ಸಿದ್ದಾಪುರ:
ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮರು ಮೌಲ್ಯಮಾಪನದ ಬಳಿಕ ತಾಲೂಕಿನ ಮತ್ತೀಹಳ್ಳಿಯ ಪ್ರತಿಭಾವಂತ ವಿದ್ಯಾರ್ಥಿ ಸಾತ್ವಿಕ್ ಹೆಗಡೆ ರಾಜ್ಯದಲ್ಲಿ ಪಡೆದಿದ್ದ ಏಳನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಜಿಗಿಯುವ ಮೂಲಕ ಗಮನ ಸೆಳೆದಿದ್ದಾನೆ.
ಕಾನಸೂರಿನ ಕಾಳಿಕಾಂಬಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಸಾತ್ವಿಕ್ ಕಳೆದ ತಿಂಗಳು ಪ್ರಕಟಗೊಂಡ ಫಲಿತಾಶಂದಲ್ಲಿ 618 ಅಂಕ ಪಡೆದಿದ್ದರು. ವಿಜ್ಞಾನ ಹಾಗೂ ಪ್ರಥಮ ಭಾಷೆ ಕನ್ನಡದಲ್ಲಿ ಗರಿಷ್ಠ ಅಂಕ ಬರಬೇಕಿತ್ತು ಎಂದು ಮರು ಮೌಲ್ಯಮಾಪನಕ್ಕೆ ಹಾಕಿದ್ದನು. ಅದರ ಫಲಿತಾಂಶ ಪ್ರಕಟಗೊಂಡಿದ್ದು, ನಾಲ್ಕು ಅಂಕ ಹೆಚ್ಚಳ ಬಂದು 622 ಅಂಕ ಗಳಿಸಿದ್ದಾನೆ. ಇದರಿಂದ ರಾಜ್ಯದಲ್ಲಿ ನಾಲ್ಕನೇ ಸ್ಥಾನ ಪಡೆದಂತಾಗಿದೆ.

ಪ್ರಥಮ ಭಾಷೆ ಕನ್ನಡಕ್ಕೆ 125ಕ್ಕೆ 124, ವಿಜ್ಞಾನಕ್ಕೆ 100ಕ್ಕೆ 98 ಅಂಕ ಪಡೆದರೆ, ಹಿಂದಿ, ಇಂಗ್ಲೀಷ್, ಗಣಿತ, ಸಮಾಜ ವಿಜ್ಞಾನಗಳಲ್ಲಿ ಶೇ.100 ಸಾಧನೆ ಮಾಡಿದ್ದಾನೆ. ಯಾವುದೇ ಟ್ಯೂಶನ್ಗೆ ಕೂಡ ಹೋಗದೇ, ಶಾಲೆಯಲ್ಲಿ ಶಿಕ್ಷಕರು ಹೇಳಿಕೊಟ್ಟ ಪಾಠವನ್ನು ಅಂದೇ ಒಪ್ಪಿಸುತ್ತಿದ್ದ ಸಾತ್ವಿಕ್, ಶಿಕ್ಷಕರ, ಪಾಲಕರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಸಾತ್ವಿಕ್ ಹರ್ಷ ವ್ಯಕ್ತಪಡಿಸಿದ್ದಾನೆ.
ರಾಜ್ಯ ಮಟ್ಟದ ಮಹಾಭಾರತ ಹಾಗೂ ರಾಮಾಯಣ ಪರೀಕ್ಷೆಯಲ್ಲಿ ರಾಜ್ಯಕ್ಕೇ ದ್ವಿತೀಯ ಸ್ಥಾನ ಪಡೆದಿದ್ದ ಈತ ರಾಜ್ಯ ಮಟ್ಟದ ಚಿಂತನ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಕೂಡ ಪಡೆದಿದ್ದನು. ರಾಮಾಯಣ ಮಹಾ ಭಾರತದ ಪಾತ್ರಗಳ ಸಮಗ್ರ ವಿವರವನ್ನು ಪಟಪಟನೇ ಹೇಳಬಲ್ಲ ಈತನಿಗೆ ಕಳೆದ ವರ್ಷ ಜಿಲ್ಲಾ ಮಟ್ಟದ ಮಕ್ಕಳ ವಿಶೇಷ ಪುರಸ್ಕಾರ ಕೂಡ ಲಭಿಸಿತ್ತು. ಸಾತ್ವಿಕ್ ಹೆಗಡೆ ಪ್ರಗತಿಪರ ರೈತ ಶ್ರೀಕಾಂತ ಹೆಗಡೆ ಮತ್ತೀಹಳ್ಳಿ ಹಾಗೂ ಸುವರ್ಣಾ ಹೆಗಡೆ ಹುಕ್ಲಮಕ್ಕಿ ಅವರ ಪುತ್ರ.
Leave a Comment