• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ನಾನೇನ ಬರೆಯಲಿ ಇಂದು!!!

October 19, 2020 by Harshahegde Kondadakuli Leave a Comment

ಕೆಲವೊಮ್ಮೆ ಬರಹಗಾರರಿಗೆ ಏನು ಬರೆಯಬೇಕೆಂಬುದೇ ತಿಳಿಯುವುದಿಲ್ಲ. ದಿನಿವಿಡೀ ಕೂತರೂ ಒಂದಕ್ಷರವೂ ಕೈಯಿಂದ ಇಳಿಯುವುದಿಲ್ಲ. ವಾರವಿಡೀ ಯೋಚಿಸಿದರೂ ನಮ್ಮಿಷ್ಟದ ವಿಷಯ- ವಸ್ತುವಾಗಿ ಸಿಗುವುದಿಲ್ಲ. ಅದರಲ್ಲೂ ಬರೆಯುವ ಪರಿಸರ ನಿರ್ಮಾಣವಾಗದ ಹೊರತು ಅದೆಷ್ಟೇ ದೊಡ್ಡ ವಿಷಯ ಲಭಿಸಿದರೂ ಅಕ್ಷರ ಕೆತ್ತುವ ಮನಸ್ಸಾಗುವುದಿಲ್ಲ. ಹಾಗಂತ ಇದು ಎಲ್ಲ ಸಮಯದಲ್ಲೂ ಹೀಗೆ ಆಗುತ್ತದೆ ಎಂದಲ್ಲ. ಕೆಲವೊಮ್ಮೆ ಬರಹದ ವಸ್ತು ಆಗಲು ಸಾಧ್ಯವೇ ಇಲ್ಲದ ಸಂಗತಿಗಳೆಲ್ಲಾ ಬರೆಯುವವರ ಲೇಖನಿಯಿಂದ ಅತ್ಯದ್ಭುತ ಬರಹವಾಗಿ ಹೊರಹೊಮ್ಮುತ್ತದೆ. ಈ ವಿಷಯವನ್ನು ಹೀಗೂ ಪ್ರಸ್ತುತಪಡಿಸಬಹುದಾ ಎಂದು ಆಶ್ಚರ್ಯಪಡುವ ರೀತಿಯಲ್ಲಿ ಬರಹ ಮೂಡಿಬರುತ್ತದೆ. ಹಾಗಾಗಿ ಒಬ್ಬ ಬರಹಗಾರನಾದವನಿಗೆ ತನ್ನ ಮನಸ್ಥಿತಿಯನ್ನು ಯಾವ ಸಮಯದಲ್ಲಾದರೂ ಬರೆಯುವಂತೆ ಅಣಿಮಾಡಿಟ್ಟುಕ್ಕೊಳ್ಳುವುದು ಸವಾಲಿನ ಕೆಲಸವೇ ಸರಿ. ಈ ಪರಿಸ್ಥಿತಿ ಪತ್ರಕರ್ತರಿಗೆ ದಿನ ಬೆಳಗಾಗುವುದರ ಸಂಗತಿ. ಅವರು ಇರುವುದೇ ಸುದ್ದಿಗಳ ಪ್ರಪಂಚದಲ್ಲಿ. ಕ್ಷಣಕ್ಷಣವೂ ಹೊಸ ಹೊಸ ಸುದ್ದಿಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ಅದನ್ನೆಲ್ಲ ವ್ಯವಸ್ಥಿತವಾಗಿ ಜೋಡಿಸಿ ಓದುಗರ ಕೈಗೆ ತಲುಪಿಸುವ ಗುರುತರವಾದ ಜವಾಬ್ದಾರಿ ನಮ್ಮ ಪತ್ರಕರ್ತರ ಮೇಲಿರುತ್ತದೆ. ಹಾಗಾಗಿ ಅವರ ಕೆಲಸ ನಿಜಕ್ಕೂ ಅಭಿನಂದನಾರ್ಹ.. ಅಯ್ಯೋ ಇಷ್ಟೆಲ್ಲಾ ಪೀಠಿಕೆ ಯಾಕೆ ಎಂತಲೋ?? ನಿನ್ನೆ ಬೆಳಗ್ಗಿನ ವರೆಗೂ ನಾನೇನು ಬರೆಯಬೇಕೆಂದು ನನಗೆ ಗೊತ್ತಿರಲಿಲ್ಲ. ಮದ್ಯಾನ್ಹ ೨ ಗಂಟೆ ಡೆಡ್ ಲೈನ್. ಬರೆಯಬೇಕೆಂದು ಏನೇನನ್ನೋ ಬರೆಯಬಾರದಲ್ಲ. ಹಾಗಾಗಿ ಒಂದೆರಡು ಕಥೆಯನ್ನು ನಿಮ್ಮ ಮುಂದೆ ಹೊತ್ತು ತಂದಿದ್ದೇನೆ. ಓದಿ ಆನಂದಿಸಬಹುದಲ್ಲವೇ?

ಕರುಳಿನ ಪ್ರೀತಿ:
ಬದುಕು ಸುಲಭವಲ್ಲ. ಪ್ರತಿಯೊಂದು ತುತ್ತಿಗೂ ಬೆವರು ಸುರಿಸಲೇಬೇಕು. ಅದರಲ್ಲೂ ನಮ್ಮಂತಹ ಬಡವರಿಗೆ ರಕ್ತ ಸುರಿಸದೇ ಅಣ್ಣ ದಕ್ಕುವುದಿಲ್ಲ. ಹೀಗೆ ಬಡಗಿ ಒಂದೇ ಸಮನೆ ಬಡಬಡಿಸುತ್ತಿದ್ದ. ನಾಳೆ ಸಾಯಂಕಾಲದೊಳಗೆ ಈ ಮಂಚ ಸಿದ್ಧವಾಗಬೇಕು. ಆಗ ಮಾತ್ರ ಹಣ ಸಿಕ್ಕೀತು. ಗೊಣಗುತ್ತಲೇ ಮರವನ್ನು ತಂದು ಮನೆಯ ಮುಂದಿನ ಅಂಗಳದಲ್ಲಿ ಹಾಕಿದ. ಉಪಕರಣಗಳನ್ನು ತಂದು ಕೆಲಸ ಪ್ರಾರಂಭಿಸಿದ. ಮುಂಜಾನೆ ಕೆಲಸ ಭಾರವೆನಿಸಲಿಲ್ಲ. ಆದರೆ ಬಿಸಿಲು ಮೇಲೇರುತ್ತಿದ್ದಂತೆ ಹಣೆಯಲ್ಲಿ ಬೆವರು ಮೂಡಿತು. ತಲೆ ಬಿಸಿಯಾಗತೊಡಗಿತು. ಈ ಕೆಲಸವನ್ನು ಮನೆಯ ನೆರಳಿನಲ್ಲಿ ಕುಳಿತು ಮಾಡಲಾಗುವುದಿಲ್ಲ. ಮಧ್ಯಾನ್ಹವಾಯಿತು. ತಲೆಯಲ್ಲಿ ಉಗಮವಾದ ಬೆವರು ಹಣೆಗಿಳಿದು ಕೆನ್ನೆಯಗುಂಟ ಹರಿಯಿತು. ಬೆನ್ನಿನ ಹುರಿಗುಂಟ ನೀರಿಳಿದು ಶರ್ಟು ಹಸಿಯಾಯಿತು. ಬಿರುಸಾದ ಕಟ್ಟಿಗೆ , ಕೆತ್ತಬೇಕಾದರೆ ತುಂಬಾ ಶ್ರಮ ಹಾಕಬೇಕು.
ಈ ಹೊತ್ತಿಗೆ ಬಡಗಿಯ ಮೂಡಿ ತಂದೆ ಬಂದು ಮನೆಯ ಹೊರಾಂಗಣದಲ್ಲಿ ಕುಳಿತ. ಬಿಸಿಲಿನಲ್ಲಿ ಕೆಲಸ ಮಾಡುತ್ತಿದ್ದ ಹುಡುಗನನ್ನು ನೋಡಿದ. “ಏ ಮಗೂ ತಲೆಗೆ ಒಂದು ಟೊಪ್ಪಿಗೆ ಹಾಕಿಕೊಳ್ಳೋ . ಇಲ್ಲದಿದ್ದರೆ ಮರವನ್ನೇ ಮಾನ್ಯ ಒಳಗಡೆ ತಂದುಕೋ ” ಎಂದು ಕೂಗಿದ. ಮಗ ತಲೆ ಎತ್ತಿ ನೋಡಿ, ಹೇಳಿದ “ಇಲ್ಲಪ್ಪ, ಮರ ದೊಡ್ಡದು. ಅದನ್ನು ಇಲ್ಲಿಯೇ ಕೆತ್ತಬೇಕು. ” ” ಆಯ್ತು ತಲೆಗೆ ಟೊಪ್ಪಿಗೆ ಹಾಕಿಕೋ, ಬಿಸಿಲು ಸುಡುತ್ತಿದೆ” ಎಂದ ಅಪ್ಪ. ಮೊದಲೇ ಕೆಲಸದಿಂದ ತಲೆಬಿಸಿಯಾಗಿದೆ. ಅದ್ರ ಮೇಲೆ ಅಪ್ಪನದೊಂದು ಕಿರಿ ಕಿರಿ ಎಂದುಕೊಂಡು ಮಗ ಮಾತಾಡದೆ ಕೆಲಸ ಮುಂದುವರೆಸಿದ. ಅಪ್ಪ ಕೂಗಿದ ” ಮಗಾ ತಲೆ ಸುಡುತ್ತದಲ್ಲೋ? ನಾ ನೋಡಲಾರೆ ಕಣಪ್ಪ.ನಾನೇ ಟೊಪ್ಪಿ ತಂದು ಕೊಡಲೇ? ” ಮಗನಿಗೆ ಸಿಟ್ಟೇ ಬಂತು. ” ಈ ಮುದುಕರಿಗೆ ಸುಮ್ಮನಿರಲಾಗುವುದಿಲ್ಲವಲ್ಲ. ನನಗೋ ಕೆಲಸ ಮುಗಿದರೆ ಸಾಕಾಗಿದೆ” ಎಂದುಕೊಂಡು , ” ಅಪ್ಪಾ ನೀನು ಸ್ವಲ್ಪ ಹೊತ್ತು ಸುಮ್ಮನಿರುತ್ತೀಯ ? ಒಂದೇ ಸಮನೆ ವಟ ವಟ ಎನ್ನಬೇಡ ” ಎಂದು ಕೋಪದಿಂದ ಅರಚಿದ. ಅಪ್ಪ ತೆಪ್ಪಗಾದಂತೆ ಅನ್ನಿಸಿತು.
ಬಡಗಿ ಮತ್ತೆ ಕೆಲಸದಲ್ಲಿ ಮಗ್ನನಾದ . ತನ್ನ ತಂದೆ ಎದ್ದು ಹೋದದ್ದು ಕಾಣಿಸಿತು. ಮುಂದೆ ಐದು ನಿಮಿಷಕ್ಕೆ ತನ್ನ ಹಿಂದೆ ಅಳುವ ದನಿ ಕೇಳಿಸಿತು. ತಿರುಗಿ ನೋಡಿದ. ತನ್ನ ಒಂದು ವರ್ಷದ ಮಗು ಬಿಸಿಲ್ನಲ್ಲಿ ಕೂತಿದೆ. ಅದರ ಮುಖದಿಂದ ಬೆವರು ಇಳಿಯುತ್ತಿದೆ. ಬಡಗಿಗೆ ಕೋಪ ಉಕ್ಕಿತು. ಧಡಕ್ಕನೆ ಎದ್ದ. ಮಗುವನ್ನು ಎತ್ತಿಕೊಂಡು ಮನೆಯೊಳಕ್ಕೆ ನಡೆದ. ಅಪ್ಪ ಮತ್ತೆ ಅಲ್ಲೇ ಕುಳಿತಿದ್ದಾನೆ. “ಅಪ್ಪ ಮಗುವನ್ನು ಯಾರು ಬಿಸಿಲಿನಲ್ಲಿ ಕೂರಿಸಿದ್ದು? ” ” ನಾನೇ ಅವನನ್ನು ಅಲ್ಲಿ ತಂದು ಬಿಟ್ಟಿದ್ದೆ” ಎಂದ ಅಪ್ಪ. ” ನಿನಗೇನು ಬುದ್ಧಿ ಇಲ್ಲವೇ?ಬಿಸಿಲಿನಲ್ಲಿ ಮಗುವಿನ ಗತಿ ಏನಾಗಬೇಕು ?ಅಷ್ಟೂ ತಿಳಿಯುವುದಿಲ್ಲವೇ? ” ಮಗ ಕೂಗಿದ.
ಮುದುಕ ತಂದೆ ಬೊಚ್ಚುಬಾಯಿ ತೆರೆದು ನಕ್ಕ. ” ನಿನ್ನ ಮಗ ಬಿಸಿಲಿನಲ್ಲಿದ್ದಾಗ ನಿನ್ನ ಕರುಳು ಹೇಗೆ ಚುರುಕ್ಕೆಂದಿತೋ ಹಾಗೆಯೇ ನೀನು ಬಿಸಿಲಿನಲ್ಲಿದ್ದಾಗ ನನ್ನ ಕರುಳೂ ಚುರುಕ್ಕೆಂದಿತು – ಈಗ ತಿಳಿಯಿತೇ?” ಎಂದ.

ಕೊಂಬೆಗೆ ಅಂಟಿದ ಗರುಡ:
ಒಬ್ಬ ರಾಜನಿಗೆ ಪ್ರದೇಶದಲ್ಲಿದ್ದ ಅವನ ಸ್ನೇಹಿತ ಎರಡು ಅತ್ಯಂತ ಸುಂದರವಾದ ಗರುಡಗಳನ್ನು ಉಡುಗೊರೆಯಾಗಿ ಕೊಟ್ಟು ಕಳುಹಿಸಿದ. ಅವುಗಳಷ್ಟು ಸುಂದರವಾದ ಪಕ್ಷಿಗಳನ್ನು ರಾಜ ಅದುವರೆಗೂ ನೋಡಿರಲೇ ಇಲ್ಲ. ಅವುಗಳಿಗೆ ಚೆನ್ನಾಗಿ ತರಬೇತಿ ದೊರಕಲೆಂದು ತನ್ನ ರಾಜ್ಯದ ಶ್ರೇಷ್ಠ ಪಕ್ಷಿ ತರಬೇತಿ ದಾರನಿಗೆ ಅದನ್ನು ಒಪ್ಪಿಸಿದ. ಪ್ರತಿದಿನ ಅವುಗಳ ವಿವರ ತನಗೆ ದೊರಕುವಂತೆ ಆಜ್ಞೆ ಮಾಡಿದ.
ತರಬೇತಿದಾರ ತನ್ನ ತರಬೇತಿಯನ್ನು ಆರಂಭಿಸಿದ. ವಾರ ಕಳೆಯಿತು , ತಿಂಗಳು ಕಳೆಯಿತು . ತರಬೇತಿದಾರ ದಿನವೂ ವರದಿ ಒಪ್ಪಿಸುತ್ತಿದ್ದ. ಒಂದು ಗರುಡ ಪಕ್ಷಿ ಗಂಭೀರವಾಗಿ , ರಾಜಯೋಗ್ಯವಾದ ಶೈಲಿಯಿಂದ ಹಾರುತ್ತಾ ಇಡೀ ಆಕಾಶವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಅದು ರೆಕ್ಕೆಯನ್ನು ಬಿಚ್ಚಿ ಆಕಾಶದಲ್ಲಿ ಹಾರಾಡಿದ್ದನ್ನು ನೋಡಿದರೆ ಯಾರಿಗಾದರೂ ಪ್ರೀತಿ , ಅಭಿಮಾನ ಉಕ್ಕಿ ಬರುತ್ತಿತ್ತು. ಆದರೆ ಎರಡನೆಯ ಪಕ್ಷಿಯ ವರದಿ ನಿರಾಶಾದಾಯಕವಾಗಿತ್ತು. ಅದು ಹಾರಲು ಪ್ರಯತ್ನಿಸಲೇ ಇಲ್ಲ. ಎಷ್ಟೇ ಪುಸಲಾಯಿಸಿದರೂ, ಆಸೆ ತೋರಿಸಿದರೂ, ಹೆದರಿಸಿದರೂ ಅದು ತಾನು ಕುಳಿತ ರೆಂಬೆಯನ್ನು ಬಿಟ್ಟು ಸರಿಯುತ್ತಲೇ ಇರಲಿಲ್ಲ. ರಾಜ ಇದನ್ನು ತನ್ನ ಅರಮನೆಯ ಕಿಟಕಿಯಿಂದ ಗಮನಿಸುತ್ತಲೇ ಇದ್ದ.
ಅವನಿಗೆ ಈ ಗರುಡ ಪಕ್ಷಿಯ ಬಗ್ಗೆ ಚಿಂತೆಯಾಗಿ ಮತ್ತೊಬ್ಬ ತರಬೇತುದಾರನನ್ನು ನೇಮಿಸಿದ. ಆದರೆ ಪರಿಣಾಮ ಮಾತ್ರ ಬೇರಾಗಲಿಲ್ಲ. ಚಿಂತಿಸಿದ ರಾಜ ತನಗೆ ಇದನ್ನು ಕಾಣಿಕೆಯಾಗಿ ನೀಡಿದ ಸ್ನೇಹಿತನನ್ನು ಸಂಪರ್ಕಿಸಿ ಆ ದೇಶದ ವಿಶೇಷ ತರಬೇತುದಾರನನ್ನು ಕರೆಸಿದ. ಅವನು ಏನೇನೋ ಪ್ರಯೋಗಗಳನ್ನು ಮಾಡಿದ. ಆದರೂ ಪಕ್ಷಿ ಹಾರಲು ಇಲ್ಲ.
ಆಗ ರಾಜ ಮತ್ತೊಂದು ವಿಚಾರ ಮಾಡಿದ. ತನ್ನ ದೇಶದ ಹಳ್ಳಿಗಳಲ್ಲಿ ಕೆಲವು ರೈತರು ಗರುಡ ಪಕ್ಷಿಗಳನ್ನು ಸಾಕುವುದು ತಿಳಿದಿತ್ತು. ಮಂತ್ರಿಗಳಿಗೆ ಆದೇಶ ನೀಡಿದ. ” ಅಂತ ಒಬ್ಬ ಹಿರಿಯ ರೈತನನ್ನು ಕರೆತನ್ನಿ ” ಮರುದಿನವೇ ರೈತನೊಬ್ಬ ಹಾಜರಾದ. ಅವನಿಗೆ ಎಲ್ಲ ವಿಷಯವನ್ನು ಸವಿಸ್ತಾರವಾಗಿ ತಿಳಿಸಿದ ರಾಜ ಹೇಗಾದರೂ ಮಾಡಿ ಈ ಸುಂದರವಾದ ಗರುಡ ಪಕ್ಷಿಯನ್ನು ಹಾರುವಂತೆ ಮಾಡಲು ಕೋರಿದ. ಈಗಾಗಲೇ ಪ್ರಯತ್ನಿಸಿ ಸೋತ ತರಬೇತುದಾರರೆಲ್ಲ ಮುಸಿ ಮುಸಿ ನಕ್ಕರು. ತಮ್ಮಂತಹ ಪರಿಣತರಿಗೆ ಸಾಧ್ಯವಾಗದ್ದು ಈ ರೈತನಿಂದ ಹೇಗಾದೀತು ಎಂದು ಕೈತಟ್ಟಿ ನಕ್ಕರು. ಅದನ್ನು ನೋಡಿದ ರೈತ ತಲೆಕೆಡಿಸಿಕೊಳ್ಳಲಿಲ್ಲ.
ಮರುದಿನ ಕಿಟಕಿಯ ಹತ್ತಿರ ನಿಂತ ರಾಜನಿಗೆ ಆಶ್ಚರ್ಯ ಕಾಡಿತ್ತು. ಮೊದಲನೇ ಗರುಡ ಆಕಾಶಕ್ಕೆ ಹಾರಿದ ಎರಡೇ ಕ್ಷಣಗಳಲ್ಲಿ ಎರಡನೆಯ ಹರಲೊಲ್ಲದ ಗರುಡವೂ ಆಕಾಶಕ್ಕೆ ಹಾರಿತ್ತು. ತನ್ನ ವಿಶಾಲವಾದ ರೆಕ್ಕೆಗಳನ್ನು ಹರಡಿಕೊಂಡು ನಿಜವಾದ ಬಾನಿನ ರಾಜನಂತೆ ಮೈದುಂಬಿ ಹಾರುತ್ತಿತ್ತು. ರಾಜ ಸಂತೋಷದಿಂದ ಕೂಗಿದ. “ಪವಾಡ ಮಾಡಿದ ರೈತನನ್ನು ತಕ್ಷಣ ಕರೆತನ್ನಿ” ರೈತ ಬಂದು ಕೈಜೋಡಿಸಿ ನಿಂತ. ರಾಜ, ” ಈ ಅಸಾಧ್ಯವಾದ ಪವಾಡವನ್ನು ನೀನು ಹೇಗೆ ಮಾಡಿದೆ ,ಅದೂ ಒಂದೇ ದಿನದಲ್ಲಿ” ಎಂದು ಕೇಳಿದ. ರೈತ ನಿಧಾನವಾಗಿ ಹೇಳಿದ, ” ನಾನು ಏನೂ ಮಾಡಲಿಲ್ಲ ಪ್ರಭು , ಗರುಡ ಕುಳಿತಿದ್ದ ಮರದ ಕೊಂಬೆಯನ್ನು ಕತ್ತರಿಸಿ ಬಿಟ್ಟೆ. “

                 ಈ ಎರಡೂ ಕಥೆಗಳು ತನ್ನದೇ ಆದ ಸಂದೇಶವನ್ನು ಸಾರುತ್ತವೆ. ಮೊದಲನೆಯದು ನಾವು ಬೇರೆಯವರ ಸ್ಥಾನದಲ್ಲಿ ನಿಂತಾಗಲೇ ಅದರ ನೋವು ಕಷ್ಟ ತಿಳಿಯುತ್ತದೆ. ಅಲ್ಲದೆ ನಾವು ಎಷ್ಟೇ ದೊಡ್ಡವರಾದರೂ ನಮ್ಮ ತಂದೆ ತಾಯಿಯರಿಗೆ ಮಕ್ಕಳಾಗೇ ಇರುತ್ತೇವೆ, ನಾವು ಚೂರು ಕಷ್ಟಪಟ್ಟರೂ ಅವರು ಅದನ್ನು ಸಹಿಸಲಾರರು. ಇನ್ನು ಎರಡನೆಯದು  ಬಹಳಷ್ಟು ಜನರ ಪರಿಸ್ಥಿತಿ ಕೂಡ ಹಾರಲಾರದ ಗರುಡನಂತೆಯೇ. ನಮ್ಮಲ್ಲಿ ಅಪರಿಮಿತವಾದ ಶಕ್ತಿಯಿದೆ , ಸಾಮರ್ಥ್ಯವಿದೆ. ಆದರೆ ನಾವು ಭಯದಿಂದಲೋ ಭದ್ರತೆಯ ಚಿಂತೆಯಿಂದಲೋ ಇರುವುದಕ್ಕೇ ಅಂಟಿಕೊಂಡು ಕುಳಿತಿದ್ದೇವೆ. ಹೊಸದನ್ನೇನಾದರೂ ಮಾಡ ಹೊರಟರೆ ಇದ್ದದ್ದೇ ಕಳೆದುಹೋದರೆ ಏನು ಗತಿ ಎಂದು ಹೆದರಿ ನಮ್ಮ ಶಕ್ತಿಗಳನ್ನು ಕುಗ್ಗಿಸಿ ಅವುಗಳನ್ನು ಯೋಜಿಸದೇ ಸಮಾಧಿ ಮಾಡಿಬಿಡುತ್ತೇವೆ. ಜೀವನದ ಕೊನೆಯಲ್ಲಿ ಬಳಸದೇ ಹಾಗೆಯೇ ಉಳಿದು ಮುಗ್ಗಾಗಿ ಹೋದ ಸಾಮರ್ಥ್ಯಗಳ ಬಗ್ಗೆ ಚಿಂತಿಸಿ ನಿಟ್ಟುಸಿರು ಬಿಡುತ್ತೇವೆ. ನಾವಿರುವ , ಭದ್ರತೆಯೆಂದು ಭಾವಿಸಿರುವ , ಕೊಂಬೆಯನ್ನು ಕತ್ತರಿಸಿಕೊಂಡಾಗಲೇ ನಾವು ಆಗಸವನ್ನು ಆಳಬಲ್ಲೆವೆಂಬ, ಸಾಗರನ್ನೂ ದಾಟಬಲ್ಲೆವೆಂಬ ಶಕ್ತಿಯ ಅರಿವಾಗುತ್ತದೆ. 
                             ಅಂತಹ ಶಕ್ತಿಗಳು ಎಲ್ಲರಲ್ಲಿಯೂ ಇದೆ. ನನ್ನಲ್ಲಿ, ನಿಮ್ಮಲ್ಲಿ, ಎಲ್ಲರಲ್ಲೂ. ಆದರೆ ಅದನ್ನು ಮುಚ್ಚಿದ ಗುಂಡಿಗೆಯಿಂದ ಹೊರತೆಗೆಯುವ ಕಾರ್ಯ ನಮ್ಮಿಂದಲೇ ಆಗಬೇಕು. ಆಗ ಮಾತ್ರ ಮಹಾತ್ಕಾರ್ಯವೊಂದು ಕೈಗೂಡಲು ಸಾಧ್ಯ. ಬನ್ನಿ ನಮ್ಮೆಲ್ಲರ ಸುಪ್ತ ಶಕ್ತಿಯನ್ನು ಜಾಗೃತಗೊಳಿಸಿಕೊಳ್ಳೋಣ. ಆ ಮೂಲಕ ಭಾರತನ್ನು ಮತ್ತೆ ವೈಭವದತ್ತ ಎಳೆದೊಯ್ಯೋಣ...  ಭಾರತ ವಿಶ್ವಗುರುವಾಗಲಿ..... ಬನ್ನಿ ಬದಲಾಗೋಣ.....ಬದಲಾಯಿಸೋಣ..

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: ಪುರವಣಿಗಳು

Explore More:

About Harshahegde Kondadakuli

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar