ಭಟ್ಕಳ: ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯಿಂದಾಗಿ ಇಂದು ಎಲ್ಲಾ ಕ್ಷೇತ್ರಗಳಲ್ಲಿ ಡಿಜಿಟಲೀಕರಣ ಅಳವಡಿಸಿಕೊಳ್ಳಲಾಗುತ್ತಿರುವುದರಿಂದ ಆ ವ್ಯವಸ್ಥೆಗೆ ಎಲ್ಲರೂ ಹೊಂದಿಕೊಳ್ಳುವ ಅನಿವಾರ್ಯತೆ ಇದೆ ಎಂದು ಕೆನರಾ ಬ್ಯಾಂಕ್ನ ಹಿರಿಯ ವ್ಯವಸ್ಥಾಪಕ ಸಂಜೀತ್ ಸಿಂಗ್ ಹೇಳಿದರು.

ಅವರು ತಾಲೂಕಿನ ಮಾರುಕೇರಿ ಗ್ರಾಮದ ಕೋಟಖಂಡದಲ್ಲಿ ಕೆನರಾ ಬ್ಯಾಂಕಿನ “ಅಮೂಲ್ಯ” ಆರ್ಥಿಕ ಸಾಕ್ಷರತಾ ಕೇಂದ್ರ ಹಾಗೂ ಸ್ಕೋಡ್ವೇಸ್ ಸಂಸ್ಥೆ ಸಿರ್ಸಿ ಜಂಟಿಯಾಗಿ ಎರ್ಪಡಿಸಿದ್ದ ಆರ್ಥಿಕ ಸಾಕ್ಷರತಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಸಮಾಲೋಚಕರಾದ ದಯಾನಂದ ಗುಂಡು ಮಾತನಾಡಿ ಪ್ರತಿಯೊಬ್ಬರೂ ಬ್ಯಾಂಕಿನ ಗ್ರಾಹಕರಾಗಬೇಕು ಹಾಗೂ ಎಲ್ಲರೂ ಸ್ವತಂತ್ರವಾಗಿ ಬ್ಯಾಂಕ್ ವ್ಯವಹಾರ ನಡೆಸುವ ಕನಿಷ್ಠ ಜ್ಞಾನ ಹೊಂದಿರಬೇಕೆಂಬ ಉದ್ದೇಶದಿಂದ ಗ್ರಾಮೀಣ ಭಾಗದಲ್ಲಿ “ಅಮೂಲ್ಯ” ಆರ್ಥಿಕ ಸಾಕ್ಷರತಾ ಕೇಂದ್ರದಿಂದ ತಿಳುವಳಿಕೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಶಿಬಿರದಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬರಿಗೂ ಸಾಮಾಜಿಕ ಭದ್ರತಾ ಯೋಜನೆಯ ಬಗ್ಗೆ ಸವಿಸ್ತಾರವಾಗಿ ತಿಳಸಿ ಕೆನರಾ ಬ್ಯಾಂಕಿನ ಸಿಬ್ಬಂದಿಯವರ ಸಹಾಯದಿಂದ ಸ್ಥಳದಲ್ಲೇ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಹಾಗೂ ಅಟಲ್ ಪಿಂಚಣಿ ಯೋಜನೆಗಳ ಅರ್ಜಿಗಳನ್ನು ಸ್ವೀಕರಿಸಿ ಫಲಾನುಭವಿಗಳಿಗೆ ಯೋಜನೆಯ ಸದುಪಯೋಗದ ಕುರಿತು ತಿಳಿಸಲಾಯಿತು. ಶೈಕ್ಷಣಿಕ ಸಾಲ ಸೌಲಭ್ಯ, ಉಳಿತಾಯ ಖಾತೆಯ ಮಹತ್ವ, ನಗದು ರಹಿತ ವ್ಯವಹಾರ ಹಾಗೂ ಕಿಸಾನ್ ಕ್ರೆಡಿಟ್ ಕಾರ್ಡ ಸೇರಿದಂತೆ ಬ್ಯಾಂಕಿನ ಇತರೆ ಸೌಲಭ್ಯಗಳ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿಯನ್ನು ನೀಡಿದರು. ಸುಬ್ರಹ್ಮಣ್ಯ ಭಟ್ ಸ್ಕೋಡ್ವೇಸ್ ಸಂಸ್ಥೆ ಸಿರ್ಸಿ ಇವರು ವಂದಿಸಿದರು.
Leave a Comment