾದ ವಸ್ತುಗಳನ್ನು ನುಂಗಿ ಅವು ಹೃದಯದ ತೊಂದರೆಯುಂಟು ಮಾಡುವ ಕಾಯಿಲೆಯಿಂದ ಮರಣವನ್ನಪ್ಪುವುದು ಜಾಸ್ತಿಯಾಗಿದೆ. ಆಹಾರ ತಿನ್ನುವಾಗ ಮೊಳೆ ಸೂಜಿ, ತಂತಿ ಇತ್ಯಾದಿ ಹೋದರೆ ಅವು ಹೊಟ್ಟೆಯನ್ನು ತೂರಿಕೊಂಡು ಜಾನುವಾರಿನ ಹೃದಯಕ್ಕೆ ಇರಿದು ಅಲ್ಲಿ ನಂಜುಂಟು ಮಾಡಿ ಮರಣದೆಡೆಗೆ ದಬ್ಬುತ್ತವೆ. ಪ್ರಪಂಚದಾದ್ಯಂತ ಸಹಸ್ರಾರು ಜಾನುವಾರುಗಳಲ್ಲಿ ಮರಣ ತರುವ ಈ ಕಾಯಿಲೆಯನ್ನು “ ಹಾರ್ಡ್ವೇರ್ ರೋಗ” ಅಥವಾ “ಕಬ್ಬಿಣ ರೋಗ” ಎಂದೂ ಕರೆಯುತ್ತಾರೆ. ಅನೇಕ ಸಲ ಮರಣೋತ್ತರ ಪರೀಕ್ಷೆಯಲ್ಲಿ ಮಾತ್ರ ಪತ್ತೆಯಾಗುವ ಈ ಕಾಯಿಲೆಯಲ್ಲಿ ಕೆಲವೊಮ್ಮೆ ರೋಗಲಕ್ಷಣಗಳು ಕಾಣಿಸಿಕೊಳ್ಳದೇ ಇರುವುದರಿಂದ ಪತ್ತೆ ಸಹ ಕಷ್ಟಕರ. ಅಪರೂಪವಾದರೂ ಸಹ ಜಾನುವಾರುಗಳ ಜೀವ ಹಿಂಡುವ ಮನುಷ್ಯರೇ ಕಾರಣವಾಗುವ ಈ ಕಾಯಿಲೆಯ ಬಗ್ಗೆ ತಿಳಿದುಕೊಳ್ಳುವುದು ಅವಶ್ಯ.

ಕಾರಣ:
ಜಾನುವಾರು ಕಟ್ಟಡ ಕಟ್ಟುವ ಸ್ಥಳದಲ್ಲಿ, ತುಕ್ಕು ಹಿಡಿದ ತಂತಿ ಬೇಲಿಯ ಸಮೀಪ ಮೇಯುವಾಗ ತುಂಡಾದ ತಂತಿ ಅಥವಾ ಚೂಪಾದ ಕಬ್ಬಿಣದ ವಸ್ತು ಹೊಟ್ಟೆ ಸೇರಬಹುದು.ಕೆಲವೊಮ್ಮೆ ರಸಮೇವು ತಯಾರಿಸುವಾಗ ಮೇವಿನ ಕಟಾವಣೆ ಸಮಯದಲ್ಲಿ ತುಕ್ಕು ಹಿಡಿದ ಸರಿಗೆ, ತಂತಿ ಇತ್ಯಾದಿಗಳು ಸೇರಿ ಮೇವನ್ನು ಸೇರಿ ಬಿಡಬಹುದು. ಬಡಪಾಯಿ ಜಾನುವಾರುಗಳು ಅವುಗಳ ಮಾಲಕರು ಸರಿಯಾಗಿ ನೋಡದೇ ಎಚ್ಚರವಿಲ್ಲದೇ ಹಾಕಿದ ಹಿಂಡಿಯನ್ನು ತಿನ್ನುವಾಗ ಅಗಿದು ತಿನ್ನದೇ ನುಂಗುವುದರಿಂದ ಅವುಗಳ ಹೊಟ್ಟೆಗೆ ಚೂಪಾದ ಕಬ್ಬಿಣದ ವಸ್ತು, ಮೊಳೆ, ಸೂಜಿ, ತಂತಿ ಇವು ಹೋಗಿ ದೊಡ್ಡ ಹೊಟ್ಟೆಯಾದ ರುಮೆನ್ ಸೇರಿಬಿಡುತ್ತವೆ. ಕೆಲವೊಮ್ಮೆ ಚೂಪಾದ ಗಾಜಿನ ಚೂರು ಸಹ ಮಾರಕವಾಗಬಲ್ಲದು. ಹಿಂಡಿಯನ್ನು ತಯಾರಿಸುವ ಕಾರ್ಖಾನೆಯ ಯಂತ್ರಗಳ ಸಣ್ಣ ಸಣ್ಣ ತುಂಡುಗಳು ಹಿಂಡಿಯಲ್ಲಿ ಮಿಶ್ರವಾಗಿ ಹೊಟ್ಟೆ ಸೇರಬಹುದು.

ಸಹಜವಾಗಿಯೇ ಲೋಹದ ವಸ್ತುಗಳು ಅವುಗಳ ಭಾರದಿಂದ ರುಮೆನ್ ಅಡಿಗಿರುವ ರೆಟಿಕ್ಯುಲಮ್ ಎಂಬ ಎರಡನೇ ಹೊಟ್ಟೆಗೆ ಹೋಗಿ ಬಿಡುತ್ತವೆ. ಕಾರಣ ಇವು ಮೆಲುಕಾಡಿಸುವಾಗ ಹೊರಗೆ ಬರದೇ ಉದರದೊಳಗೇ ಉಳಿದುಕೊಳ್ಳುತ್ತವೆ. ಇವು ಹೊಟ್ಟೆಯ ಸಂಕುಚನ ವಿಕಸನ ಕ್ರಿಯೆಯಿಂದ ವಫೆಯನ್ನು ಭೇದಿಸಿಕೊಂಡು ಹೃದಯದತ್ತ ನುಗ್ಗುತ್ತವೆ. ಕೆಲವೊಮ್ಮೆ ದನ ಗರ್ಭ ಧರಿಸಿದ್ದರೆ, ಕರು ಬೆಳೆಯುತ್ತಿದ್ದಂತೆ ಅದರ ಒತ್ತಡವು ಹೊಟ್ಟೆಯ ಮೇಲೆ ಬೀಳುವುದರಿಂದ ಹೃದಯದತ್ತ ಸಾಗುವ ಚೂಪಾದ ವಸ್ತುಗಳ ಚಲನೆ ಜಾಸ್ತಿಯಾಗುತ್ತದೆ. ಹೃದಯದ ಸುತ್ತ ಇರುವ ಪೆರಿಕಾರ್ಡಿಯಂ ಎಂಬ ಪದರವನ್ನು ಭೇಧಿಸಿದ ಸೂಜಿಗಳು ಹೃದಯದತ್ತ ನುಗ್ಗುವಾಗ ಅವುಗಳ ಜೊತೆಯೇ ಸಾಗುವ ಉದರದ ವಸ್ತುಗಳು ಅಲ್ಲಿ ನಂಜುಂಟು ಮಾಡುತ್ತವೆ. ನಂಜಿನ ವಿಷ ಹೃದಯ ಪದರದ ಉರಿಯೂತವನ್ನುಂಟು ಮಾಡಿ ಅದರ ದಪ್ಪವನ್ನು ಹೆಚ್ಚಿಸುತ್ತದೆ. ಇದನ್ನು ಪೆರಿಕಾರ್ಡೈಟಿಸ್ ಎನ್ನುತ್ತಾರೆ. ಕೀವು, ಸೂಕ್ಷಾಣುಗಳು, ರಕ್ತ ಇತ್ಯಾದಿಗಳು ಸೇರಿಕೊಂಡು ಹೃದಯ ಕೆಲಸ ಮಾಡುವುದನ್ನು ನಿಧಾನಗೊಳಿಸುತ್ತದೆ. ಕೆಲವೊಮ್ಮೆ ಮೊಳೆಯು ವಫೆಯನ್ನು ಭೇಧಿಸಿದ ಪರಿಣಾಮವಾಗಿ ಎದೆಗೂಡಿನಲ್ಲಿ ಹರ್ನಿಯಾ ಆಗುವ ಸಾಧ್ಯತೆ ಇದೆ.

ಲಕ್ಷಣಗಳು:
ಜಾನುವಾರುಗಳಲ್ಲಿ ಮೊದಲಿಗೆ ಹೃದಯದ ಮೇಲಿನ ಒತ್ತಡ ಜಾಸ್ತಿಯಾಗುತ್ತಿದ್ದಂತೆ ಅದರ ಬಡಿತ ಜಾಸ್ತಿಯಾಗಬಹುದು. ಹೃದಯವು ಬಡಿದು ಕೊಳ್ಳಲು ಸಾಕಷ್ಟು ಸ್ಥಳವಿಲ್ಲದೇ ಇರುವುದರಿಂದ, ಕ್ರಮೇಣ ಹೃದಯದ ಬಡಿತ ಕಡಿಮೆಯಾಗಬಹುದು. ಹೃದಯಕ್ಕೆ ಮತ್ತು ಹೃದಯವನ್ನು ಸುತ್ತುವರೆದ ಚೀಲಕ್ಕೆ ಆಗುವ ನಿರಂತರ ಘರ್ಷಣೆಯಿಂದ ಹೃದಯದ ಸಾಮರ್ಥ್ಯ ಕಡಿಮೆಯಾಗಬಹುದು. ಹೃದಯದ ಬಡಿತ ಮತ್ತು ಅದು ರಕ್ತವನ್ನು ಪಂಪು ಮಾಡುವ ಸಾಮರ್ಥ್ಯ ಕಡಿಮೆಯಾಗುತ್ತಿದ್ದಂತೆ, ಹೃದಯದ ಒಳಗೆ ಬರುವ ರಕ್ತದ ಪ್ರಮಾಣವೂ ಸಹ ಕಡಿಮೆಯಾಗುತ್ತದೆ. ರಕ್ತದಲ್ಲಿರುವ ರಕ್ತ ಸಾರವು ಬಸಿದು ಹೋಗಿ ಎದೆ ಗುಂಡಿಗೆಯ ಮತ್ತು ದವಡೆಗಳ ಕೆಳಗಿ ಬಾವು ಪ್ರಾರಂಭಾವಾಗುತ್ತದೆ. ಹೃದಯಕ್ಕೆ ರಕ್ತ ಸಾಗಿಸುವ ಅಬಿಧಮನಿಗಳ ಕ್ಷಮತೆ ಕಡಿಮೆಯಾಗಿ ರಕ್ತ ಅವುಗಳಲ್ಲಿ ನಿಂತು ಅವುಗಳು ಕುತ್ತಿಗೆ ಗದ್ದದ ಭಾಗದಲ್ಲಿ ಊದಿಕೊಳ್ಳಬಹುದು. ಜಾನುವಾರು ಬಹಳ ಎಚ್ಚರಿಕೆಯಿಂದ ನಿಧಾನವಾಗಿ ಕಷ್ಟಪಟ್ಟು ಹೆಜ್ಜೆ ಕಿತ್ತಿಡುತ್ತದೆ.

ನಂಜು ಜಾಸ್ತಿ ಆಗುತ್ತಿದ್ದಂತೆ ಕೆಲವೊಮ್ಮೆ ಶರೀರದ ತಾಪಮಾನ ಜಾಸ್ತಿಯಾಗಿ ಜಾನುವಾರು ಮೇವು ತಿನ್ನುವುದನ್ನು ಬಿಡಬಹುದು. ಎದೆಯ ಭಾಗದಲ್ಲಿ ನೋವು ಇರುವುದರಿಂದ ಮುಂದಿನ ಕಾಲುಗಳನ್ನು ಅಗಲ ಮಾಡಿಕೊಂಡು ನಿಲ್ಲಬಹುದು. ಉಸಿರಾಟ ಮಾಡಲು ಕಷ್ಟಪಡಬಹುದು ಅಥವಾ ಉಸಿರಾಟ ಜಾಸ್ತಿಯಾಗಬಹುದು. ಕೆಲವೊಮ್ಮೆ ಜಾನುವಾರು ನೋವಿನಿಂದ ನರಳಬಹುದು. ಏರು ಮತ್ತು ಇಳಿಜಾರಿನಲ್ಲಿ ಜಾನುವಾರು ನಡೆಯಲು ಕಷ್ಟಪಡಬಹುದು. ಆಗಾಗ ಹೊಟ್ಟೆಯುಬ್ಬರ ಮತ್ತು ತಾನೇ ಕಡಿಮೆಯಾಗುವಿಕೆಯನ್ನೂ ಸಹ ಗಮನಿಸಬಹುದು. ದುಗ್ಧರಸ ಗ್ರಂಥಿಗಳು ಸಹ ಊದಿಕೊಳ್ಳಬಹುದು. ರಕ್ತಹೀನತೆಯೂ ಸಹ ಕಾಣಿಸಿಕೊಳ್ಳಬಹುದು. ಆದರೆ ಈ ಎಲ್ಲಾ ಲಕ್ಷಣಗಳು ಇರಲೇಬೇಕೆಂದೇನೂ ಇಲ್ಲ. ರೋಗ ಕೊನೆಯ ಹಂತದಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುವುದೂ ಸಹ ಇದೆ.

ರೋಗ ಪತ್ತೆ ಮಾಡುವಿಕೆ:
ರೋಗಲಕ್ಷಣಗಳನ್ನು ಸೂಕ್ಷ್ಮವಾಗಿ ಗಮನಿಸುವುದರಿಂದ ಮತ್ತು ಜಾನುವಾರಿನ ವೃತ್ತಾಂತದಿ೦ದ ಪತ್ತೆಗೆ ಅನುಕೂಲವಾಗುತ್ತದೆ. ಹೊಟ್ಟೆಯ ಚೀಲದ ಚಲನೆ ಕಡಿಮೆಯಾಗುವುದು ಮತ್ತು ಮೇವು ತಿನ್ನದಿರುವುದು, ಬಿಟ್ಟು ಬಿಟ್ಟು ಬರುವ ಜ್ವರ ಮತ್ತು ಹೊಟ್ಟೆಯುಬ್ಬರ ಸಹ ರೋಗ ಗುರುತಿಸಲು ಸಹಕಾರಿ. ಎದೆಯ ಗುಂಡಿಗೆಯ ಬಾವು ಮತ್ತು ಗದ್ದದ ಬಾವು ಕೊನೆಯ ಹಂತದಲ್ಲಿ ಕಾಣಿಸಿಕೊಳ್ಳುವುದು ರೋಗ ಪತ್ತೆಗೆ ಸಹಕಾರಿಯಾದರೂ ಸಹ ಆಗ ಚಿಕಿತ್ಸೆಗೆ ಸ್ಪಂಧನೆ ಕಡಿಮೆ.
ತಜ್ಞ ಪಶುವೈದ್ಯರು ಹೃದಯ ಬಡಿತದ ಪರಿಶೀಲನೆ ಮಾಡುವ ಮೂಲಕ ರೋಗ ಪತ್ತೆ ಮಾಡಬಲ್ಲರು. ಲೋಹ ಪತ್ತೆ ಯಂತ್ರದಿಂದಲೂ ಸಹ ಪತ್ತೆಗೆ ಪ್ರಯತ್ನಿಸಬಹುದು. ಆದರೆ ಇದರಲ್ಲಿ ಚಿಕ್ಕ ಸೂಜಿ ಮತ್ತು ಮೊಳೆಯಿದ್ದಾಗ ಗೊತ್ತಾಗಲಿಕ್ಕಿಲ್ಲ. ಕೆಲವೊಮ್ಮೆ ಎಕ್ಸ್ ರೇ ಅಥವಾ ಅಲ್ಟ್ರಾಸೌಂಡ್ ಸಹ ಉಪಯೋಗಿಸಬೇಕಾಗಬಹುದು. ರಕ್ತದ ಪರೀಕ್ಷೆಯಲ್ಲಿ ಬಿಳಿರಕ್ತದ ಕಣಗಳ ಸಂಖ್ಯೆ ತುಂಬಾ ಜಾಸ್ತಿ ಇರುವುದನ್ನು ಸಹ ರೋಗಪತ್ತೆಗೆ ಬಳಸಬಹುದು.

ಚಿಕಿತ್ಸೆ:
ಇದರ ಚಿಕಿತ್ಸೆ ಕಷ್ಟಕರ. ಹೃದಯ ಎಷ್ಟರ ಮಟ್ಟಿಗೆ ತೊಂದರೆಗೊಳಗಾಗಿದೆ ಮತ್ತು ಯಾವಾಗ ರೋಗ ಪತ್ತೆಯಾಗಿದೆ ಎಂಬುದರ ಮೇಲೆ ಗುಣಮುಖವಾಗುವ ಸಾಧ್ಯತೆ ನಿಂತಿದೆ. ತಜ್ಞ ಪಶುವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಹೃದಯದ ಹತ್ತಿರವಿರುವ ಚೂಪಾದ ವಸ್ತುವನ್ನು ಹೊರತೆಗೆಯಬಲ್ಲರು. ಕೆಲವೊಮ್ಮೆ ಎದೆಗೂಡಿಗೆ ರಬ್ಬರಿನ ಚಿಕ್ಕ ಕೊಳವೆಯನ್ನು ಹಾಕಿ ಮೇಲಿಂದ ಮೇಲೆ ಅಲ್ಲಿ ಶೇಖರವಾಗಿರುವ ಕೀವು ಮತ್ತು ನೀರನ್ನು ತೆಗೆಯುವುದರಿಂದಲೂ ಸಹ ಜಾನುವಾರು ಗುಣವಾಗಬಲ್ಲದು.

ತಡೆಗಟ್ಟುವಿಕೆ:
ಈ ಕಾಯಿಲೆ ಬಂದ ಮೇಲೆ ಅನೇಕ ಸಲ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ ಜಾನುವಾರುಗಳು ಮರಣವನ್ನಪ್ಪುವುದರಿಂದ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಚಾರ ಮಾಡುವುದೊಳಿತು. ಪ್ರತಿದಿನ ಹಿಂಡಿ ಹಾಕುವಾಗ ಅದರಲ್ಲಿ ಕೈಯಾಡಿಸಿ, ಮೊಳೆ, ಸೂಜಿ ಅಥವಾ ಚೂಪಾದ ವಸ್ತುಗಳಿವೆಯೇ ಎಂದು ಪರಿಶೀಲಿಸುವುದು ಉತ್ತಮ. ಜಾನುವಾರು ಕಟ್ಟಡ ಕಟ್ಟುವ ಸ್ಥಳದಲ್ಲಿ, ತುಕ್ಕು ಹಿಡಿದ ತಂತಿ ಬೇಲಿಯ ಸಮೀಪ ಮೇಯದ ಹಾಗೆ ನೋಡಿಕೊಳ್ಳಬೇಕು. ಲೋಹಚುಂಬಕವನ್ನು ಜಾನುವಾರುಗಳಿಗೆ ನುಂಗಿಸುವ೦ತ ಪದ್ದತಿಯಿದೆ. ಕಬ್ಬಿಣದ ವಸ್ತುವಿದ್ದರೆ ಮಾತ್ರ ಅದನ್ನು ತಡೆಹಿಡಿಯುವ ಸಾಧ್ಯತೆ ಇದ್ದು ಸ್ಟೀಲ್ ಮತ್ತಿತರ ಲೋಹಗಳ ವಸ್ತುಗಳಿದ್ದರೆ ಲೋಹ ಚುಂಬಕ ಅಷ್ಟೇನೂ ಪ್ರಯೋಜನವಾಗಲಿಕ್ಕಿಲ್ಲ. ಇದನ್ನು “ಕೌ ಮ್ಯಾಗ್ನೆಟ್” ಎಂದು ಕರೆಯುತ್ತಿದ್ದು ಇದು ಅಮೆಝಾನ್ ಟೆಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ ಮತ್ತು ಇದರ ಬೆಲೆ ಸುಮಾರು ರೂ:500-00. ಜಾನುವಾರಿನ ಹೊಟ್ಟೆಗೆ ಲೋಹದ ಚೂಪಾದ ವಸ್ತುಗಳು ಹೋಗದ ಹಾಗೇ ನೋಡಿಕೊಳ್ಳುವುದು ಬಹಳ ಮುಖ್ಯ.
ಈ ಕುರಿತು ಇರುವ ಯುಟ್ಯೂಬ್ ವಿಡಿಯೋವನ್ನೂ ಸಹ ವೀಕ್ಷಿಸಿ
Leave a Comment