ಹಳಿಯಾಳ :- ಹಳಿಯಾಳ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ(ಟಿಪಿಎಂಎಸ್)ದಲ್ಲಿ ಗೊಬ್ಬರ ಲೆಕ್ಕಪತ್ರದಲ್ಲಿ 26 ಲಕ್ಷ 50 ಸಾವಿರದ ಗೊಂದಲ ಆಗಿರುವುದು ನೀಜ ಎಂದು ಒಪ್ಪಿಕೊಂಡಿರುವ ಟಿಪಿಎಂಎಸ್ ಸಂಘದ ಕಾಂಗ್ರೇಸ್ ಬೆಂಬಲಿತ ಆಡಳಿತ ಮಂಡಳಿ ಇದರಲ್ಲಿ ಆಡಳಿತ ಮಂಡಳಿಯ ತಪ್ಪಿಲ್ಲ ಹಾಗೂ ಆಡಳಿತ ಮಂಡಳಿ ಯಾವುದೇ ಭ್ರಷ್ಟಾಚಾರದಲ್ಲಿ ತೊಡಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ಸಂಘದ ಕಚೇರಿಯಲ್ಲಿ ನಡೆಸಿದ ಮಹತ್ವಪೂರ್ಣ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಸಂಘದ ಉಪಾಧ್ಯಕ್ಷೆ ಮಂಜುಳಾ ಗೌಡಾ ಆಡಳಿತ ಮಂಡಳಿಯ ಅಧಿಕಾರವಿಲ್ಲದ 3 ತಿಂಗಳ ಅವಧಿಯಲ್ಲಿ ಸಂಘದಲ್ಲಿ ಆಗಿರುವ ಪ್ರಮಾದದ ಬಗ್ಗೆ ಕಳೆದ 20 ದಿನಗಳ ಹಿಂದೆಯಷ್ಟೇ ಆಡಳಿತ ಮಂಡಳಿ ಗಮನಕ್ಕೆ ಬಂದಿದ್ದು ಕೂಡಲೇ ಸಭೆ ಕರೆದು ಮ್ಯಾನೇಜರ್ ಅವರಿಗೆ ಎಚ್ಚರಿಕೆ ನೀಡಿ ಗೊಬ್ಬರ ವ್ಯವಹಾರದ 26.50 ಲಕ್ಷ ರೂ. ಹಣವನ್ನು ಸಂಘಕ್ಕೆ ತುಂಬಲು ಸೂಚಿಸಲಾಗಿದೆ.

ಇದರಲ್ಲಿ ಆಡಳಿತ ಮಂಡಳಿಯವರ ಯಾವುದೇ ತಪ್ಪಿಲ್ಲ ಎಂದ ಅವರು ಈಗಾಗಲೇ ತಪ್ಪಿತಸ್ಥ ಕ್ಲರ್ಕ ಪ್ರಕಾಶ ಅಮರಾಪುರ ಅವರಿಂದ 12 ಲಕ್ಷ ರೂ. ತುಂಬಿಸಿಕೊಳ್ಳಲಾಗಿದ್ದು ಉಳಿದ 14.50 ಲಕ್ಷ ರೂ. ದುಡ್ಡನ್ನು ಹಂತ ಹಂತವಾಗಿ ತುಂಬಲು ಕಾಲಾವಕಾಶ ನೀಡಲಾಗಿದೆ ಎಂದರು. ಸಂಘವು ಸತತ ಲಾಭದಲ್ಲಿ ಮುಂದುವರೆಯುತ್ತಿದೆ. ಇಲ್ಲಿ ಕಾಂಗ್ರೇಸ್ನೊಂದಿಗೆ ಬಿಜೆಪಿಯ ಸದಸ್ಯ ಇದ್ದು ಎಲ್ಲರೂ ಒಂದೆ ಎಂದು ರೈತರ ಶ್ರೇಯೋಭಿವೃದ್ದಿಗೆ ದುಡಿಯುತ್ತಿದ್ದು ಮಾಜಿ ಶಾಸಕ ಸುನೀಲ್ ಹೆಗಡೆ ಅವರು ಸಂಘದ ಕಚೇರಿಗೆ ಆಗಮಿಸಿ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಆಡಳಿತ ಮಂಡಳಿ ಹಾಗೂ ವಿಪ ಸದಸ್ಯ ಘೋಟ್ನೇಕರ ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಿರುವುದನ್ನು ಖಂಡಿಸುವುದಾಗಿ ಹೇಳಿದರು.
ಆಡಳಿತ ಮಂಡಳಿಗೆ ಯಾವುದೇ ಸಂಘ ಸಂಸ್ಥೆಗಳ ದುಡ್ಡು ತಿನ್ನುವಂತಹ ದರಿದ್ರತನ ಬಂದಿಲ್ಲ ಈಗಾಗಲೇ ಆರೋಪ ಮಾಡುವ ಕೆಲವು ಜನ ಬ್ಯಾಂಕುಗಳನ್ನು ದಿವಾಳಿ ತೆಗೆದಿದ್ದು ಅವರಿಗೆ ನೆನಪಿಲ್ಲವೇ ಎಂದು ಮಂಜುಳಾ ಗೌಡಾ ಕಿರಿಕಾರಿದರು.
ಹಿರಿಯ ನಿರ್ದೇಶಕ ಸುರೇಂದ್ರ ಶಿವಣ್ಣವರ ಮಾತನಾಡಿ ಮಾಜಿ ಶಾಸಕ ಸುನೀಲ್ ಹೆಗಡೆ ಹಾಗೂ ಬಿಜೆಪಿಯವರ ಆರೋಪದಲ್ಲಿ ಸತ್ಯಾಂಶವಿಲ್ಲ. ಗೊಬ್ಬರ ಮಾರಾಟ ಹಾಗೂ ಹಣದ ಭ್ರಷ್ಟಾಚಾರದ ವಿಷಯದಲ್ಲಿ ಆಡಳಿತ ಮಂಡಳಿ ಭಾಗಿಯಾಗಿಲ್ಲ. ಮ್ಯಾನೇಜರ್ ಈಶ್ವರ ಪಾಟೀಲ್ ಹಾಗೂ ಗುಮಾಸ್ತ ಪ್ರಕಾಶ ಅಮರಾಪುರ ಲೆಕ್ಕಪತ್ರದಲ್ಲಿ ಹೆಚ್ಚು ಕಡಿಮೆ ಮಾಡಿರುವುದು ಬೆಳಕಿಗೆ ಬಂದಿದ್ದು ಅವರಿಂದ ಸಂಪೂರ್ಣ 29.50 ಲಕ್ಷ ರೂ. ವನ್ನು ಸಂಘಕ್ಕೆ ಭರಿಸಿಕೊಳ್ಳುತ್ತೇವೆ ಎಂದ ಅವರು ಆದರೇ ಮಾಜಿ ಶಾಸಕರು ಆಡಳಿತ ಮಂಡಳಿ ಹಾಗೂ ಈ ಸಂಘಕ್ಕೆ ಸಂಬಂಧಪಡದ ವಿಪ ಸದಸ್ಯ ಎಸ್.ಎಲ್.ಘೊಟ್ನೇಕರ ವಿರುದ್ದ ಟೀಕೆ ಮಾಡಿರುವುದನ್ನು ತೀವೃವಾಗಿ ಖಂಡಿಸುತ್ತೇವೆ ಎಂದ ಅವರು ಘೊಟ್ನೇಕರ ಅವರ ಬಗ್ಗೆ ಟೀಕೆ ಮಾಡುವ ಯೋಗ್ಯತೆ ಹೆಗಡೆ ಅವರಿಗಿಲ್ಲ ಎಂದರು.
ಸಂಘದ ವ್ಯವಸ್ಥಾಪಕ ಈಶ್ವರ ಪಾಟೀಲ್ ಮಾತನಾಡಿ 2020-21ನೇ ಸಾಲಿಗೆ ಈವರೆಗೆ 2666 ಟನ್ ಗೊಬ್ಬರ ಸರ್ಕಾರದಿಂದ ಬಂದಿದ್ದು 13 ಸೊಸೈಟಿ ಹಾಗೂ ಟಿಪಿಎಮ್ಎಸ್ ಸಂಘಕ್ಕೆ ಹಂಚಿಕೆ ಮಾಡಲಾಗಿದ್ದು. ಈ ಸಂಘಕ್ಕೆ ಮಾತ್ರ 26.50 ಲಕ್ಷ ರೂ. ಮೊತ್ತದ 389 ಟನ್ ಗೊಬ್ಬರ ಬಂದಿದ್ದು ಅದೆಲ್ಲವನ್ನು ಮಾರಾಟ ಮಾಡಲಾಗಿದೆ. ಆದರೇ ಟಿಪಿಎಂಎಸ್ ಸಂಘದ ಕ್ಲರ್ಕ(ಗುಮಾಸ್ತ) ಪ್ರಕಾಶ ಅಮರಾಪುರ ಇದೆಲ್ಲವನ್ನು ಮಾರಾಟ ಮಾಡಿ ಹಣವನ್ನು ಸೊಸೈಟಿಗೆ ತುಂಬಿಲ್ಲ ಈವರೆಗೆ ಸರಿಯಾದ ಲೆಕ್ಕ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಕ್ಲರ್ಕ ಪ್ರಕಾಶ ಅಮರಾಪುರ ಗೊಬ್ಬರವನ್ನು ಮಾರಾಟ ಮಾಡಿದ್ದು ನೀಜ, ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿಗೂ ಮಾರಾಟ ಮಾಡಿದ್ದೇವೆ. ಸಾಕಷ್ಟು ರೈತರು ಹಣ ಕೊಡಬೇಕಿದ್ದು ವಸೂಲಿ ಮಾಡಿ ಸಂಘಕ್ಕೆ ಸಂಪೂರ್ಣ ಹಣ ತುಂಬುತ್ತೇನೆ, ಕಾಲಾವಕಾಶ ನೀಡಬೇಕು ಎಂದು ವಿನಂತಿಸಿಕೊಂಡ.
ಸುದ್ದಿಗೊಷ್ಠಿಯಲ್ಲಿ ಅಧ್ಯಕ್ಷ ಮೇಘರಾಜ ಪಾಟೀಲ್, ನಿರ್ದೇಶಕರಾದ ರೇಷ್ಮಾ ಪಾಟೀಲ್, ಅಶೋಕ ಮೇಟಿ, ಅನಂತ ಘೊಟ್ನೇಕರ, ಅಸ್ಪಾಕಹ್ಮದ ಪುಂಗಿ, ಬಾಬು ಮಿರಾಶಿ ಇದ್ದರು.
Leave a Comment