ಹೊನ್ನಾವರ;
ರೈತ ವಿರೋಧಿ ಕಾನೂನು ತಿದ್ದುಪಡಿ ವಿರೋಧಿಸಿ ಹೊನ್ನಾವರದಲ್ಲಿ ಸಾಂಕೇತಿಕವಾಗಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ವಿವಿಧ ಸಂಘಟನೆಯಿಂದ ಜಂಟಿಯಾಗಿ ಮನವಿ ಸಲ್ಲಿಸಲಾಯಿತು.

ಎ.ಪಿ.ಎಂ.ಸಿ ತಿದ್ದುಪಡಿ ಹಾಗೂ ಭೂಸುಧಾರಣಾ ತಿದ್ದುಪಡಿ ವಿಧೇಯಕದ ವಿರುದ್ದ ರೈತ ಸಂಘಟನೆ ಹಾಗೂ ವಿವಿಧ ಸಂಘಟನೆಯ ಕರೆ ನೀಡಿದ್ದ ರಾಜ್ಯ ಬಂದ್ ಹಿನ್ನಲೆಯಲ್ಲಿ ಪಟ್ಟಣದ ಶರಾವತಿ ವೃತ್ತದ ಬಳಿ ಸಾಂಕೇತಿಕವಾಗಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ನಂತರ ಸರ್ಕಾರ ವಿರುದ್ದ ಘೊಷಣೆ ಮೊಳಗಿಸುತ್ತಾ ತಹಶೀಲ್ದಾರ ಕಛೇರಿಯವರಿಗೂ ಆಗಮಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋರೊನಾದಿಂದ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸದೇ ರೈತ ವಿರೋಧಿ ಕಾನೂನು ಜಾರಿಗೆ ತರಲು ಮುಂದಾಗುತ್ತಿದೆ. ಕಾರ್ಪೋರೇಟರ್ ಕಂಪನಿಯ ಪರವಾಗಿರುವ ಮಸೂದೆಯನ್ನು ಪ್ರತಿಪಕ್ಷ ಸೇರದಂತೆ ಯಾರ ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಸುಗ್ರಿವಾಜ್ಞೆ ಮೂಲಕ ಜಾರಿಗೆ ತರಲು ಮುಂದಾಗಿದೆ. ಇಂತಹ ಸರ್ವಾಧಿಕಾರ ಧೋರಣೆಯಿಂದ ಸರ್ಕಾರ ಹಿಂದೆಸರಿಯಬೇಕು. ಅಲ್ಲದೇ ರೈತ ವಿರೋಧಿ ಕಾಯ್ದೆಗಳಾದ ವಿದ್ಯುತ್ ಶಕ್ತಿ ತಿದ್ದುಪಡಿ ವಿಧೇಯಕ ಕಾಯ್ದೆ 2020, ಭೂ ಸುಧಾರಣೆ ಕಾಯ್ದೆ, ಕಾರ್ಮಿಕ ವಿರೋಧಿ ನೀತಿಯನ್ನು ತಕ್ಷಣ ವಾಪಸ್ಸು ಪಡೆಯಬೇಕು. ಕಾಯ್ದೆ ಜಾರಿಗೆ ಮುಂದಾದರೆ, ದೇಶಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ತಹಶೀಲ್ದಾರ ಮೂಲಕ ಪ್ರಧಾನಮಂತ್ರಿಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ ತಹಶೀಲ್ದಾರ ಮೂಲಕ ಮನವಿ ಸಲ್ಲಿಸಿದರು.
ತಹಶೀಲ್ದಾರ ವಿವೇಕ ಶೇಣ್ವಿ ಮನವಿ ಸ್ವೀಕರಿಸಿದರು.

ಮಾಜಿ ಶಾಸಕ ಜೆ.ಡಿ.ನಾಯ್ಕ ಮಾತನಾಡಿ ರೈತರ ಶಾಲು ಹೊದ್ದು ಅಧಿಕಾರ ಸ್ವೀಕರಿಸಿದ ಮುಖ್ಯಮಂತ್ರಿಗಳು ರೈತರ ಪರವಾಗಿ ಯೋಜನೆ ತರುವುದನ್ನು ಬಿಟ್ಟು ಕಾರ್ಪೊರೇಟ್ ವಲಯಗಳಿಗೆ ಕೊಡುಗೆ ನೀಡಲು ಮುಂದಾಗುತ್ತಿದ್ದಾರೆ. ಈ ಕಾನೂನು ಜಾರಿಯಾದರೆ ರೈತರ ಪಾಲಿಗೆ ಮರಣ ಶಾಸನ ಬರೆದಂತಾಗುತ್ತದೆ. ಮುಂದಿನ ದಿನದಲ್ಲಿ ತುತ್ತು ಅನ್ನಕ್ಕೆ ಪರಿತಪಿಸುವ ಸ್ಥಿತಿ ಬರಲಿದೆ ಕೂಡಲೇ ಇದನ್ನು ವಾಪಸ್ಸು ಪಡೆಯುವಂತೆ ಆಗ್ರಹಿಸಿದರು.
ಕಿಸಾನ್ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಶಿವಾನಂದ ಹೆಗಡೆ ಮಾತನಾಡಿ ರೈತರ ಪರವಾಗಿ ನಿಲ್ಲುವ ಉದ್ದೇಶದಿಂದ ಕಾಂಗ್ರೇಸ್ ಪಕ್ಷ ಸಹಕಾರ ನೀಡಲು ಇಂದಿನ ಬಂದ್ ಸಹಕಾರ ನೀಡಿದ್ದೇವೆ. ಇಂತಹ ಕರಾಳ ಕಾನೂನು ಜಾರಿಗೆ ತರಲು ರಾಜ್ಯ ಕೇಂದ್ರ ಸರ್ಕಾರಗಳು ಮುಂದಾಗಿದೆ. ಇದರಿಂದ ರೈತರು ಇನ್ನು ಹೆಚ್ಚಿನ ಸಾಲದ ಸುಳಿಗೆ ಸಿಲುಕಲಿದ್ದಾರೆ. ಮುಂದಿನ ದಿನದಲ್ಲಿ ರೈತರು ಭಿಕ್ಷೆ ಬೇಡುವವರ ಸ್ಥಿತಿ ಬರಲಿದೆ. ಇಂತಹ ಕಾನೂನು ಜಾರಿಗೆ ತರಲು ಮುಂದಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರ ತೊಲಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷ ತಿಮ್ಮಪ್ಪ ಗೌಡ, ಕಾರ್ಯದರ್ಶಿ ಗಣೇಶ ಭಂಡಾರಿ, ವಿವಿಧ ಸಂಘಟನೆಯ ಪ್ರಮುಖರಾದ ಎಂ.ಎನ್. ಸುಬ್ರಹ್ಮಣ್ಯ, ಮಂಜುನಾಥ ಗೌಡ, ಜಿ.ಎನ್.ಗೌಡ, ರಾಜು ನಾಯ್ಕ ಮಂಕಿ, ಆಜಾದ್ ಅಣ್ಣಿಗೇರಿ, ಅಣ್ಣಪ್ಪ ಗೌಡ, ಶಂಕರ ಗೌಡ ಮತ್ತಿತರರು ಹಾಜರಿದ್ದರು.
Leave a Comment