200 ಕೂಲಿಯಾಳಿಗೆ 17 ಸಾವಿರ ಸಂಬಳ – ಸಿಮೆಂಟ್ ಚೀಲಕ್ಕೆ 250, ಕೆಂಪು ಕಲ್ಲಿಗೆ 11 ರುಪಾಯಿ ಬೆಲೆ ನಿಗದಿ. ಇದೆಂತಾ ಉದ್ಯೋಗ ಖಾತ್ರಿನಾ..? ಇಲ್ಲ ಕತ್ರಿನಾ..?
ಹೊನ್ನಾವರ – ಕೋಟಿ ಮೊತ್ತ ಮಂಜೂರಿ ಪಡಕೊಂಡು ಲಕ್ಷ ರೂಪಾಯಿ ಕೆಲಸ ಮಾಡಿದ್ದನ್ನು ಕೇಳಿದ್ದೇವೆ. ಆದರೆ ನರೇಗಾದಡಿ ಲಕ್ಷಾಂತರ ರೂಪಾಯಿ ಮೌಲ್ಯದ ಕೆಲಸ ಮಾಡಿ, ಮಾಡಿದ ಕೆಲಸಕ್ಕೆ ದಿನಗೂಲಿಯೂ ಸಿಗದೇ ಕೆಲಸಗಾರರು ಪರದಾಡುತ್ತಿರುವ ಅಪರೂಪದ ಪ್ರಕರಣ ತಾಲೂಕಿನ ಖರ್ವಾದಲ್ಲಿ ಬೆಳಕಿಗೆ ಬಂದಿದೆ.

ಹಸಿಮನೆಯಲ್ಲಿ ಮಳೆಯ ನೀರಿಗೆ ಕೊಚ್ಚಿಹೋಗಿದ್ದ ಹಳ್ಳದ ತಡೆಗೋಡೆಯನ್ನು ನರೇಗಾದಡಿ ನಿರ್ಮಿಸಲು ಗ್ರಾಮಪಂಚಾಯತ ಮುಂದಾಗಿದ್ದು ಇದೇ ಊರಿನ ಹತ್ತಕ್ಕೂ ಹೆಚ್ಚು ಮಂದಿಯ ಉದ್ಯೋಗ ಕಾರ್ಡ ಪಡಕೊಂಡು ಸ್ಥಳದ ಜಿ.ಪಿ.ಎಸ್ ಮಾಡಿ ಕೆಲಸ ಮಾಡಲು ಅಧಿಕಾರಿಗಳು ಸೂಚಿಸಿದ್ದರು. ಪಂಚಾಯತದವರು ತಮ್ಮ ಖಾತೆಗೆ ಕೂಲಿ ಹಣವನ್ನು ಹಾಕಲಿದ್ದಾರೆಂದು ನಂಬಿ ಕೆಲಸದಲ್ಲಿ ತೊಡಗಿದ ಊರವರು 20 ಕ್ಕೂ ಹೆಚ್ಚುದಿನ 200 ಆಳುಗಳಿಗೂ ಹೆಚ್ಚು ಕೆಲಸಮಾಡಿದ್ದಾಗಿ ಹೇಳುತ್ತಿದ್ದಾರೆ. ಆದರೆ ಕೆಲಸ ಮುಗಿದಮೇಲೆ ಬಂದು ಟೇಪ್ ಹಿಡಿದ ಇಂಜನೀಯರ್ ಕೇವಲ 80 ಸಾವಿರ ರುಪಾಯಿ ಕೆಲಸವಾಗಿದೆ 17 ಸಾವಿರ ರುಪಾಯಿ ಕೂಲಿ ಚಾರ್ಜ, 53 ಸಾವಿರ ಮಟಿರಿಯಲ್ ಚಾರ್ಜ ಎಂದು ಬಿಲ್ ಬರೆದು ಹೋಗಿದ್ದಾರೆ.

ಹಳ್ಳದ ತಡೆಗೋಡೆ ನಿರ್ಮಾಣಕ್ಕೆ 1500 ಚಿರೆಕಲ್ಲು, 2 ಬರಾಸು ಮರಳು, 20 ಚೀಲ ಸಿಮೆಂಟ್ ಬಳಕೆಯಾಗಿದೆ. ಎಲ್ಲಾ ಸಾಮಗ್ರಿಯನ್ನು ಅರ್ಧ ಕಿಲೋಮೀಟರ್ ದೂರದಲ್ಲಿರುವ ರಸ್ತೆಯಿಂದ ಕಾಮಗಾರಿ ಸ್ಥಳಕ್ಕೆ ಸಾಗಿಸುವುದಕ್ಕೇ ಮತ್ತು ತಡೆಗೋಡೆಗೆ ಆಧಾರವಾಗಿ ಇನ್ನೊಂದು ಬದಿಯಲ್ಲಿ ತುಂಬಿಕೊಡುವುದಕ್ಕೆ ಮಣ್ಣನ್ನೂ ಹತ್ತಾರು ಆಳು ನಡಿಗೆಯ ದೂರದಿಂದ ತರಲಾಗಿದೆ. ಸಾಗಾಟದ ವೆಚ್ಚ ಕಾಮಗಾರಿ ವೆಚ್ಚದಲ್ಲಿ ಇದೆಯೋ ಇಲ್ಲವೋ ಎನ್ನುವ ಬಗ್ಗೆ ಯಾರಲ್ಲಿಯೂ ಸ್ಪಷ್ಟತೆ ಇಲ್ಲವಾಗಿದೆ.
ಮಟಿರಿಯಲ್ ಚಾರ್ಜ ಜೊತೆ ಕೆಲಸ ಮಾಡಿದ ದಿನಗಳನ್ನು ಲೆಕ್ಕ ಹಾಕಿ ಅದರ ಕೂಲಿಯನ್ನಾದರೂ ಕೊಡಬೇಕು ಎಂದು ಪಂಚಾಯತಗೂ ಮನೆಗೂ ಓಡಾಡುತ್ತಿದ್ದಾರೆ. ತಿಂಗಳ ಕೊನೆಗೆ 30 -40 ಸಾವಿರ ಸಂಬಳ ಎಣಿಸುವ ಅಧಿಕಾರಿ ವರ್ಗ ದಿನವೊಂದಕ್ಕೆ 275 ರುಪಾಯಿ ಕನಿಷ್ಠ ಕೂಲಿಗೆ ದುಡಿಯುವವರ ಕಷ್ಟವನ್ನು ಅರ್ಥಮಾಡಿಕೊಳ್ಳಬೇಕು. ಕಾಮಗಾರಿಯ ಅಂದಾಜು ವೆಚ್ಚ 2 ಲಕ್ಷರುಪಾಯಿ ಎಂದು ಬೋರ್ಡ್ ನೆಟ್ಟು 80 ಸಾವಿರ ಮೌಲ್ಯದ ಕೆಲಸವಾಗಿದೆ ಎಂದು ಷರಾ ಬರೆದುಬಿಟ್ಟರೆ ಕೆಲಸ ಮಾಡಿದವರ ಪಾಡೇನು ಎನ್ನುವುದು ಊರವರ ಪ್ರಶ್ನೆ.
[ಕಾಮಗಾರಿಯ ತಾಂತ್ರಿಕ ಲೆಕ್ಕ ನಮಗೆ ಗೊತ್ತಿಲ್ಲ. ಇಂಜನಿಯರ್ ಏನು ಕೊಟ್ಟಿದ್ದಾರೋ ಅದರ ಪ್ರಕಾರ ಬಿಲ್ ಪಾಸು ಮಾಡಿದ್ದೇವೆ – ಮಹಾಜನ್ ಶೆಟ್ಟಿ, ಪಿ.ಡಿ.ಓ ಖರ್ವಾ]
[ಸರ್ಕಾರ ನಮಗೆ ನೀಡಿದ ಗೈಡ್‍ಲೈನ್ಸ್ ಪ್ರಕಾರ ಅಳತೆ ಮಾಡಿ ಕೊಟ್ಟಿದ್ದೇವೆ. ಕಲ್ಲು, ಸಿಮೆಂಟ್ ಮತ್ತು ಮರಳಿಗೆ ಸರ್ಕಾರ ನಿಗಧಿ ಪಡಿಸಿದ ಬೆಲೆ ಹಾಗೂ ಮಾರುಕಟ್ಟೆ ಬೆಲೆಗೂ ವ್ಯತ್ಯಾಸವಿರುವುದರಿಂದ ಸಮಸ್ಯೆಯಾಗಿದೆ – ಮನೋಜ, ಇಂಜನಿಯರ್]
[ಕನಿಷ್ಠ ಕೂಲಿಯಾದರೂ ಪರವಾಗಿಲ್ಲ ಊರಿನ ಕೆಲಸ ಎಂದು 200 ಆಳು ಕೆಲಸ ಮಾಡಿ ಹಳ್ಳದ ತಡೆಗೋಡೆ ಕಟ್ಟಿದ್ದೇವೆ. ಕೆಲಸ ಮುಗಿದು 5 ತಿಂಗಳು ಆದ ನಂತರ 80 ಸಾವಿರದ್ದಷ್ಟೇ ಕೆಲಸವಾಗಿದೆ ಎಂದರೆ ನಾವು ಎಲ್ಲಿಗೆ ಹೋಗಬೇಕು. ಯಾರನ್ನು ಕೇಳಬೇಕು ಕಲ್ಲಿನವರಿಗೆ ಸಿಮೆಂಟ್‍ನವರಿಗೆ ಕೆಲಸಕ್ಕೆ ಬಂದವರಿಗೆ ಯಾರಿಗೂ ದುಡ್ಡು ಕೊಟ್ಟಿಲ್ಲ.– ಮಂಜು ಗೌಡ, ಹಳ್ಳಕ್ಕೆ ತಡೆಗೋಡೆ ನಿರ್ಮಾಣದ ಮುಂದಾಳತ್ವ ವಹಿಸಿಕೊಂಡವರು.]
ಸಾಮಗ್ರಿ ಸರ್ಕಾರ ನಿಗಧಿ
ಪಡಿಸಿದ ಬೆಲೆ ಮಾರುಕಟ್ಟೆ
ಬೆಲೆ
1 ಚಿರೇ ಕಲ್ಲು 15 ರುಪಾಯಿ 30 ರುಪಾಯಿ
1 ಚೀಲ ಸಿಮೆಂಟ್ 240 ರುಪಾಯಿ 375 ರುಪಾಯಿ
ಮರಳು 1 ಕ್ಯುಬಿಕ್ ಮೀಟರ್ 1700 ರುಪಾಯಿ 2500 -3000
ರುಪಾಯಿ
ಮುಖ್ಯಾಂಶಗಳು
200 ಆಳು ಕೆಲಸಕ್ಕೆ ಕೇವಲ 17 ಸಾವಿರ ಕೂಲಿ ನಿಗದಿ.
ನರೇಗಾದ ಒಂದು ದಿನದ ಕನಿಷ್ಠ ಕೂಲಿ 275ನ್ನು ನೀಡಿದರೂ 55 ಸಾವಿರವಾಗುತ್ತದೆ.
ಆಗಿರುವ ಕೆಲಸದ ಅಳೆಯುವಾಗ ಸಾಗಾಣಿಕಾ ವೆಚ್ಚ ಲೆಕ್ಕಕ್ಕಿಲ್ಲ.
ಕಲ್ಲು, ಮರಳು, ಸಿಮೆಂಟ್ ವೆಚ್ಚವೇ 58 ಸಾವಿರ ದಾಟುತ್ತದೆ.
ಆಗಿರುವ ಕೆಲಸಕ್ಕೆ ಪಾಸುಮಾಡಿರುವ ಬಿಲ್ ಮೊತ್ತ 70 ಸಾವಿರ ಮಾತ್ರ

Leave a Comment