ಕುಮಟಾ: ಭಾರತೀಯ ಜೀವವಿಮಾ ನಿಗಮ ಕುಮಟಾ ಶಾಖೆಯ ವತಿಯಿಂದ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಳ್ವೆಕೋಡಿಯನ್ನು ವಿಮಾ ಶಾಲೆ ವಿಮಾ ಗ್ರಾಮವೆಂದು ಕುಮಟಾ ಶಾಖೆಯ ಶಾಖಾಧಿಕಾರಿ ತುಳಸೀದಾಸ್ ವಿ. ಪಾವಸ್ಕರ ಘೋಷಣೆ ಮಾಡಿ 50 ಸಾವಿರ ರು. ಚೆಕ್ ವಿತರಿಸಿದರು.

ಅವರು ಅಳ್ವೇಕೋಡಿ ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿ, ಭಾರತೀಯ ಜೀವವಿಮಾ ನಿಗಮವು ವಿಮಾ ವ್ಯವಹಾರದೊಂದಿಗೆ ಸಾಮಾಜಿಕ ಕಳಕಳಿಯನ್ನು ಹೊಂದಿದ್ದು, ನಿಗಮವು ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆಯನ್ನು ನೀಡುತ್ತಿದೆ. ದೇಶದ ಹದಿಮೂರನೇ ಪಂಚವಾರ್ಷಿಕ ಯೋಜನೆಗೆ ಹದಿನಾಲ್ಕು ಲಕ್ಷ ಕೋಟಿ ವಂತಿಗೆ ನೀಡಿದೆ. ಭಾರತೀಯ ಜೀವ ವಿಮಾ ನಿಗಮವು 1956 ರಲ್ಲಿ ರಾಷ್ಟ್ರೀಕರಣಗೊಂಡ ಸಮಯದಲ್ಲಿ 400 ಕೋಟಿ ವಿಮಾ ನಿಧಿ ಹೊಂದಿದ್ದು 63 ವರ್ಷದ ಸುಧೀರ್ಘ ಅವಧಿಯಲ್ಲಿ ಈಗ 32 ಲಕ್ಷ ಕೋಟಿ ವಿಮಾ ನಿಧಿಯನ್ನು ಹೊಂದಲು ಮೂಲ ಕಾರಣರಾದ ಪಾಲಿಸಿದಾರರು ನಮ್ಮ ಸಂಸ್ಥೆಯಲ್ಲಿ ಇಟ್ಟ ವಿಶ್ವಾಸ ವಿಮಾ ಪ್ರತಿನಿಧಿಗಳ ಅವಿರತ ಪ್ರಯತ್ನ ಹಾಗೂ ಸಿಬ್ಬಂದಿ ವರ್ಗದವರ ಕಾರ್ಯ ಚಟುವಟಿಕೆಯಿಂದ ಬೃಹದಾಕಾರವಾಗಿ ಬೆಳೆಯಲು ಸಾಧ್ಯವಾಗಿದೆ ಎಂದರು.
ವೇದಿಕೆಯಲ್ಲಿ ಉಪ ಶಾಖಾಧಿಕಾರಿ ಶ್ರೀದೇವಿ ಪ್ರಸಾದ, ಅಭಿವೃದ್ಧಿ ಅಧಿಕಾರಿ ಶ್ರೀಧರ ಹಿಪ್ಪರಗಿ, ವಿಮಾ ಸಲಹೆಗಾರ ಪ್ರವೀಣ ಹರಿಕಂತ್ರ, ಶಾಲಾ ಮುಖ್ಯಾಧ್ಯಾಪಕ ವಿವೇಕ ನಾಯ್ಕ, ಶಿಕ್ಷಕಿ ಶಾಂತಿ ಅಡಿಗುಂಡಿ, ಗ್ರಾಮ ಪಂಚಾಯತ ಮಾಜಿ ಸದಸ್ಯ ಕೇಶವ ನಾಯ್ಕ, ಎಸ್ಡಿಎಂಸಿ ಅಧ್ಯಕ್ಷ ಸೋಮನಾಥ ಕುಬಲ್, ಸದಸ್ಯರುಗಳಾದ ಪ್ರೇಮನಾಥ ಕುಬಲ್, ಶ್ರೀನಿವಾಸ ಕುಬಲ್, ಶಿಕ್ಷಕಿ ರೇಖಾ ಪಟಗಾರ, ಅಕ್ಷರ ದಾಸೋಹದ ಅನಸೂಯಾ ನಾಯ್ಕ ಉಪಸ್ಥಿತರಿದ್ದರು.
Leave a Comment