ತಾಲೂಕಿನ ಗ್ರಾಮೀಣ ಪ್ರದೇಶವಾದ ಅಳ್ಳಂಕಿಯಲ್ಲಿ ಜನಿಸಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಕ್ಯಾಜಿಟನ್ ಡಯಾಸ್ ಇಂದು ಸಿನೆಮಾ ಸಂಗೀತ ಲೋಕದಲ್ಲಿ ತನ್ನದೇ ಹೆಜ್ಜೆಗುರುತುಗಳನ್ನು ಮೂಡಿಸಿದ ಅಪ್ಪಟ ಪ್ರತಿಭಾವಂತ. ಸಂಗೀತದ ಮಹಾಗುರು ಎಂದೇ ಕರೆಸಿಕೊಳ್ಳುತ್ತಿರುವ ನೂರಾರು ಸೂಪರ್ ಹಿಟ್ ಹಾಡುಗಳನ್ನು ಕನ್ನಡ ಸಿನೆಮಾ ಲೋಕಕ್ಕೆ ಕೊಡುಗೆಯಾಗಿ ಕೊಟ್ಟಿರುವ ಮಾಂತ್ರಿಕ ಸಂಗೀತ ನಿರ್ದೇಶಕ ಹಂಸಲೇಖ ಅವರ ಸಾಮಿಪ್ಯ ಮತ್ತು ಸಾಂಗತ್ಯವನ್ನು ಪಡೆದುಕೊಂಡಿದ್ದಲ್ಲದೇ ಸರಿಸುಮಾರು ಹತ್ತು ವರ್ಷಗಳ ಕಾಲ ಸಹಾಯಕ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿ ಇದೀಗ ಸ್ವತ: ಸಂಗೀತ ಸಂಯೋಜಿಸುತ್ತಾ ಸಾಧನೆಯ ಹಾದಿಯಲ್ಲಿ ಮುನ್ನುಗ್ಗುತ್ತಿದ್ದಾರೆ.

ಮಂಗಳೂರು ಯುನಿವರ್ಸಿಟಿಯಿಂದ ಕರ್ನಾಟಕ ಸಂಗೀತ ಮತ್ತು ನಾಟಕ ಅಕಾಡೆಮಿ ಪದವಿ ಪಡೆದಿರುವ ಇವರು ನೆನಪಿರಲಿ ಸೇರಿದಂತೆ ಐವತ್ತಕ್ಕೂ ಹೆಚ್ಚು ಸಿನೆಮಾಗಳಿಗೆ ಸಹಾಯಕ ಸಂಗೀತ ನಿರ್ದೇಶಕರಾಗಿ ದುಡಿದಿರುವ ಜೊತೆಗೆ ನೂರಾರು ಕೊಂಕಣಿ ಹಾಡುಗಳಿಗೆ ಸಂಗೀತ ಸಂಯೋಜಿಸಿರುವ ಸೈ ಎನಿಸಿಕೊಂಡಿದ್ದಾರೆ. ಖ್ಯಾತ ಹಿನ್ನಲೆಗಾಯಕರಾದ ರಾಜೇಶ ಕೃಷ್ಣನ್, ವಿಜಯಪ್ರಕಾಶ, ಹೇಮಂತ್, ಚಿತ್ರಾ, ಹಾಗೂ ಇತ್ತೀಚೆಗೆ ನಮ್ಮನ್ನಗಲಿದ ಗಾಯನ ಮಾಂತ್ರಿಕ ಎಸ್ಪಿಬಿ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು.
ಪ್ರಾರಂಭದ ದಿನಗಳಲ್ಲಿ ಚರ್ಚನಲ್ಲಿ ಪ್ರಾರ್ಥನೆ ಮಾಡುವಾಗ ಸಂಗೀತ ನುಡಿಸುವುದರಿಂದ ಆರಂಬಿಸಿ ಶಾಲಾ ಕಾಲೇಜುಗಳ ಸಾಂಸ್ಕøತಿಕ ಸ್ಪರ್ದೆಗಳಲ್ಲೂ ಉತ್ಸಾಹದಿಂದ ಭಾಗಿಯಾಗುತ್ತಿದ್ದ ಕ್ಯಾಜಿಟನ್ ಇಂದು ಸಾಧಕರ ಸಾಲಿನಲ್ಲಿ ಗುರುತಿಸಿಕೊಂಡಿದ್ದರೂ ತನ್ನ ಬದುಕಿನ ಕಷ್ಟದ ದಿನಗಳಲ್ಲಿ ನೆರವಾದ ಫಾ.ಸ್ಟ್ಯಾನಿ ಡಿ ಕುನ್ನಾ ಹಾಗೂ ಸಿಸ್ಟರ್ ಫಿಲೋಮಿನಾ ಅವರ ನೆರವನ್ನು ಸದಾ ಸ್ಮರಿಸುತ್ತಾ ಪ್ರಾಮಾಣಿಕವಾಗಿ ತೊಡಗಿಸಿಕೊಂಡರೆ ಯಾವುದೇ ರಂಗದಲ್ಲೂ ಸಾಧನೆ ಅಸಾಧ್ಯವಲ್ಲ ಎನ್ನುವ ಸ್ಪೂರ್ತಿಯ ಮಾತನಾಡುತ್ತಾರೆ.

Leave a Comment