ಹಳಿಯಾಳ:- ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ವಿರುದ್ದ ಹಳಿಯಾಳ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆಗೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಹಾಗೂ ಮಾಜಿ ಶಾಸಕ ಸುನೀಲ್ ಹೆಗಡೆ ಬೆಂಬಲ ಸೂಚಿಸಿ ರೈತರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

ರೈತರ ಪ್ರತಿಭಟನೆ ಆರಂಭವಾಗುತ್ತಿದ್ದಂತೆ ಕಾಂಗ್ರೇಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರನ್ನು ಭೇಟಿಯಾಗಿ ಕಬ್ಬು ಬೆಳೆಗಾರರ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ಇರುವುದಾಗಿ ಘೋಷಿಸಿದರು. ರೈತರ ಸಮಸ್ಯೆಯ ಬಗ್ಗೆ ನನ್ನ ಗಮನಕ್ಕೆ ಬಂದ ತಕ್ಷಣ ಕಂಪೆನಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಬೇರೆ ಕಾರ್ಖಾನೆಯವರು 2500 ಕ್ಕೂ ಹೆಚ್ಚು ದರ ನೀಡುತ್ತಿದ್ದು ಪ್ಯಾರಿ ಕಾರ್ಖಾನೆ ಕೂಡ ಇದೇ ದರ ನೀಡುವಂತೆ ಒತ್ತಾಯಿಸಿದ್ದೇನೆ ಎಂದ ಅವರು ರೈತರು ಸಾಕಷ್ಟು ಸಂಕಷ್ಟದಲ್ಲಿದ್ದು ಸ್ವಲ್ಪ ತಡವಾಗಿ ಆದರೂ ಬಿಲ್ ಹಾಕಿ ಆದರೇ ಪ್ರತಿ ಟನ್ ಕಬ್ಬಿಗೆ 2500 ರೂ. ಗೂ ಹೆಚ್ಚು ಬೆಲೆ ಕೊಡಲೇಬೇಕೆಂದು ಘೊಟ್ನೇಕರ ಆಗ್ರಹಿಸಿದರು.
ಜೊತೆಗಿದ್ದೇನೆ- ಸುನೀಲ್ ಹೆಗಡೆ :- ಬಿಜೆಪಿ ಪಕ್ಷದ ಮಾಜಿ ಶಾಸಕ ಸುನೀಲ್ ಹೆಗಡೆ ಪ್ರತಿಭಟನೆಯಲ್ಲಿ ಭಾಗವಹಿಸಿ ರೈತರೊಂದಿಗೆ ರಸ್ತೆಯಲ್ಲಿ ಕುಳಿತು ಬೆಂಬಲ ಸೂಚಿಸಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಅವರು ನಾನು ರೈತರ ಜೊತೆಗಿದ್ದೇನೆ ಎಂದ ಅವರು ಅನ್ನದಾತ ರೈತರು ಇಂದು ಬೀದಿಗೆ ಬಂದಿರುವುದು ದುರ್ದೈವದ ಸಂಗತಿಯಾಗಿದೆ. ಕಂಪೆನಿಯ ಧೋರಣೆ ನೀಜಕ್ಕೂ ಬೇಸರವನ್ನುಂಟು ಮಾಡುತ್ತಿದೆ. ರೈತರಿಗೆ ಸದಾಕಾಲ ತೊಂದರೆಯಾಗುತ್ತಿರುವುದು ಖೇದಕರ ಸಂಗತಿಯಾಗಿದೆ ಎಂದ ಅವರು ರೈತರ ಸಮಸ್ಯೆಯ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಮತ್ತು ಸಕ್ಕರೆ ಸಚಿವ ಶಿವರಾಮ ಹೆಬ್ಬಾರ ಅವರ ಗಮನಕ್ಕೆ ತರಲಾಗಿದೆ. ಸಚಿವರು ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು ಸದ್ಯದಲ್ಲೇ ರೈತರ ಸಮಸ್ಯೆಗೆ ಪರಿಹಾರ ದೊರಕುವ ವಿಶ್ವಾಸ ವ್ಯಕ್ತಪಡಿಸಿದ ಹೆಗಡೆ ಪ್ಯಾರಿ ಕಾರ್ಖಾನೆ ರೈತರ ಬೇಡಿಕೆ ಈಡೇರಿಸುವಲ್ಲಿ ಕಾರ್ಯೋನ್ಮುಖವಾಗಬೇಕಿದೆ ಎಂದರು.


ಪ್ರತಿಭಟನೆ ಸಂದರ್ಭದಲ್ಲಿ ದೂರವಾಣಿ ಕರೆ ಮೂಲಕ ರೈತರನ್ನುದ್ದೇಶಿಸಿ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬುರು ಶಾಂತಕುಮಾರ ಸಕ್ಕರೆ ಕಾರ್ಖಾನೆಗಳು ಇಳುವರಿ ಕಡಿಮೆ ತೊರಿಸಿ ರೈತರಿಗೆ ಮೊಸ ಮಾಡುತ್ತಿವೆ. ಎಫ್ಆರ್ಪಿ ದರ ನೀಡುತ್ತಿಲ್ಲ, ಕಬ್ಬು ಕಟಾವು, ಸಾಗಾಣಿಕೆ ವೆಚ್ಚದಲ್ಲೂ ರೈತರಿಗೆ ಮೊಸ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು ಸರ್ಕಾರ ಸಕ್ಕರೆ ಕಾರ್ಖಾನೆಗಳ ಮಾಲೀಕರ ಲಾಭಿಗೆ ಮಣಿದು ರೈತರನ್ನು ಕಡೆ ಗಣಿಸುತ್ತಿದ್ದಾರೆಂದು ಆಕ್ರೊಶ ವ್ಯಕ್ತಪಡಿಸಿದರು. ಹಳಿಯಾಳದ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿದ ಶಾಂತಕುಮಾರ ಈಗಾಗಲೇ ಸಕ್ಕರೆ ಸಚಿವರೊಂದಿಗೆ ಒಂದು ಹಂತದ ಸಭೆ ನಡೆಸಲಾಗಿದ್ದು ಸದ್ಯದಲ್ಲೇ ರೈತರ ಬೇಡಿಕೆಗಳಿಗೆ ಪರಿಹಾರ ದೊರಕುವ ಭರವಸೆ ಇದೆ ಎಂದರು.
ಹಳಿಯಾಳ ಬಿಜೆಪಿ ತಾಲೂಕಾಧ್ಯಕ್ಷ ಗಣಪತಿ ಕರಂಜೆಕರ, ಪ್ರಮುಖರಾದ ಶಿವಾಜಿ ನರಸಾನಿ, ವಾಸು ಪೂಜಾರಿ, ಶಂಕರ ಗಳಗಿ, ವಿಲಾಸ ಯಡವಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.
Leave a Comment