ಭಾರತ ಹಬ್ಬಗಳ ದೇಶ. ಇಲ್ಲಿ ವರ್ಷದ ೧೨ ತಿಂಗಳುಗಳಲ್ಲಿಯೂ ಒಂದಲ್ಲ ಒಂದು ರೀತಿಯ ಹಬ್ಬಗಳು ನಡೆಯುತ್ತಲೇ ಇರುತ್ತದೆ. ಇವು ಕೇವಲ ಧಾರ್ಮಿಕ ಆಚರಣೆಗಳಾಗಿರದೆ, ಸಾಮಾಜಿಕ ಹಾಗೂ ಮಾನಸಿಕ ಹಿನ್ನೆಲೆಯನ್ನೂ ಒಳಗೊಂಡಿದೆ. ಹೀಗಾಗಿಯೇ ಭಾರತ ಇಂದಿಗೂ ವಿಶ್ವದಲ್ಲಿ ಒಂದು ವಿಶಿಷ್ಟ ದೇಶವಾಗಿ ತನ್ನ ಛಾಪನ್ನು ಉಳಿಸಿಕೊಂಡಿದೆ. ಇಲ್ಲಿ ಬಹುತೇಕ ಹಬ್ಬಗಳು ಅವರವರ ಮನೆಗಳಲ್ಲಿಯೇ ಆಚರಿಸಲ್ಪಟ್ಟರೆ ಇನ್ನೂ ಕೆಲವು ಹಬ್ಬಗಳು ಸಾರ್ವಜನಿಕವಾಗಿ ಆಚರಿಸಲ್ಪಡುತ್ತದೆ. ಅಂಥವುಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವುದು ಗಣೇಶ್ ಚತುರ್ಥಿ, ನಂತರದಲ್ಲಿ ಹೋಳಿ,ನವರಾತ್ರಿ ಹಾಗೂ ಇತರ ಹಬ್ಬಗಳು. ಈ ವರ್ಷದಲ್ಲಿ ಕೋರೋಣ ಹಾವಳಿಯ ನಡುವೆಯೆ ಗಣಪ ಮತ್ತೆ ಬಂದಿದ್ದಾನೆ. ಭಾರತದೆಲ್ಲೆಡೆ ಅತ್ಯಂತ ವಿಜೃಂಭಣೆಯಿಂದ ಆಚರಿಸುವ ಈ ಹಬ್ಬಕ್ಕೆ ಈ ಬಾರಿ ಸಾರ್ವಜನಿಕವಾಗಿ ಹೊಡೆತ ಬಿದ್ದಿದೆಯಾದರೂ ಜನರು ಆಸ್ಥೆಯಿಂದ ತಮ್ಮ ತಮ್ಮ ಮನೆಗಳಲ್ಲಿ ಆಚರಿಸಿಕೊಳ್ಳುವುದಕ್ಕೆ ಅಡ್ಡಿಯೇನಿಲ್ಲ. ನೆಚ್ಚಿನ ಓದುಗರೆಲ್ಲರಿಗೂ ಮೊದಲನೆಯದಾಗಿ ಗಣೇಶ್ ಚತುರ್ಥಿಯ ಶುಭ ಕಾಮನೆಗಳು.

ಸ್ನೇಹಿತರೇ , ಈ ಗಣೇಶ ಚತುರ್ಥಿ ಎಂಬುದು ಭಾರತದಲ್ಲಿ ಅತೀ ದೊಡ್ಡ ಹಬ್ಬವಾಗಲು ಕಾರಣ ಇದನ್ನು ಜನ ಸಾರ್ವಜನಿಕವಾಗಿ ಆಚರಿಸುತ್ತ ಬಂದಿರುವುದು. ಆದರೆ ಈ ಸಾರ್ವಜನಿಕ ಗಣೇಶೋತ್ಸವ ಎಂಬುದು ಮೊದಲಿನಿಂದಲೂ ಬಂದ ಪದ್ದತಿಯಲ್ಲದಿದ್ದರೂ ಸುಮಾರು ೧೨೫ ವರ್ಷಗಳಿಗೂ ಮೀರಿದ ಇತಿಹಾಸವನ್ನಂತೂ ಹೊಂದಿದೆ. ಹೌದು ನಾವೆಲ್ಲಾ ಶೃದ್ಧಾ ಭಕ್ತಿಯಿಂದ ಆಚರಿಸಲ್ಪಡುವ ವಿಘ್ನನಿವಾರಕನ ಈ ಉತ್ಸವ ಮೊದಲ ಬಾರಿಗೆ ಸಾರ್ವಜನಿಕವಾಗಿ ಆಚರಿಸಲ್ಪಟ್ಟದ್ದು ೧೮೯೩ರಲ್ಲಿ . ಅದಕ್ಕಿಂತಲೂ ಹಿಂದೆ ಶಿವಾಜಿ ಮಹಾರಾಜರ ಕಾಲದಲ್ಲಿ ದೇವಾಲಯಗಳಲ್ಲಿ ಆಚರಿಸುತ್ತಿದ್ದರು ಎಂಬ ಉಲ್ಲೇಖಗಳು ಕಂಡುಬರುತ್ತದೆಯಾದರೂ ಜನರೆಲ್ಲರೂ ಗುಂಪುಗೂಡಿ ಗುಂಜಾಧಿಪತಿಯನ್ನು ಸ್ಥಾಪಿಸಿ ಪೂಜಿಸುವ ಪರಿಕ್ರಮ ಕಂಡುಬರುವುದು ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ. ಇದಕ್ಕೆ ಅಂಕಿತ ಹಾಕಿ ಮುನ್ನುಡಿ ಬರೆದವರು ಲೋಕಮಾನ್ಯರೆಂದೇ ಖ್ಯಾತರಾದ ಬಾಲಗಂಗಾಧರ ತಿಲಕರು.
ಸ್ವಾತಂತ್ರ್ಯ ಹೋರಾಟ ಹಾಗೂ ಗಣೇಶೋತ್ಸವ: ಭಾರತದಲ್ಲಿ ರಾಜ ಮಹಾರಾಜರ ಕಾಲದಿಂದಲೂ ಶುರುವಾದ ಇಂಗ್ಲೀಷರ ವಿರುದ್ದದ ಹೋರಾಟ ಕಾವು ಪಡೆದುಕೊಂಡಿದ್ದು ಮಾತ್ರ ೧೮೫೭ರ ಸಿಪಾಯಿದಂಗೆಯ ಬಳಿಕವೇ. ಮಂಗಲಪಾಂಡೆ ಹಚ್ಚಿದ ಕಿಚ್ಚು ನಂತರದ ದಿನಗಳಲ್ಲಿ ಹೊತ್ತಿ ಉರಿದಿದ್ದು ಲಾಲ್,ಬಾಲ್,ಪಾಲ್ ಎಂಬ ಮೂರು ಅನರ್ಘ್ಯ ರತ್ನಗಳಿಂದ. ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಳಿಕ ಎಚ್ಛೆತ್ತುಕೊಂಡ ಬ್ರಿಟಿಷ ಕಂಪನಿ ಸರ್ಕಾರ ಭಾರತೀಯರಿಗೆ ಕೆಲವು ಆಶ್ವಾಸನೆಗಳನ್ನು ನೀಡಿತು. ಅವುಗಳಲ್ಲಿ ಒಂದು ಭಾರತೀಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದಿಲ್ಲ ಎಂಬುದು. ಜೊತೆಗೆ ಈ ಸಂಗ್ರಾಮದ ಬಳಿಕ ಅದು ಭಾರತೀಯರು ಯಾವುದೇ ಸಭೆ ಸಮಾರಂಭಗಳಂತಹ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸುವಂತಿಲ್ಲ ಎಂಬ ಕಾಯಿದೆಯನ್ನೂ ತಂದಿತ್ತು. ಹೀಗಾಗಿ ಭಾರತೀಯರು ಒಗ್ಗಟ್ಟಾವುದು ಬಹಳ ಕಷ್ಟದ ಕೆಲಸವಾಗಿತ್ತು. ಭಾರತೀಯರು ಒಂದುಗೂಡದೆ ಸ್ವಾತಂತ್ರ್ಯ ಹೋರಾಟದ ರೂಪುರೇಷೆ ಸಿದ್ಧಗೊಳಿಸುವುದು ಅಸಾಧ್ಯದ ಮಾತೇ ಆಗಿತ್ತು. ಆದ್ದರಿಂದ ಬಾಲಗಂಗಾಧರ ತಿಲಕರು ಭಾರತೀಯ ಧಾರ್ಮಿಕತೆಯ ಆಧಾರದ ಮೇಲೆ ಗಣೇಶ ಚತುರ್ಥಿಯನ್ನು ಸಾರ್ವಜನಿಕವಾಗಿ ಆಚರಿಸಲು ತೀರ್ಮಾನಿಸಿದರು. ಕೂಡಲೇ ಕಾರ್ಯೋನ್ಮತ್ತರಾದ ಅವರು ಮುಂಬೈ-ಪುಣೆಯ ಗಲ್ಲಿ-ಗಲ್ಲಿ,ಮನೆ ಮನೆಗಳನ್ನು ತಿರುಗಿದರು. ತಮ್ಮ ಯೋಜನೆಯನ್ನು ಜನರ ಮನೆಯಂಗಳಕ್ಕೆ ಕೊಂಡೊಯ್ದರು. ಅದರಲ್ಲೂ ಯುವ ತರುಣರಿಗೆ ಬಹಳ ಮುತುವರ್ಜಿಯಿಂದ ಮನದಟ್ಟು ಮಾಡಿಸಿದರು. ಈ ಎಲ್ಲದರ ಪ್ರತಿಫಲವಾಗಿ ೧೮೯೩ರಂದು ಪುಣೆಯ ಒಂದು ಹಳ್ಳಿಯಲ್ಲಿ ಮೊದಲ ಸಾರ್ವಜನಿಕ ಗಣೇಶೋತ್ಸವ ಸಂಪನ್ನಗೊಂಡಿತು.
ಈ ಉತ್ಸವ ಬರೀ ಧಾರ್ಮಿಕ ಹಬ್ಬವಾಗಿರದೇ ಅಲ್ಲಿ ಭಕ್ತಾದಿಗಳಿಗೆ ದೇಶಭಕ್ತಿಯ ಪಾಠವನ್ನೂ ಮಾಡಲಾಯ್ತು. ಅದರಲ್ಲೂ ವಿಶೇಷವಾಗಿ ಸ್ವದೇಶೀ ಮಂತ್ರವನ್ನು ಜಪಿಸಲಾಯ್ತು. ಎಂತ ಅದ್ಭುತವಾದ ಆಲೋಚನೆ ನೋಡಿ. ಧಾರ್ಮಿಕ ಪಾಠ-ಪ್ರವಚನದ ಹೆಸರಿನಲ್ಲಿ ದೇಶಪ್ರೇಮದ,ಸ್ವಾತಂತ್ರ್ಯ ಹೋರಾಟದ ಪ್ರವಚನಗಳು ನಡೆಯುತ್ತಿದ್ದವು. ವೇದ ಮಾತ್ರಘೋಷಗಳು ಮೊಳಗಬೇಕಾದ ಜಾಗದಲ್ಲಿ ಸ್ವದೇಶೀ ಆಂದೋಲನದ ಉದ್ಘೋಷಗಳು ಕೇಳಿಬಂದವು. ಇವೆಲ್ಲಾ ನಡೆದದ್ದು ಎಂತ ಸಮಯದಲ್ಲಿ ಗೊತ್ತೇನು?…..ಕಂಪನಿ ಸರ್ಕಾರದ ಒಬ್ಬ ಪೊಲೀಸ್ ಪೇದೆ ಪಕ್ಕದ ಬೀದಿಯಲ್ಲಿ ಓಡಾಡಿದರೂ ಜನರೆಲ್ಲರೂ ಇಡೀ ದಿನ ಮನೆಯಿಂದ ಹೊರಬರಲೂ ಹೆದರುತ್ತಿದ್ದ ಕಾಲದಲ್ಲಿ….
ಬಾಲ ಗಂಗಾಧರ ತಿಲಕರು ಎಲ್ಲ ಕಡೆಯೂ ತಾವೇ ಖುದ್ದಾಗಿ ಹೋಗಿ ಭಾಷಣ ಮಾಡಲಾಗುವುದಿಲ್ಲ ಎಂಬ ಕಾರಣಕ್ಕೆ ತಮ್ಮ “ಕೇಸರಿ” ಪತ್ರಿಕೆಯನ್ನು ಈ ಎಲ್ಲ ಸಂಘ ಸಂಸ್ಥೆಗಳಿಗೆ ಕಳುಹಿಸುತ್ತಿದ್ದರು. ಈ ಅನಾಮಧೇಯ ಸ್ವಾತಂತ್ರ್ಯ ಹೋರಾಟದ ತಯಾರಿ ಎಷ್ಟರ ಮಟ್ಟಿಗೆ ಫಲಪ್ರದವಾಯಿತೆಂದರೆ , ಇಂಗ್ಲೀಷರು ನಮ್ಮ ಕಚ್ಚಾ ವಸ್ತುಗಳನ್ನೇ ಬಳಸಿ ಮಾಡುತ್ತಿದ್ದ ವಸ್ತುಗಳಿಗೆ ಮಾರುಕಟ್ಟೆಯೇ ಇಲ್ಲವಾಯಿತು. ಯುರೋಪ್ ನ ಮಿಲ್ ಗಳಲ್ಲಿ ತಯಾರಾಗುತ್ತಿದ್ದ ರೆಡಿಮೇಡ್ ಬಟ್ಟೆಗಳನ್ನು ಜನ ಮೂಸಿಯೂ ನೋಡದಂತಾದರು. ಜನ ಕೈಮಗ್ಗದಿಂದ ಮಾಡಿದ ಖಾದೀ ಉಡುಪಗಳನ್ನೇ ಧರಿಸತೊಡಗಿದರು. ಇದರ ತತ್ಪರಿಣಾಮವಾಗಿ ಕಂಪನಿ ಸರ್ಕಾರಕ್ಕೆ ಹೋಗುತ್ತಿದ್ದ ದೊಡ್ಡ ಪ್ರಮಾಣದ ಹಣದ ಹರಿವು ನಿಂತುಹೋಯ್ತು. ಈ ಸಮಯದಲ್ಲಿಯೇ ಅದು ಬಂಗಾಳ ವಿಭಜನೆಯ ನಿರ್ಧಾರಕ್ಕೆ ಬಂದಿದ್ದು.
ಇತ್ತ ಬಾಲಗಂಗಾಧರ ತಿಲಕರು ಪಶ್ಚಿಮ ಭಾರತದಲ್ಲಿ ಈ ಹೋರಾಟದ ಮುಂದಾಳತ್ವ ವಹಿಸಿದರೆ ಅತ್ತ ಉತ್ತರಭಾರತದಲ್ಲಿ ಪಂಜಾಬ ನ ಬಿಪಿನ ಚಂದ್ರಪಾಲ್ ಹಾಗೂ ಪೂರ್ವ ಭಾರತದಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿಗಳು ನಾಯಕರಾಗಿ ಬಂದರು. ತಿಲಕರು ಎಲ್ಲ ಕಡೆಗಳಿಗೆ ತಮ್ಮ “ಕೇಸರಿ”ಯನ್ನು ಕಳುಹಿಸಿ ಮುಂದಿನ ಯೋಜನೆಯ ಕುರಿತು ತಿಳಿಸುತ್ತಿದ್ದ್ದರು. ಇದನ್ನರಿತ ಸರ್ಕಾರ ಕೇಸರಿ ಪತ್ರಿಕೆಯನ್ನು ನಿಷೇಧಿಸಿತು. ಆದರೂ ತಿಲಕರು ಪಾತ್ರಗಳ ಮೂಲಕ ತಮ್ಮ ಸಂದೇಶವನ್ನು ಎಲ್ಲಾ ಗಣೇಶೋತ್ಸವ ಸಮಿತಿಗಳಿಗೆ ತಲುಪಿಸುತ್ತಿದ್ದರು. ಹೀಗೆ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೂ ಗಣೇಶ ಚತುರ್ಥಿಗೂ ಅವಿನಾಭಾವ ಸಂಬಂಧವಿದೆ. ಇನ್ನೂ ಹೆಚ್ಚಿನದಾಗಿ ಹೇಳಬೇಕೆಂದರೆ ವಿಘ್ನೇಶ್ವರನೂ ಸ್ವಾತಂತ್ರ್ಯ ಹೋರಾಟ್ದದಲ್ಲಿ ಪಾಲ್ಗೊಂಡಿದ್ದಾನೆ.
ಸ್ನೇಹಿತರೇ , ಅಂದು ಸ್ವಾತಂತ್ರ್ಯದ ಸಂಘಟನೆಗಾಗಿ ಹುಟ್ಟಿಕೊಂಡ ಗಣೇಶೋತ್ಸವ ಇಂದು ಹಣ ಮಾಡುವ ದಂಧೆಯಾಗಿ ಬದಲಾಗಿದೆ. ಮೋಜುಮಸ್ತಿಗಳು ಗಣೇಶೋತ್ಸವದ ಭಾಗವಾಗಿದೆ. ಗಣೇಶನ ವಿಸರ್ಜನೆಯ ವೇಳೆ ಡಿಜೆ ಹಾಕಿ, ಕುಡಿದು ಕುಪ್ಪಳಿಸಿ ಮಜಾಮಾಡುವ ಸಂಸ್ಕೃತಿ ಬೆಳೆಯುತ್ತಿದೆ. ಹೀಗೇಯೇ ಮುಂದುವರೆದರೆ ಲೋಕಮಾನ್ಯರು ಕಂಡ ಕನಸು ಹಾಕಿಕೊಟ್ಟ ಮಾರ್ಗ ಎರಡೂ ಅರ್ಥವಿಲ್ಲದ ಮಳ್ಳು ಆಚರಣೆಗಳಾಗುತ್ತದೆ.ಮಾರಿಗೊಂದರಂತೆ ಗಣೇಶ ಪ್ರತಿಷ್ಠಾಪನೆಯಾಗುತ್ತಿದ್ದಾನೆ. ಅದೂ ಎಷ್ಟು ದೊಡ್ಡ ಮಟ್ಟದಲ್ಲಿ ಎಂದರೆ ಪ್ರತಿವರ್ಷ ಕೇವಲ ಮುಂಬೈ ಒಂದರಲ್ಲೇ ೧೫೦೦೦೦ ಕ್ಕೂ ಮೀರಿದ ಗಣೇಶನ ಮೂರ್ತಿಗಳ ವಿಸರ್ಜನೆಯಾಗುತ್ತದೆ. ಅಂದರೆ ಪೂರ್ತಿ ಭಾರತದಲ್ಲಿ ಈ ಸಂಖ್ಯೆ ಅದೆಷ್ಟು ದೊಡ್ಡದಾಗಿರಬಹುದೆಂದು ನೀವೇ ಊಹಿಸಿ.. ಬೇಸರದ ಸಂಗತಿ ಎಂದರೆ ಈಗ ಗಣೇಶ ಪರಿಸರ ಸ್ನೇಹಿಯಾಗಿಲ್ಲ.. ಬದಲಾಗಿ ಪರಿಸರ ವಿರೋಧಿಯಾಗಿಯಾಗಿದ್ದಾನೆ. ಇಂತವುಗಳು ಮೊದಲು ಕೊನೆಯಾಗಬೇಕು, ಅಂದಾಗ ಮಾತ್ರ ಆಚರಣೆಯ ಮೂಲೋದ್ದೇಶ ಈಡೇರಲು ಸಾಧ್ಯ.
ಭಾರತದಲ್ಲಿ ಮಹಾರಾಷ್ಟ್ರ, ಮಧ್ಯಪ್ರದೇಶ , ಗುಜರಾತ್, ಕರ್ನಾಟಕ,ಆಂಧ್ರಪ್ರದೇಶ,ತೆಲಂಗಾಣ, ಒರಿಸ್ಸಾ, ಕೇರಳ, ತಮಿಳುನಾಡು, ಪಂಜಾಬ, ಬಿಹಾರ್ ಹಾಗೂ ಪಶ್ಚಿಮಬಂಗಾಳ ಗಣಪನ ಹಬ್ಬದಲ್ಲಿ ಮಿಂದೇಳುವ ದೊಡ್ಡ ರಾಜ್ಯಗಳು. ಈ ರಾಜ್ಯಗಳಲ್ಲಿ ಬಹಳ ವಿಜ್ರ0ಭನೆ ಹಾಗೂ ಅದ್ಧೂರಿಯಿಂದ ವಿಘ್ನ ನಿವಾರಕ ಪೂಜಿಸಲ್ಪಡುತ್ತಾನೆ. ಭಾರತವಷ್ಟೇ ಅಲ್ಲದೆ ಭೂತಾನ್,ನೇಪಾಳ,ಆಸ್ಟ್ರೇಲಿಯಾ,ನ್ಯೂಜಿಲ್ಯಾಂಡ್ , ಕೆನಡ,ಮಲೇಷ್ಯಾ, ಟ್ರಿನಿಟಾಡ್, ಗಯಾನ, ಕೆರಿಬಿಯನ್,ಫಿಜಿ,ಮಾರಿಷಸ್, ದಕ್ಷಿಣ ಆಫ್ರಿಕಾ, ಹಾಗೂ ಯುರೋಪ್ನಲ್ಲಿಯೂ ಗಜಾನನ ಅವತರಿಸುತ್ತಾನೆ. ಈದೀಗ ಹಬ್ಬವೂ ಮತ್ತೆ ಬಂದಿದೆ,ಹಿಂದೂಗಳೆಲ್ಲ ಒಂದಾಗುವ ಕಾಲವೂ ಕೂಡ….
Leave a Comment