ಹಳಿಯಾಳ :- ಕಳೆದ ಅನೇಕ ತಿಂಗಳುಗಳಿಂದ ಪುರಸಭೆಗೆ ವಾಣಿಜ್ಯ ಮಳಿಗೆಯ ಲಕ್ಷಾಂತರ ರೂ. ಬಾಡಿಗೆ ತುಂಬದೆ ಇರುವ ಕಾರಣ ಹಳಿಯಾಳದ ಮೀನು ಮಾರುಕಟ್ಟೆ ಹಾಗೂ ಮಟನ್(ಮಾಂಸ) ಮಾರುಕಟ್ಟೆಗೆ ಸೋಮವಾರ ಪುರಸಭೆ ಬೀಗ ಜಡಿದ(ಸೀಜ್ ಮಾಡಿದ) ಘಟನೆ ನಡೆಯಿತು.

ಹಳಿಯಾಳ ಪುರಸಭೆಯ ಮಾಲಿಕತ್ವದ ಪ್ರತ್ಯೇಕ ಮೀನು ಮತ್ತು ಮಟನ್ ಮಾರುಕಟ್ಟೆ ಸಂಕೀರ್ಣವನ್ನು 12 ವರ್ಷಗಳ ಸುಧೀರ್ಘ ಅವಧಿಗೆ ಲೀಸ್ಗೆ ನೀಡಲಾಗಿದೆ.
ಇಲ್ಲಿ ಮೀನು ಮಾರುಕಟ್ಟೆ ಸಂಕೀರ್ಣದಲ್ಲಿ 7 ಜನ ವ್ಯಾಪಾರಸ್ಥರಿದ್ದು ಅವರಿಂದ 1 ಲಕ್ಷ 52 ಸಾವಿರ ಬಾಡಿಗೆ ಬಾಕಿ ಬರಬೇಕಿತ್ತು ಹಾಗೂ ಮಾಂಸ ಮಾರುಕಟ್ಟೆಯಲ್ಲಿಯ 6 ವ್ಯಾಪಾರಸ್ಥರಿಂದ 1 ಲಕ್ಷ 20 ಸಾವಿರ ಬಾಕಿ ಪುರಸಭೆಗೆ ಬರಬೇಕಿದೆ. ಕಳೆದ 8 ತಿಂಗಳಿಗೂ ಹೆಚ್ಚು ಸಮಯದಿಂದ ಬಾಡಿಗೆ ಹಣ ತುಂಬದೆ ಇರುವ ಕಾರಣ ಇಂದು ಪುರಸಭೆ ಸಂಕೀರ್ಣಗಳಿಗೆ ಬೀಗ ಜಡಿದು ಕ್ರಮಕ್ಕೆ ಮುಂದಾದ ವಿದ್ಯಮಾನ ನಡೆಯಿತು. ಇಲ್ಲಿ ಕೆಲವು ವ್ಯಾಪಾರಸ್ಥರು ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಭಾಡಿಗೆ ತುಂಬದೆ ಇರುವುದೇ ಪುರಸಭೆಯ ಕಠಿಣ ಕ್ರಮಕ್ಕೆ ಕಾರಣವಾಗಿದೆ.
ಮಾರುಕಟ್ಟೆ ಸೀಜ್ ಆದ ಬಳಿಕ ಮೀನು ಮಾರುಕಟ್ಟೆಯ ವ್ಯಾಪಾರಸ್ಥರು ಸುಮಾರು 71 ಸಾವಿರ ರೂ. ಬಾಡಿಗೆ ಪಾವತಿಸಿ ಮತ್ತೇ ಕಾಲಾವಕಾಶ ಕೇಳಿದ್ದರಿಂದ ಈ ಸಂಕೀರ್ಣಕ್ಕೆ ಜಡಿದ ಬೀಗವನ್ನು ಪುರಸಭೆ ತೆರವುಗೊಳಿಸಿ ವ್ಯಾಪಾರಕ್ಕೆ ಅವಕಾಶ ನೀಡಿದೆ. ಇಲ್ಲಿ ದಾಂಡೇಲಿಯ ಎನ್ನಲಾದ ಅಬ್ದುಲ್ ಸತ್ತಾರ ಧಾರವಾಡಕರ ಎನ್ನುವವರದ್ದೇ 40 ಸಾವಿರ ಬಾಕಿ ಇದ್ದು ಇವರಿಂದ ಯಾವುದೇ ಪ್ರತಿಕ್ರಿಯೇ ಬರದೆ ಇರುವ ಕಾರಣ ಇವರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪುರಸಭೆ ಕಂದಾಯ ಅಧಿಕಾರಿ ಅಶೋಕ ಸಾಳೆನ್ನವರ ತಿಳಿಸಿದರು.
ಇನ್ನೂ ಮಟನ್ ಮಾರುಕಟ್ಟೆಯವರು ಬಾಡಿಗೆ ಹಣ ಪಾವತಿಸದೆ ಇರುವುದರಿಂದ ಆ ಸಂಕೀರ್ಣಕ್ಕೆ ಜಡಿದ ಬೀಗವನ್ನು ತೆರವುಗೊಳಿಸಲಾಗಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ ಮಾಹಿತಿ ನೀಡಿದರು.
Leave a Comment