ನವರಾತ್ರಿ ಎಂದರೆ ಕೇವಲ ೯ ದಿನಗಳ ಕಾಲ ದೇವಿಯ ದೇವಾಲಯಗಳನ್ನು ವಿವಿಧ ರೀತಿಯಲ್ಲಿ ಶೃಂಗರಿಸಿ ಹತ್ತು ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವುದು ಎನ್ನುವ ಭಾವನೆ ಹಲವರಲ್ಲಿದೆ. ಆದರೆ ಗ್ರಾಮೀಣ ಭಾಗದಲ್ಲಿ ಇದಕ್ಕಿಂತಲೂ ಸೊಗಸಾದ ಸರಳ ಆಚರಣೆಗಳು ತೀರಾ ಇತ್ತೀಚಿನ ವರೆಗೂ ಅಸ್ಥಿತ್ವದಲ್ಲಿತ್ತು. ನವರಾತ್ರಿ ಅಥವಾ ದಸರಾ ರಜೆ ಎಂದರೆ ಸಾಕು ಗ್ರಾಮೀಣ ಭಾಗದ ಮಕ್ಕಳ ಮನಸ್ಸಿನಲ್ಲಿ ಅಶ್ವತ ಕಟ್ಟೆ ಹಾಗೂ ಕಲ್ಪವೃಕ್ಷ ಅಥವಾ ತೆಂಗಿನ ಮರವನ್ನು ಸುತ್ತುವ ಖುಷಿ ಕಣ್ಮುಂದೆ ಸುಳಿದಾಡುತ್ತಿತ್ತು. ನಸುಕಿನಲ್ಲಿಯೇ ಎದ್ದು ಸ್ನಾನ ಮಾಡಿ ಹೂ ಕೊಯ್ದು ಊರ ಮಕ್ಕಳೆಲ್ಲಾ ತಾ ಮುಂದು ತಾ ಮುಂದು ಎಂದು ಪೈಪೋಟಿಗೆ ಬಿದ್ದವರಂತೆ ಮಿಗಿಲು ಸಂಖ್ಯೆಯಲ್ಲಿ ಕಟ್ಟೆ ಸುತ್ತುತ್ತಿದ್ದರು. ಆದರೆ ಇಂದಿನ ಕಾಲಘಟ್ಟದಲ್ಲಿ ಮನೆಯಂಗಳದ ಹೊರಗೆ ಕಾಲಿಡುವುದಕ್ಕೂ ಅಂಜುವ ಮಕ್ಕಳಿಗೆ ಕಟ್ಟೆ ಸುತ್ತುವುದು ಎಂದರೆ ಏನೆಂದೇ ಅರ್ಥವಾಗಲಿಕ್ಕಿಲ್ಲ.

ಊರಿನಲ್ಲಿ ಅರಳಿಕಟ್ಟೆಗಳಿಲ್ಲದಿದ್ದರೆ ಕಿಲೋಮೀಟರ್ ದೂರದಲ್ಲಿರುವ ಪಕ್ಕದೂರಿನ ಕಟ್ಟೆಯನ್ನಾದರೂ ಸುತ್ತಿ ಬರುತ್ತಿದ್ದರು. ಅದು ಸಾಧ್ಯವಿಲ್ಲವೆಂದಾದರೆ ಮನೆಯೆದುರು ಇರುವ ತೆಂಗಿನ ಮರಕ್ಕೇ ಹೂ ಮುಡಿಸಿ ಭಕ್ತಿಯಿಂದ ಪ್ರದಕ್ಷಿಣೆ ಹಾಕುತ್ತಿದ್ದರು. ಆದರೆ ಉತ್ತಮ ಆರೋಗ್ಯಕ್ಕಾಗಿ ಜಾಗಿಂಗ ಮೊರೆ ಹೋಗುವ ಮಂದಿಗೆ ಮುಂಜಾನೆ ಎದ್ದು ಅರಳಿಕಟ್ಟೆ ಪ್ರದಕ್ಷಿಣೆ ಹಾಕುವುದೂ ಜಾಗಿಂಗ್‌ನ ಇನ್ನೊಂದು ಪ್ರಕಾರ ಅನ್ನಿಸುವುದಿಲ್ಲ. ಆರೋಗ್ಯ ರಕ್ಷಣೆಯ ಜೊತೆ ಮರಗಳನ್ನೂ ದೇವರೆಂದು ಪೂಜಿಸುವ ಮೂಲಕ ಪ್ರಕೃತಿಯನ್ನು ಗೌರವಿಸಬೇಕು ಎನ್ನುವ ಸಂದೇಶವನ್ನು ಒಟ್ಟೊಟ್ಟಿಗೆ ನೀಡುತ್ತಿದ್ದ ಆಚರಣೆಯೊಂದು ಆಧುನಿಕತೆಯ ಜಂಜಾಟದಲ್ಲಿ ಕಳೆದು ಹೋಗುತ್ತಿದೆ.
ಕೊರೊನಾ ಕಾರಣಕ್ಕೆ ಆನ್ಲೆöÊನ್ ಕ್ಲಾಸ್ ಸುರುವಾಗಿರುವುದರಿಂದ ಸರಸ್ವತಿ ಪೂಜೆಗೆ ಪುಸ್ತಕ ಇಡಬೇಕೋ ಮೊಬೈಲ್ ಇಡಬೇಕೋ ಎಂದು ಪ್ರಶ್ನಿಸುವ ಜನರು ನಮ್ಮ ಹಿರಿಯರು ಪಾಲಿಸಿಕೊಂಡು ಬಂದ ಉತ್ತಮ ಆಚರಣೆಗಳ ಹಿಂದಿನ ಸತ್ವವನ್ನು ಅರಿತು ಅದೇ ಮಾರ್ಗದಲ್ಲಿ ನಡೆಯುವ ಪ್ರಯತ್ನ ಮಾಡುತ್ತಿಲ್ಲ. ಮಕ್ಕಳನ್ನು ಪುಸ್ತಕದ ಹುಳುವಾಗಿಸುತ್ತಿರುವ ತಂದೆ ತಾಯಿಗಳೂ ಸಮಾಜದಲ್ಲಿನ ಅನಪೇಕ್ಷಿತ ಬೆಳವಣಿಗೆಗೆ ಕಾರಣರು, ಸುತ್ತಲ ಪರಿಸರದೊಂದಿಗೆ ಬದುಕುವ ಕಲೆಯನ್ನು ಎಳವೆಯಿಂದಲೇ ರೂಢಿಸಬೇಕು ಎನ್ನುವ ಹಿರಿಯರ ಮಾತನ್ನು ಕೇಳಿಸಿಕೊಳ್ಳುವವರಿಲ್ಲದಂತಾಗಿದೆ.

Leave a Comment