ಹಳಿಯಾಳ :- ಕೊಪ್ಪಳ ಜಿಲ್ಲೆ ಗಂಗಾವತಿಯ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೇ ಹಿನ್ನೆಲೆ ಕಾಂಗ್ರೇಸ್ ಸದಸ್ಯ ಮನೋಹರಸ್ವಾಮೀ ಅವರನ್ನು ಅಪಹರಿಸಿರುವುದನ್ನು ಖಂಡಿಸಿರುವ ಉತ್ತರ ಕನ್ನಡ ಜಿಲ್ಲೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಬಂಧಿತ ಎಲ್ಲ ಆರೋಪಿಗಳಿಗೆ ಕಠಿಣ ಶಿಕ್ಷೇ ಆಗಬೇಕು ಹಾಗೂ ಕೃತ್ಯದ ಹಿಂದಿರುವವರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಪಟ್ಟಣದ ತಮ್ಮ ಕಚೇರಿಯಲ್ಲಿ ಶುಕ್ರವಾರ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಈ ಪ್ರಕರಣ ಸಂಬಂಧ ಹಳಿಯಾಳದಲ್ಲಿ ಮೂವರು ಕಿಡ್ನಾಪರ್ಸ್ಗಳನ್ನು ಬಂಧಿಸಿದ್ದು ಅಲ್ಲದೇ ಅಪಹರಣಕ್ಕೊಳಗಾದ ನಗರಸಭೆ ಸದಸ್ಯ ಮನೋಹರಸ್ವಾಮಿ ಹಿರೇಮಠ ಅವರನ್ನು ರಕ್ಷಿಸಿದ್ದು ಹಳಿಯಾಳ ಪೋಲಿಸರಿಗೆ ಧನ್ಯವಾದ ಸಲ್ಲಿಸಿದರು.
ಈ ವಿಷಯದ ಕುರಿತಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಅವರು ತಮಗೆ ದೂರವಾಣಿ ಕರೆ ಮಾಡಿ ಘಟನೆಯನ್ನು ಖಂಡಿಸಿದರು ಅಲ್ಲದೇ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ ಅಧಿಕಾರಕ್ಕಾಗಿ ಕಾಂಗ್ರೇಸ್ ನಗರಸಭೆ ಸದಸ್ಯರನ್ನು ಅಪಹರಿಸುವ ನೀಚ ಕೃತ್ಯಕ್ಕೆ ಇಳಿದಿರುವ ಬಿಜೆಪಿ ಕಾರ್ಯಕರ್ತರ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು ಎಂದು ತಿಳಿಸಿದ ಘೊಟ್ನೇಕರ ತಾವು ಕೂಡ ಇಂತಹ ಕೃತ್ಯವನ್ನು ಖಂಡಿಸುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಾಮ ಮಾರ್ಗದ ಮೂಲಕ ಅಧಿಕಾರ ಪಡೆಯಲು ಹವಣಿಸುತ್ತಿರುವ ಬಿಜೆಪಿಗರ ಬಗ್ಗೆ ಜನತೆ ಅರಿಯಬೇಕು ಹಾಗೂ ಮುಂದಿನ ಚುನಾವಣೆಗಳಲ್ಲಿ ಇಂತಹವರಿಗೆ ಸೂಕ್ತ ಪಾಠ ಕಲಿಸಬೇಕೆಂದು ಕರೆ ನೀಡಿದರು.
Leave a Comment