ಹಳಿಯಾಳ :- ಎಪಿಎಮ್‍ಸಿ ಮತ್ತು ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಕಾಯ್ದೆಗಳನ್ನು ವಿರೊಧಿಸಿ ವಿವಿಧ ರಾಜ್ಯ ಸಂಘಟನೆಯವರು ದಿ.28 ಸೋಮವಾರ ಕರೆ ನೀಡಿರುವ ಕರ್ನಾಟಕ ಬಂದ್ ಹಿನ್ನೆಲೆ ಹಳಿಯಾಳ ಬಂದ್‍ಗೂ ಕರೆ ನೀಡಲಾಗಿದೆ ಎಂದು ವಿವಿಧ ಸಂಘಟನೆಯವರು ಜಂಟಿ ಸುದ್ದಿಗೊಷ್ಠಿಯಲ್ಲಿ ತಿಳಿಸಿದರು.

ಪಟ್ಟಣದ ಮರಾಠಾ ಭವನದಲ್ಲಿ ವಿವಿಧ ಸಂಘಟನೆಯವರು ನಡೆಸಿದ ಮಹತ್ವಪೂರ್ಣ ಸುದ್ದಿಗೊಷ್ಠಿಯಲ್ಲಿ ಅನ್ನದಾತರಿಗೆ ಮಾರಕವಾಗಿರುವ ರೈತ ವಿರೋಧಿ ಕಾಯ್ದೆಗಳನ್ನು ಕೇದ್ರ ಮತ್ತು ರಾಜ್ಯ ಸರ್ಕಾರಗಳು ಕೈಬಿಡಬೇಕೆಂದು ಆಗ್ರಹಿಸಲಾಯಿತು.
ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ಹಳಿಯಾಳ ತಾಲೂಕಾಧ್ಯಕ್ಷ ಶಂಕರ ಕಾಜಗಾರ ಮಾತನಾಡಿ ರಾಜ್ಯ ಸಂಘಟನೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಏಕಪಕ್ಷೀಯ ನೀತಿ ವಿರೋಧಿಸಿ ನೀಡಿರುವ ಕರ್ನಾಟಕ ಬಂದ್‍ಗೆ ನಾವು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಸೋಮವಾರ ಹಳಿಯಾಳ ಬಂದ್‍ಗೂ ಕರೆ ನೀಡಿರುವುದಾಗಿ ತಿಳಿಸಿದರು. ಪಟ್ಟಣದ ಮರಾಠಾ ಭವನದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಇಲ್ಲಿಯ ಶಿವಾಜಿ ವೃತ್ತಕ್ಕೆ ಆಗಮಿಸಿ ರಸ್ತಾರೊಖೋ, ಮಾನವ ಸರಪಳಿ ನಿರ್ಮಿಸುವ ಮೂಲಕ ಸರ್ಕಾರದ ವಿರುದ್ದ ಪ್ರತಿಭಟಿಸಲಾಗುವುದು ಎಂದರು.
ಯುವ ರೈತ ಮುಖಂಡ ಕುಮಾರ ಬೋಬಾಟಿ ಮಾತನಾಡಿ ರೈತರಿಗಾಗಿ ನಡೆಯುತ್ತಿರುವ ಈ ಹೋರಾಟಕ್ಕೆ ಎಲ್ಲರೂ ಸ್ವಯಂಪ್ರೇರಣೆಯಿಂದ ಬಂದ್‍ಗೆ ಸಹಕರಿಸಬೇಕು. ಒತ್ತಾಯಪೂರ್ವಕವಾಗಿ ಬಂದ್ ಮಾಡಿಸುವುದಿಲ್ಲ ಆದರೇ ರೈತರ ಕೂಗು ಸರ್ಕಾರದ ಕಿವಿಗೆ ಬಿಳಬೇಕಾದರೇ ಜನರು ಬಂದ್‍ಗೆ ಸಂಪೂರ್ಣ ಪ್ರಮಾಣದಲ್ಲಿ ಸಹಕರಿಸಬೇಕಿರುವುದು ಅತಿ ಮುಖ್ಯವಾಗಿದ್ದು, ಬಂಡವಾಳ ಶಾಹಿಗಳ ಪರವಾಗಿರುವ ಈ ಮಸೂದೆ, ಕಾಯ್ದೆಗಳನ್ನು ರೈತ ಸಮುದಾಯ ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದರು.
ಸಿಐಟಿಯು ಸಂಘಟನೆಯ ರಾಜ್ಯ ಉಪಾಧ್ಯಕ್ಷ ಹರೀಶ ನಾಯ್ಕ ಮಾತನಾಡಿ ಸದ್ಯ ಇರುವ ಬಿಜೆಪಿ ಸರ್ಕಾರ ಬಡವರ ಪರ ಇಲ್ಲ, ಕಾಯ್ದೆ ಜಾರಿಗೆ ತರದೆ ಇದ್ದರೇ ಯಡಿಯೂರಪ್ಪ ಅವರು ಸಿಎಂ ಕುರ್ಚಿ ಕಳೆದುಕೊಳ್ಳಲಿದ್ದು ಆ ಭಯದಿಂದ ರಾಜ್ಯದಲ್ಲೂ ಅವರು ಕಾಯ್ದೆಗಳನ್ನು ಜಾರಿಗೊಳಿಸಲು ಹೊರಟಿದ್ದು ಇದಕ್ಕೆ ನಮ್ಮ ಪ್ರಭಲ ವಿರೋಧವಿದೆ. ಕೃಷಿ ಮಸೂದೆ ಕಾಯ್ದೆಯಿಂದ ಆತ್ಮನಿರ್ಭರ, ಸ್ವಾವಲಂಬಿ ಭಾರತ ನಿರ್ಮಾಣವಾಗುವುದು ಅಸಾಧ್ಯವಾಗಿದ್ದು ಕೇಂದ್ರ ಸರ್ಕಾರದ ವಿರುದ್ದ ಹೊರಾಟ ನಿರಂತರವಾಗಿ ನಡೆಯಲಿದೆ ಎಂದರು.
ಪತ್ರಿಕಾಗೊಷ್ಠಿಯಲ್ಲಿ ಸೋಮವಾರದ ಬಂದ್‍ಗೆ ಹಳಿಯಾಳ ತಾಲೂಕಿನ ರಾಜ್ಯ ಕಬ್ಬು ಬೆಳೆಗಾರರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ವಿಲಾಸ ಕಣಗಲಿ, ತಾಲೂಕಾಧ್ಯಕ್ಷ ಶಿರಾಜ ಮುನವಳ್ಳಿ, ಕಾರ್ಮಿಕ ಸಂಘಟನೆಯವರು, ಭಾರತ ಆಟೋ ಸ್ಟ್ಯಾಂಡನ ಅಧ್ಯಕ್ಷ ಅಬ್ದುಲ್ ಶೇಖ, ಭಾರತೀಯ ಮಾಜಿ ಸೈನಿಕರ ಸಂಘದ ಸುರೇಶ ಶಿವಣ್ಣವರ, ಹಿರಿಯ ನಾಗರೀಕರ ವೇದಿಕೆಯ ಜಿಡಿ ಗಂಗಾಧರ, ದಲಿತ ಸಂಘರ್ಷ ಸಮೀತಿ ಅರುಣ ಮೇತ್ರಿ, ಕರ್ನಾಟಕ ರೈತ ಪ್ರಾಂತ ಸಂಘ ಸೇರಿದಂತೆ ವಿವಿಧ ಸಂಘಟನೆಯವರು ಬೆಂಬಲ ಸೂಚಿಸಿದರು.
ಸುದ್ದಿಗೊಷ್ಠಿಯಲ್ಲಿ ಪ್ರಮುಖರಾದ ಎಮ್‍ವಿ ಘಾಡಿ, ಅಶೋಕ ಮೇಟಿ, ಪುಂಡ್ಲಿಕ ಗೊಡಿಮಣಿ, ಮಾದೇವ ಕೆಳೊಜಿ ಮೊದಲಾದವರು ಇದ್ದರು.
Leave a Comment