ಸಾರ್ವಜನಿಕರು ಓಡಾಡುವ ಕಚ್ಚಾ ರಸ್ತೆ, ಕಾಲುದಾರಿ, ಗೃಂಥಾಲಯ, ಪಂಚಾಯತ್ ಆವರಣ, ದೇವಸ್ಥಾನಗಳ ಎದುರು, ಉದ್ಯಾನವನ, ಹೆದ್ದಾರಿಯ ವೃತ್ತಗಳು ಸೇರಿದಂತೆ ನಗರ ಗ್ರಾಮೀಣ ಪ್ರದೇಶಗಳೆಂಬ ಬೇದವಿಲ್ಲದೇ ಆಯಕಟ್ಟಿನ ಸ್ಥಳಗಳಲ್ಲಿ ಕಳೆದ ಐದಾರು ವರ್ಷಗಳಿಂದ ಸೋಲಾರ್ ಬೀದಿ ದೀಪಗಳನ್ನು ಅಳವಡಿಸಿದ್ದೇ ಅಳವಡಿಸಿದ್ದು. ಆದರೆ ಇತ್ತೀಚೆಗೆ ಅವುಗಳ ಸ್ಥಿತಿಗತಿಯನ್ನು ಅವಲೋಕಿಸಿದರೆ ಸೋಲಾರ್ ದೀಪದ ಅಳವಡಿಕೆಗ ಶಕ್ತಿ ಮೂಲಗಳ ಸಂರಕ್ಷಣೆಗಿಂತ ಭ್ರಷ್ಟಾಚಾರಿಗಳ ಕಿಸೆಯ ಭಾರ ಹೆಚ್ಚಿಸುವುದಕ್ಕೇ ಹೆಚ್ಚು ಉಪಯೋಗವಾಯ್ತಾ? ಎನ್ನುವ ಪ್ರಶ್ನೆ ಕಾಡದಿರದು.

ಕಳೆದ 10 ವರ್ಷಗಳ ಅವಧಿಯಲ್ಲಿ ಬಹುತೇಕ ಎಲ್ಲಾ ಗ್ರಾಮಪಂಚಾಯತಗಳಲ್ಲೂ ಬೀದಿ ದೀಪವಾಗಿ ಸೋಲಾರ್ ದೀಪಗಳನ್ನೇ ಅಳವಡಿಸಿದ್ದಾರೆ ಮತ್ತೂ ಅಳವಡಿಸುತ್ತಲೂ ಇದ್ದಾರೆ. ವಿಪರ್ಯಾಸ ಎಂದರೆ ಒಮ್ಮೆ ಕಂಬ ನೆಟ್ಟು ಬಂದರೆ ಮತ್ತೆ ಆ ದಿಕ್ಕಿನತ್ತ ಯಾರೂ ಮುಖವನ್ನೇ ಹಾಕಿಲ್ಲವೇನೋ ಎನ್ನುವಂತಾಗಿದೆ ಸೋಲರ್ ದೀಪಗಳ ಕಥೆ ವ್ಯಥೆ. ಇಂದು ಒಂದು ಪಂಚಾಯತದಲ್ಲಿ ನೂರು ಸೊಲಾರ್ ದೀಪಗಳ ಅಳವಡಿಕೆಯಾದರೆ ಅದರಲ್ಲಿ 80 ಕ್ಕೆ ಬ್ಯಾಟರಿಗಳೇ ಇಲ್ಲ. ಎಲ್ಲವೂ ಚೋರರ ಪಾಲಾಗಿದೆ. ವಿಚಿತ್ರ ಎಂದರೆ ಒಂದೆರಡು ಪಂಚಾಯತ್ ಬಿಟ್ಟರೆ ಮತ್ಯಾರೂ ಈ ಬಗ್ಗೆ ಪೊಲೀಸ್‍ರಿಗೆ ದೂರು ನೀಡುವುದಕ್ಕೂ ಮುಂದಾಗಿಲ್ಲ. ಇನ್ನು ಅಳಿದುಳಿದ ಸೋಲಾರ್ ಪ್ಯಾನೆಲ್‍ಗಳೂ ನಿರ್ವಹಣೆ ಇಲ್ಲದೇ ಕೆಲಸ ಮಾಡುತ್ತಿಲ್ಲವಾಗಿದೆ.
ಸೋಲಾರ್ ದೀಪಗಳನ್ನು ಅಳವಡಿಸುವಾಗಲೇ ಪೂರೈಕೆದಾರರು ಮತ್ತು ಪಂಚಾಯತ್‍ನವರ ಕುಚ್ ಕುಚ್ ವ್ಯವಹಾರ ನಡೆಯುವುದು ಗುಟ್ಟಾಗಿಯೇನೂ ಉಳಿದಿಲ್ಲ. ದುಬಾರಿ ಬೆಲೆಗೆ ಕಳಪೆ ವಸ್ತುಗಳನ್ನು ಪೂರೈಸಿ ಜನರ ಕಣ್ಣಿಗೆ ಮಣ್ಣೆರಚುವ ಟೆಂಡರ್‍ದಾರರು ಇದನ್ನು ಪ್ರಶ್ನಿಸಬೇಕಾಗಿದ್ದ ಸದಸ್ಯರ ಬಾಯಿಯನ್ನೂ ಮುಚ್ಚಿಸಿರುತ್ತಾರೆ. ಎಸ್ಕಾಂ ಗೆ ಪದೇ ಪದೇ ವಿದ್ಯುತ್ ಬಿಲ್ ಕಟ್ಟುವ ರಗಳೆಗೆ ಶಾಶ್ವತ ಪರಿಹಾರ ಎನ್ನುವ ನಿಟ್ಟಿನಲ್ಲಿ ಅಳವಡಿಕೆಯಾದ ಸೋಲಾರ್ ಬೀದಿ ದೀಪಗಳು ಬೆಳಕು ಚೆಲ್ಲುವುದ ಬಿಟ್ಟು ಬರೇ ಕಳೇಬರದಂತೆ ನಿಂತಿರುವುದನ್ನು ಕಂಡಾಗ ಈ ಯೋಜನೆ ಜನರ ತೆರಿಗೆ ದುಡ್ಡನ್ನು ಪೋಲುಮಾಡುವ ಇನ್ನೊಂದು ಮಾರ್ಗವಾಯಿತೇನೋ ಎನಿಸದಿರದು.

Leave a Comment