ಹಳಿಯಾಳ:- ಕೆಪಿಸಿಸಿಯಿಂದ ಹೊಸದಾಗಿ ಬೂತ್ ಮಟ್ಟದ ಎಜೆಂಟ್(ಬಿಎಲ್ಎ)ಗಳ ನೇಮಕಾತಿ ಪರಿಶೀಲನೆ ಹಿನ್ನೆಲೆ ಬಿಎಲ್ಎಗಳ ಜಿಲ್ಲಾ ಉಸ್ತುವಾರಿಯನ್ನಾಗಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರನ್ನು ನೇಮಿಸಿ ಪಕ್ಷದ ಹೈಕಮಾಂಡ ಆದೇಶ ಹೊರಡಿಸಿದೆ ಎಂದು ಕಾಂಗ್ರೇಸ್ ಪಕ್ಷ ಜಿಲ್ಲಾಧ್ಯಕ್ಷ ಭಿಮಣ್ಣಾ ನಾಯ್ಕ ತಿಳಿಸಿದರು.

ಪಟ್ಟಣದ ಲಕ್ಷ್ಮಣ ಪ್ಯಾಲೇಸ್ನಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಸಚಿವರು ಹಾಲಿ ಶಾಸಕರಾಗಿರುವ ಆರ್ ವಿ ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಆದಿಯಾಗಿ ಹಲವು ಹಿರಿಯ ನಾಯಕರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಕಾಂಗ್ರೇಸ್ ಭದ್ರವಿದೆ ಎಂದರು.
ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ ಅಧಿಕಾರ ವಹಿಸಿಕೊಂಡ ಬಳಿಕ ಪಕ್ಷದ ಸಂಘಟನೆಯಲ್ಲಿ ಅಮೂಲಾಗ್ರ ಬದಲಾವಣೆಗಳು ಆಗುತ್ತಿರುವ ಕಾರಣ ಶಿವಕುಮಾರ ಅವರ ಆದೇಶದಂತೆ ಜಿಲ್ಲೆಯಾದ್ಯಂತ ಕಾಂಗ್ರೇಸ್ ಪಕ್ಷ ಬಲವರ್ಧನೆಗೆ ಸಭೆಗಳನ್ನು ನಡೆಸಲಾಗುತ್ತಿದೆ ಅಲ್ಲದೇ ಗ್ರಾಮ ಪಂಚಾಯತ ಚುನಾವಣೆಗೆ ಪಕ್ಷ ಸಜ್ಜಾಗಿದೆ ಎಂದು ಹೇಳಿದ ಭಿಮಣ್ಣಾ ನಾಯ್ಕ ಯುವ ಕಾರ್ಯಕರ್ತರು ಹುಮ್ಮಸ್ಸಿನಿಂದ ದುಡಿಯಬೇಕೆಂದರು.
ಬಿಎಲ್ಎಗಳು ಚುನಾವಣೆಗೆ ಮಾತ್ರ ಸೀಮಿತವಾಗದೆ ಪ್ರತಿಯೊಬ್ಬರನ್ನು ಮತದಾರರ ಪಟ್ಟಿಗೆ ಸೇರಿಸುವ ಕೆಲಸ ಮಾಡಬೇಕು. ಕಾಂಗ್ರೇಸ್ನಿಂದ ಯುವಕರ ಸದಸ್ಯತ್ವ ಅಭಿಯಾನ ನಡೆದಿದ್ದು ಕಾಂಗ್ರೇಸ್ ಪಕ್ಷ ಯುವಕರಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಯುವಕರನ್ನು ಸೆಳೆಯುವ ಕೆಲಸ ಮಾಡುತ್ತಿದ್ದು ಯುವ ಸಮೂಹ ಕೇವಲ ಬಿಜೆಪಿಯಲ್ಲಿ ಮಾತ್ರವಲ್ಲ ಕಾಂಗ್ರೇಸ್ನಲ್ಲು ಅಪಾರ ಪ್ರಮಾಣದಲ್ಲಿದೆ ಎಂದರು.
ಎಪಿಎಮ್ಸಿ, ಕೃಷಿ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಸಹಿ ಸಂಗ್ರಹ ಮಾಡಲಾಗಿದೆ ಎಂದ ಅವರು ಚುನಾವಣೆಗಾಗಿ, ಅದಿಕಾರಕ್ಕಾಗಿ ಮಾತ್ರ ಪಕ್ಷಕ್ಕೆ ಸೇರದೆ ಸಮಾಜ ಮತ್ತು ದೇಶ ಸೇವೆಗಾಗಿ ಪಕ್ಷಕ್ಕೆ ಸೇರುವಂತೆ ಭೀಮಣ್ಣಾ ನಾಯ್ಕ ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಮಾತನಾಡಿ ಬಿಜೆಪಿಯ ಆಮಿಷಗಳಿಗೆ ಬಲಿಯಾಗಿದ್ದ ರೈತ ಹಾಗೂ ಯುವ ಸಮೂಹಕ್ಕೆ ಈಗ ಬಿಜೆಪಿಯ ಬಣ್ಣ ತಿಳಿಯುತ್ತಿದ್ದು, ಬಿಜೆಪಿಯ ರೈತ ವಿರೋಧಿ ಕಾಯ್ದೆಗಳಿಗೆ ದೇಶದ ರೈತ ಬೇಸತ್ತಿದ್ದಾನೆ ಹಾಗೂ ಉದ್ಯೋಗ ಸೃಷ್ಠಿ ಇಲ್ಲದೇ ಕೊಟ್ಯಂತರ ಯುವಕರು ನಿರುದ್ಯೋಗಿಗಳಾಗಿದ್ದು ಬಿಜೆಪಿಯ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಅಸಮಾಧಾನಗೊಂಡಿದ್ದು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದು ಮುಂದಿನ ದಿನಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆಂದರು.
ಕಾಂಗ್ರೇಸ್ ಪಕ್ಷ ಯುವಕರನ್ನು ಕಾಂಗ್ರೇಸ್ ಕಡೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಕ್ಷೇತ್ರದಲ್ಲಿ ನಡೆದಿರುವ ಯುವಕರ ನೊಂದಣಿ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು ತಮಗೆ ಬಿಎಲ್ಎ ಜಿಲ್ಲಾ ಮಟ್ಟದ ಜವಾಬ್ದಾರಿ ನೀಡಿರುವುದರಿಂದ ಶಾಸಕ ಆರ್ ವಿ ದೇಶಪಾಂಡೆ ಅವರ ನೇತೃತ್ವದಲ್ಲಿ ಹಾಗೂ ಎಲ್ಲರ ಸಹಕಾರದೊಂದಿಗೆ ಉತ್ತಮ ಕಾರ್ಯ ಮಾಡಿ ಜಿಲ್ಲೆಯಲ್ಲಿ ಪಕ್ಷ ಬಲವರ್ಧನೆಗೆ ಶ್ರಮಿಸುವುದಾಗಿ ಹೇಳಿದ ಅವರು ಮುಂದಿನ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೇಸ್ ಪಕ್ಷ ಬಹುಮತ ಸಾಧಿಸಲಿದೆ ಎಂದರು. ಹಳೆಯ ಕಾರ್ಯಕರ್ತರು ಮತ್ತು ಯುವಕರನ್ನು ಒಗ್ಗೂಡಿಸಿ ಕೆಲಸ ಮಾಡುವ ಭರವಸೆಯನ್ನು ನೀಡಿದರು ಘೊಟ್ನೇಕರ.
ಯುವಕರಲ್ಲಿ ಜಾಗೃತಿ ಮೂಡಿಸಬೇಕಿದೆ, ಯುವಕರಲ್ಲಿ ಸಂಘಟನೆ ಅಗತ್ಯತೆ ಇದೆ ಎಂದ ಘೊಟ್ನೇಕರ ಮಾಸ್ಕ್ ಧರಿಸದಿದ್ದರೇ ಹಾಕುವ 1 ಸಾವಿರ ದಂಡದ ಬದಲು ಸರ್ಕಾರ ಎಲ್ಲ ಜನರಿಗೆ ಉಚಿತವಾಗಿ ಮಾಸ್ಕ್ ವಿತರಿಸಲಿ ದಂಡದ ಮೊತ್ತವನ್ನು 50 ರಿಂದ 100 ರೂ.ಗೆ ಇಳಿಸಲಿ ಎಂದು ಆಗ್ರಹಿಸಿದರು.
ಸುದ್ದಿಗೊಷ್ಠಿಯಲ್ಲಿ ಪ್ರಮುಖ ಮುಖಂಡರಾದ ಎಸ್.ಕೆ.ಭಾಗವತ, ರಮೇಶ ದುಬಾಶೆ, ಶ್ರೀನಿವಾಸ ಘೊಟ್ನೇಕರ, ರವಿ ತೊರಣಗಟ್ಟಿ, ಬಿಡಿ ಚೌಗಲೆ, ಶಿವಪುತ್ರಪ್ಪಾ ನುಚ್ಚಂಬ್ಲಿ, ಸಿಎಫ್ ನಾಯ್ಕ, ಸತ್ಯಜೀತ ಗಿರಿ, ಮಾಲಾ ಬ್ರಗಾಂಜಾ ಇದ್ದರು.
Leave a Comment