ಹಳಿಯಾಳ :- ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಜನರಿಗೆ ಮನರಂಜನೆಗಾಗಿ ಅಲ್ಲದೇ ಪರಮಾತ್ಮನನ್ನು ತಲುಪಲು ಇರುವ ಮಾರ್ಗವಾಗಿದೆ, ಇಂತಹ ಸಂಗೀತದಲ್ಲಿ ದಿಗ್ಗಜರಾಗಿದ್ದ, ಸಂಗೀತ ಮಾರ್ತಾಂಡ ಜಸರಾಜಜಿ ನಿಧನದಿಂದ ಸಂಗೀತ ಕ್ಷೇತ್ರ ಬಡವಾಗಿದೆ ಎಂದು ಹಳಿಯಾಳದವರಾದ ಬೆಂಗಳೂರಿನ ಗೊಸಾವಿ ಮಹಾಸಂಸ್ಥಾನ ಮಠದ ಮರಾಠಾ ಜಗದ್ಗುರು, ವೇದಾಂತಾಚಾರ್ಯ, ಗಾನಯೋಗಿ ಮಂಜುನಾಥ ಮಹಾರಾಜ ಕಂಬನಿ ಮಿಡಿದಿದ್ದಾರೆ.

ಈ ಕುರಿತು ಹಳಿಯಾಳ ಮಾಧ್ಯಮಗಳಿಗೆ ಹೊರಡಿಸಿದ ಶೋಕ ಸಂದೇಶದಲ್ಲಿ ವೇದಿಕೆಯನ್ನು ದೇವಸ್ಥಾನ ಎಂದು ಭಾವಿಸಿದ್ದ, ಆಧ್ಯಾತ್ಮಿಕತೆಯಲ್ಲೂ ಹೆಸರಾಗಿದ್ದ ಅವರು ಸಂಗೀತ ಕ್ಷೇತ್ರದ ಸಂತ ಗಾಯಕರಾಗಿದ್ದರು ಅವರ ಆತ್ಮ ಪರಮಾತ್ಮನಲ್ಲಿ ಲೀನವಾಗಲಿ ಎಂದು ಪ್ರಾರ್ಥಿಸಿದ್ದಾರೆ.
ಸ್ವರ ತರಂಗಗಳ ಸೂಕ್ಷ್ಮತೆಯನ್ನು ತಿಳಿಯಬಲ್ಲ ವಿಶೇಷಜ್ಞರಾಗಿದ್ದ ಜಸರಾಜಜಿಯವರ ಓಂ ನಮೋ ಭಗವತೆ ವಾಸುದೇವಾಯ, ಶ್ರೀ ಅನಂತಹರಿ ನಾರಾಯಣಾಯ, ಮಾತಾಕಾಲಿಕಾ, ಮಿರಾ ಭಜನ್ಸ್ ಎಂದಿಗೂ ಎಲ್ಲರ ಮನದಲ್ಲಿ ಉಳಿಯುವ ಸರ್ವಕಾಲಿಕ ಹಚ್ಚಹಸಿರಾಗಿರುವ ಪ್ರಮುಖ ಹಾಡುಗಳಾಗಿವೆ ಎಂದ ಅವರು ದೇಶದ ಪ್ರಚಲಿತ ಪ್ರಸಿದ್ದ ಗಾಯಕರಾದ ಸಪ್ತರ್ಶಿ ಚಕ್ರವರ್ತಿ, ಕಲಾ ರಾಮನಾಥ, ಸಂಜೀವ ಅಭ್ಯಂಕರ, ಅನುರಾಧಾ ಪಡವಾಲ, ಸಾಧನಾ ಸಂಗಮ ಸೇರಿದಂತೆ ಪ್ರಮುಖರು ಅವರ ಶಿಷ್ಯರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಹಿಂದೂಸ್ಥಾನಿ ಸಂಗೀತ ಮನಸ್ಸಿಗೆ ಶಾಂತಿ, ಸಮಾಧಾನ, ಮನಶ್ಯಾಂತಿ ನೀಡುವ ಮಾರ್ಗವಾಗಿತ್ತು ಇಂತಹ ಶಾಸ್ತ್ರೀಯ ಸಂಗೀತವನ್ನು ದೇಶ, ವಿದೇಶಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿದ್ದ ಮಹಾನ್ ಗಾಯಕ ಜಸರಾಜಿ ಅವರ ಸ್ಥಾನವನ್ನು ಯಾರಿಂದಲೂ ಭರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಿಸಿರುವ ಅವರು ಭಾರತ ದೇಶದ ಹಿಂದುಸ್ಥಾನಿ, ಶಾಸ್ತ್ರೀಯ ಸಂಗೀತದ ಮೇರುಮಣಿ, ಸಂಗೀತ ಮಾರ್ತಾಂಡ ಪಂಡಿತ ಜಸರಾಜಜೀ ಅವರ ನಿಧನ ಸಂಗೀತ ಲೋಕಕ್ಕೆ ದೊಡ್ಡ ಆಘಾತ ನೀಡಿದೆ ಎಂದು ಮಂಜುನಾಥ ಮಹಾರಾಜರು ಸಂತಾಪ ಸೂಚಿಸಿದ್ದಾರೆ.
Leave a Comment