ರೈತ ವಿರೋಧಿ ನೀತಿಯ ವಿರುದ್ದ, ಹಿಂದಿನ ಬಾಕಿ, ಪ್ರಸಕ್ತ ವರ್ಷ ಕಬ್ಬಿಗೆ ದರ ನಿಗದಿಗೆ ಆಗ್ರಹ.
ಹಳಿಯಾಳ:- ಸದಾಕಾಲ ರೈತ ವಿರೋಧಿ ಧೋರಣೆ ಅನುಸರಿಸುತ್ತಾ ಬಂದಿರುವ ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಮತ್ತೇ ರೈತರಿಗೆ ಮೋಸ ಮಾಡಲು ಪ್ರಯತ್ನಿಸುತ್ತಿದ್ದು ರೈತರ ಕೊಟ್ಯಂತರ ರೂ. ಬಿಲ್ ಬಾಕಿ ಇಟ್ಟುಕೊಂಡು, ಪ್ರಸಕ್ತ ವರ್ಷದ ಕಬ್ಬಿಗೆ ದರ ನಿಗದಿ ಪಡಿಸದೆ ವಾಮ ಮಾರ್ಗದ ಮೂಲಕ ಕಾರ್ಖಾನೆ ಆರಂಭಿಸುವ ಪ್ರಯತ್ನ ಮಾಡುತ್ತಿರುವುದನ್ನು ಖಂಡಿಸಿ ದಿ.16 ಶುಕ್ರವಾರದಂದು ಕಂಪೆನಿಯ ವಿರುದ್ದ ಹಳಿಯಾಳದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಹಳಿಯಾಳ ತಿಳಿಸಿದೆ.

ಬುಧವಾರ ಪಟ್ಟಣದ ಮರಾಠಾ ಭವನದಲ್ಲಿ ಪತ್ರಿಕಾಗೊಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಘದ ತಾಲೂಕಾಧ್ಯಕ್ಷ ಶಂಕರ ಕಾಜಗಾರ ಹಿಂದಿನ 305 ರೂ. ಬಾಕಿ, 2019-20ನೇ ಸಾಲಿನ ಎರಡನೇ ಕಂತಿನ ಬಾಕಿ ಹಣ ನೀಡದ ಹೊರತು ಹಾಗೂ ಪ್ರಸಕ್ತ ವರ್ಷದ ಕಬ್ಬಿನ ದರ ಘೊಷಣೆ ಮಾಡದೆ ಮೊಸ ಮಾಡುತ್ತಿರುವ ಪ್ಯಾರಿ ಕಾರ್ಖಾನೆಯ ವಿರುದ್ದ ಅಕ್ಟೊಬರ್ ದಿ.16 ಶುಕ್ರವಾರದಂದು ಕಾರ್ಖಾನೆಗೆ ತೆರಳುವ ಮಾರ್ಗವಾದ ಬಸರಿಕಟ್ಟಿ ಪಂಪ್ ಎದುರು ರೈತರು ಕಂಪೆನಿಯ ವಿರುದ್ದ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿರುವುದಾಗಿ ಹೇಳಿದ ಅವರು ರೈತರ ಹೋರಾಟಕ್ಕೆ ಎಲ್ಲ ಸಂಘಟನೆಗಳು ಬೆಂಬಲವನ್ನು ನೀಡುವಂತೆ ಮನವಿ ಮಾಡಿದರು.
ಸಂಘದ ಕಾರ್ಯಾಧ್ಯಕ್ಷ ಕುಮಾರ ಬೋಬಾಟಿ ಮಾತನಾಡಿ ಸರ್ಕಾರದ ನಿರ್ದೇಶನದಂತೆ ಪ್ರಸಕ್ತ ವರ್ಷದ ಕಬ್ಬಿಗೆ ದರ ನಿಗದಿ ಪಡಿಸದೆ, ರೈತರಿಗೆ ಕಬ್ಬಿನ ಬೆಲೆಯಲ್ಲಿ ಮೊಸ ಮಾಡುವ ಉದ್ದೇಶದಿಂದ ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಮೊಂಡುತನ, ದುರಹಂಕಾರ ಪ್ರದರ್ಶಿಸುತ್ತಾ ಗುಂಡಾವರ್ತನೆ ಮೂಲಕ ಕಾರ್ಖಾನೆ ಆರಂಭಿಸುವ ಹುನ್ನಾರ ನಡೆಸಿದೆ ಎಂದು ಕಿಡಿ ಕಾರಿದರು.
ಕಾರ್ಖಾನೆ ಆರಂಭಕ್ಕೂ ಮುನ್ನ ಸರ್ಕಾರದ ನಿರ್ದೇಶನದಂತೆ ಕಂಪೆನಿಯವರು ರೈತರ ಸಭೆ ಕರೆದು ದರ ನಿಗದಿ, ಕಬ್ಬು ಕಟಾವು ಹಾಗೂ ಸಾಗಾಣಿಕೆ ವೆಚ್ಚಗಳನ್ನು ನಿಗದಿಪಡಿಸಬೇಕಾಗಿರುತ್ತದೆ ಆದರೇ ಹಳಿಯಾಳ ಕಾರ್ಖಾನೆಯವರು ಮಾತ್ರ ಇದ್ಯಾವುದನ್ನು ಮಾಡದೇ ಸರ್ಕಾರದ ಆದೇಶವನ್ನೇ ಧಿಕ್ಕರಿಸಿ ವಾಮ ಮಾರ್ಗದ ಮೂಲಕ ಕಂಪೆನಿ ಆರಂಭಿಸಲು ಪ್ರಯತ್ನಿಸುತ್ತಿದ್ದಾರೆಂದು ಕಿಡಿ ಕಾರಿದ ಅವರು ದಿ.10 ಶನಿವಾರದಂದು ಬೆರಳೆಣಿಕೆಯಷ್ಟು ರೈತರಿಗೆ ಮಾತ್ರ ಮಾಹಿತಿ ನೀಡಿ ಏಕಾಏಕಿಯಾಗಿ ತರಾತುರಿಯಲ್ಲಿ ಸಭೆ ಕರೆದಿದ್ದರು ಆದರೇ ಈ ಸಭೆಯನ್ನು ಎಲ್ಲ ರೈತರು ಬಹಿಷ್ಕರಿಸಿದ್ದು, ಮತ್ತೊಮ್ಮೆ ಎಲ್ಲರಿಗೂ ತಿಳಿಸಿ ಕಂಪೆನಿಯ ಆವರಣದಲ್ಲಿ ಸಭೆ ನಡೆಸುವಂತೆ ಆಗ್ರಹಿಸಲಾಗಿದೆ ಎಂದರು.
ಅಲ್ಲದೇ ಕಂಪೆನಿಯವರು ಕಾರ್ಖಾನೆ ವ್ಯಾಪ್ತಿಯನ್ನು ಬಿಟ್ಟು ಹೊರಗಿನಿಂದ ಕಬ್ಬು ತರುತ್ತಿದ್ದು ಸ್ಥಳೀಯವಾಗಿ 324 ರೂ. ಇದ್ದ ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ದೂರದಿಂದ ತರುವ ಕಬ್ಬಿಗೆ ಹೊಲಿಸಿ 777 ರೂ. ಕಡಿತಗೊಳಿಸಲಾಗುತ್ತಿದ್ದು ದೂರದ ವ್ಯತ್ಯಾಸದ ಹಣವನ್ನು ಸ್ಥಳೀಯ ರೈತರ ಬಿಲ್ನಲ್ಲಿ ಪಡೆದು ಬಡ ರೈತರನ್ನು ಹಗಲು ದರೊಡೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿರಂತರವಾಗಿ ರೈತ ವಿರೋಧಿ ಧೋರಣೆ ಅನುಸರಿಸುತ್ತಿರುವ ಕಾರ್ಖಾನೆ ವಿರುದ್ದ ಜನಪ್ರತಿನಿಧಿಗಳು ಮೌನ ವಹಿಸಿರುವುದು ನೋಡಿದರೇ ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ, ಮಾಜಿ ಶಾಸಕ ಸುನೀಲ್ ಹೆಗಡೆ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್, ಕೆನರಾ ಸಂಸದ ಅನಂತಕುಮಾರ ಹೆಗಡೆ ಅವರು ಬಂಡವಾಳ ಶಾಹಿ ಸಕ್ಕರೆ ಕಾರ್ಖಾನೆ ಪರ ಇರುವ ಹಾಗೆ ಕಾಣಿಸುತ್ತಿದೆ ಎಂದು ಆಪಾದಿಸಿದ ಅವರು ಒಂದಾನುವೇಳೆ ಇವರೆಲ್ಲರೂ ರೈತ ಪರ ಇದ್ದರೇ ಅದನ್ನು ಸ್ಪಷ್ಟಪಡಿಸಬೇಕು. ಹಿಂದಿನ ಬಾಕಿ ಬಿಲ್ಗಳನ್ನು ರೈತರಿಗೆ ಕೊಡಿಸಬೇಕು, ಪ್ರಸಕ್ತ ವರ್ಷದ ಕಬ್ಬಿಗೆ ದರ ನಿಗದಿಪಡಿಸಬೇಕು ಇಲ್ಲವೇ ಮುಂದಿನ ದಿನಗಳಲ್ಲಿ ಇವರ ವಿರುದ್ದವು ರೈತರು ಬಿದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತರು ಮತದಾರರೋ ಅಥವಾ ಝೇರೊಕ್ಸ್ ಮಷಿನ್ಗಳೋ ಎಂದು ಶಾಸಕ ಆರ್ ವಿ ದೇಶಪಾಂಡೆ ಅವರನ್ನು ಪ್ರಶ್ನೀಸಿದ ಕುಮಾರ ಬೋಬಾಟಿ ಶಾಸಕರು ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಹೆಬ್ಬಾರ ಅವರು ರೈತರ ಸಂಕಷ್ಟಕ್ಕೆ ಸ್ಪಂದಿಸದೆ ಬಂಡವಾಳಶಾಹಿ ಕಂಪೆನಿಗಳ ಪರ ಇರುವಂತೆ ಪ್ರದರ್ಶಿಸುತ್ತಿರುವುದು ತೀರಾ ದೌರ್ಭಾಗ್ಯದ ಸಂಗತಿಯಾಗಿದೆ ಎಂದರು.
ಸುದ್ದಿಗೊಷ್ಠಿಯಲ್ಲಿ ರೈತ ಸಂಘದ ಪ್ರಮುಖರಾದ ಅಶೋಕ ಮೇಟಿ, ಗೀರಿಶ ಟೋಸುರ, ಸುರೇಶ ಶಿವಣ್ಣವರ, ಅನ್ವರ ಪುಂಗಿ, ಪುಂಡ್ಲಿಕ್ ಗೊಡಿಮನಿ, ನಾರಾಯಣ ಗಾಡೆಕಾರ ಇತರರು ಇದ್ದರು.
Leave a Comment