ಹಳಿಯಾಳ:- ಕಳೆದ ಸಾಲಿನಲ್ಲಿ ರೈತರು ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಸಾಗಿಸಿದ ಕಬ್ಬಿಗೆ ಯೋಗ್ಯ ಬೆಲೆಯೂ ನೀಡದೆ ಹಾಗೂ ಎರಡನೇ ಕಂತನ್ನು ಬಾಕಿಯಾಗಿಟ್ಟುಕೊಂಡು ರೈತರಿಗೆ ಕಂಪೆನಿ ವಂಚಿಸುತ್ತಿದೆ ಎಂದು ಬಿಜೆಪಿ ಪಕ್ಷ ಜಿಲ್ಲಾ ಮುಖಂಡ ಮಂಗೇಶ ದೇಶಪಾಂಡೆ ಆರೋಪಿಸಿದ್ದಾರೆ.

ಬಿಜೆಪಿ ಜಿಲ್ಲಾ ಹಿರಿಯ ಖಾಯಂ ಆಹ್ವಾನಿತ ಸದಸ್ಯರಾಗಿರುವ ಅವರು ಪತ್ರಿಕಾ ಹೇಳಿಕೆ ಮೂಲಕ ಪ್ಯಾರಿ ಸಕ್ಕರೆ ಕಾರ್ಖಾನೆ ವಿರುದ್ದ ಕಿಡಿ ಕಾರಿದ್ದಾರೆ. ಪಕ್ಕದ ಬೆಳಗಾವಿ ಜಿಲ್ಲೆಯ ಕಾರ್ಖಾನೆಗಳು ಕಳೆದ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ 2500 ನೀಡಿವೆ ಅಲ್ಲದೇ ಪಕ್ಕದ ಮಹಾರಾಷ್ಟ್ರದಲ್ಲಿ 2700 ರಿಂದ 3000 ರೂ. ವರೆಗೆ ದರವನ್ನು ನೀಡಲಾಗಿದೆ. ಸಕ್ಕರೆ ಬೆಲೆ ಎಲ್ಲೆಡೆ ಏಕರೂಪದಲ್ಲಿ ಇರುವಾಗ ಕಂಪೆನಿಯವರು ಮಾತ್ರ ಕಬ್ಬಿಗೆ ಕಡಿಮೆ ದರ ನೀಡಲು ಕಾರಣವೇನು ಎಂದು ದೇಶಪಾಂಡೆ ಪ್ರಶ್ನೀಸಿದ್ದಾರೆ.
ಕಬ್ಬು ಕಡಿದು ಸಾಗಾಟ ಮಾಡುವಾಗ ಕೂಡ ಸ್ಥಳೀಯ ರೈತರಿಗೆ ಸಾಕಷ್ಟು ತೊಂದರೆ ಕೊಡುವ ಕಂಪೆನಿಯವರು ಹಳಿಯಾಳ ಭಾಗದ ರೈತರ ಕಬ್ಬನ್ನು ಬಿಟ್ಟು ಹೊರಗಿನ ಭಾಗದ ಕಬ್ಬನ್ನು ಹೆಚ್ಚಿನ ಪ್ರಮಾಣದಲ್ಲಿ ತರಿಸಿಕೊಳ್ಳುತ್ತಿದ್ದು ಇದನ್ನು ನೋಡಿದರೇ ಸ್ಥಳೀಯ ರೈತರಿಗೆ ಕಡಿಮೆ ದರ ಕೊಡಲು ಕಂಪೆನಿ ಮಾಡುತ್ತಿರುವ ಷಡ್ಯಂತ್ರಗಳೆಂದು ತಿಳಿಯಬೇಕಾಗುತ್ತದೆ ಎಂದಿರುವ ಮಂಗೇಶ ಅವರು ಇನ್ನು ಒಂದು ತಿಂಗಳಿನಲ್ಲಿ ಪ್ರಸಕ್ತ ವರ್ಷದ ಕಬ್ಬು ನುರಿಸುವ ಪ್ರಕ್ರಿಯೇ ಆರಂಭವಾಗುತ್ತದೆ ಹೀಗಾಗಿ ಕೂಡಲೇ ಕಳೆದ ವರ್ಷದ ಬಾಕಿ ಕನಿಷ್ಠ ಪ್ರತಿ ಟನ್‍ಗೆ 500 ರೂಪಾಯಿಗಳನ್ನು ರೈತರಿಗೆ ಕೊಡಬೇಕು. ಕೊರೊನಾ ಸಂಕಷ್ಟದ ಸಮಯದಲ್ಲಿ ಇದು ರೈತರಿಗೆ ಸಹಕಾರಿಯಾಗಲಿದೆ ಎಂದಿದ್ದಾರೆ.
2016-17ನೇ ಸಾಲಿನ ಪ್ರತಿ ಟನ್ ಕಬ್ಬಿಗೆ 305 ರೂ. ಬಾಕಿ ಕೊಡುವ ಬಗ್ಗೆ ವಾಗ್ದಾನ ಮಾಡಿದ್ದ ಕಂಪೆನಿಯವರು ಅದನ್ನು ಸಹ ರೈತರಿಗೆ ಸಂದಾಯ ಮಾಡಿಲ್ಲ ಹೀಗಾಗಿ 305 ರೂ. ಬಾಕಿ ಜೊತೆಗೆ ಕಳೆದ ವರ್ಷದ 2ನೇ ಕಂತಿನ ಬಾಕಿ ಹಣವನ್ನು ರೈತರಿಗೆ ಸಂದಾಯ ಮಾಡಿಯೇ ಈ ವರ್ಷದ ಕಬ್ಬು ನುರಿಸುವ ಕಾರ್ಯಕ್ಕೆ ಕಂಪೆನಿ ಚಾಲನೆ ನೀಡಬೇಕು ಎಂದು ಆಗ್ರಹಿಸಿರುವ ಮಂಗೇಶ ದೇಶಪಾಂಡೆ ರೈತರು ಎಲ್ಲ ರೀತಿಯ ಸಹಕಾರ ನೀಡುತ್ತಿದ್ದು ಇದರ ದುರುಪಯೋಗವನ್ನು ಪ್ಯಾರಿ ಸಕ್ಕರೆ ಕಾರ್ಖಾನೆ ಪಡೆಯದೇ , ರೈತ ವಿರೋಧಿ ನೀತಿಯನ್ನು ಬಿಟ್ಟು ಸರಿಯಾದ ಮಾರುಕಟ್ಟೆ ದರವನ್ನು ರೈತರಿಗೆ ನೀಡಬೇಕು ಇಲ್ಲವಾದಲ್ಲಿ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಜೊತೆಗೆ ಊಗ್ರ ಹೋರಾಟವನ್ನು ನಡೆಸಲಾಗುವುದು ಎಂದು ದೇಶಪಾಂಡೆ ಎಚ್ಚರಿಕೆ ನೀಡಿದ್ದಾರೆ.
Leave a Comment