ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹೊನ್ನಾವರ ಇವರ ಸಹಯೋಗದಲ್ಲಿ ಕವಿ ಮಂಜುನಾಥ ನಾಯ್ಕ ಯಲ್ವಡಿಕವೂರ ಅವರ ಚೊಚ್ಚಲ ಕವನ ಸಂಕಲನ ‘ಅಂಜುಬುರುಕಿಯ ರಂಗವಲ್ಲಿ’ ಬಿಡುಗಡೆ ಸಮಾರಂಭ ಪಟ್ಟಣದ ಸೋಷಿಯಲ್ ಕ್ಲಬ್ ಸಭಾಂಗಣದಲ್ಲಿ ರವಿವಾರ ನಡೆಯಿತು. ಭಟ್ಕಳ ಉಪವಿಭಾಗದ ಸಹಾಯಕ ಪೋಲೀಸ್ ಅಧೀಕ್ಷಕ ನಿಖಿಲ್ ಬಿ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಭೆ ಯಾರ ಸ್ವತ್ತಲ್ಲ. ಪ್ರತಿಯೊಬ್ಬರಲ್ಲೂ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ.

ನಮ್ಮ ಪೋಲೀಸ್ ಇಲಾಖೆಯಲ್ಲಿಯೂ ಇಂತಹ ಕವಿ ಮನಸ್ಸಿನ ಪ್ರತಿಭೆಗಳಿರುವುದು ನಮಗೆಲ್ಲಾ ಹೆಮ್ಮೆಯ ವಿಚಾರ ಎಂದು ಕವಿ ಮಂಜುನಾಥ ನಾಯ್ಕ ಯಲ್ವಡಿಕವೂರ ಅವರಿಗೆ ಅಭಿನಂದಿಸಿದರು.
ಹಿರಿಯ ಜಾನಪದ ವಿದ್ವಾಂಸ ಡಾ.ಎನ್.ಆರ್.ನಾಯಕ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಮಂಜುನಾಥ ಅವರ ಕವನ ಓದಿದ್ದು ಮನಸ್ಸಿಗೆ ಸಂತಸವಾಗಿದೆ. ಕಾವ್ಯ ಅತ್ಯಂತ ನಿಗೂಢವಾಗಿದ್ದರೂ ಓದುಗರಿಗೆ ನಿಲುಕುವಂತಿರಬೇಕು ಎಂದರು. ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದು ಕವಿತೆ ರಚನೆಕಾರರು ಅವಸರದಲ್ಲಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಕವಿ ಎನ್ನುವಾತ ಓರ್ವ ತಪಸ್ವಿ ಇದ್ದಹಾಗೆ. ಅವಸರ, ಅಪೇಕ್ಷೆಗೆ ಒಳಗಾಗದೇ ತಮ್ಮನ್ನು ತಾವು ತೊಡಗಿಸಿಕೊಂಡಾಗ ಮಾತ್ರ ಉತ್ತಮ ಕವಿ ಹೊರಹೊಮ್ಮುತ್ತಾನೆ ಎಂದರು. ಸಾಹಿತಿ ಶ್ರೀಧರ ಶೇಟ್ ಶಿರಾಲಿ ಕೃತಿ ಪರಿಚಯ ಮಾಡಿದರು. ಕಸಾಪ ತಾಲೂಕಾ ಘಟಕದ ಅಧ್ಯಕ್ಷ ನಾಗರಾಜ ಹೆಗಡೆ ಅಪಗಾಲ, ರಾಮಮೂರ್ತಿ ನಾಯಕ ಅಂಕೋಲಾ, ವೃತ್ತ ನಿರೀಕ್ಷಕ ಶ್ರೀಧರ್ ಎಸ್.ಆರ್ , ಪಿಎಸ್‍ಐಗಳಾದ ಶಶಿಕುಮಾರ್ ಸಿ.ಆರ್, ಅಶೋಕ ಕುಮಾರ್, ಕ್ರೈಂ ಪಿಎಸ್‍ಐ ಸಾವಿತ್ರಿ ನಾಯಕ ಉಪಸ್ಥಿತರಿದ್ದರು. ಲೇಖಕ ಮಂಜುನಾಥ ನಾಯ್ಕ ಯಲ್ವಡಿಕವೂರ ಪುಸ್ತಕ ರಚನೆ, ಸಾಹಿತ್ಯಾಭಿರುಚಿ ಹೊಂದಲು ಪ್ರೇರಣೆಯಾದ ಸಂಗತಿಗಳನ್ನು ಹಂಚಿಕೊಂಡು ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಶಂಕರ ಗೌಡ ಪ್ರಾರ್ಥಿಸಿದರು. ಪ್ರಶಾಂತ ಹೆಗಡೆ ಮೂಡಲಮನೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಭವಾನಿ ಶಂಕರ ವಂದಿಸಿದರು.
Leave a Comment