ಕುಮಟಾ: ಪಟ್ಟಣದ ಪಾಂಡುರಂಗ ಹೋಟೆಲ್ ಸಮೀಪದ ಅಪ್ಪಣ್ಣ ಭಂಡಾರಿ ಎಂಬುವವರ ಜನರಲ್ ಸ್ಟೋರ್ಗೆ ಗ್ರಾಹಕರ ಸೋಗಿನಲ್ಲಿ ಬಂದ ಕಳ್ಳರು ಕ್ಯಾಶ್ ಬಾಕ್ಸ್ನ ಪಕ್ಕದ ಕೈಚೀಲದಲ್ಲಿದ್ದ 20 ಸಾವಿರ ರೂ ನಗದು ಎಗರಿಸಿದ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಪಟ್ಟಣದ ಪಾಂಡುರಂಗ ಹೋಟೆಲ್ ಸಮೀಪದಲ್ಲಿರುವ ಅಪ್ಪಣ್ಣ ಭಂಡಾರಿ ಅವರ ಮಾಲೀಕತ್ವದ ಜನರಲ್ ಸ್ಟೋರ್ನಲ್ಲಿ 20 ಸಾವಿರ ರೂ ನಗದು ಕಳುವಾಗಿದೆ. ಆತಂಕಗೊಂಡ ಅಂಗಡಿ ಮಾಲೀಕ ಪಕ್ಕದ ಈಸಿ ಲೈಫ್ ಎಂಟ್ರಪ್ರೈಸಸ್ನ ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ಸೇವಾ ಕೇಂದ್ರದ ಹೊರಭಾಗದಲ್ಲಿ ಅಳವಡಿಸಲಾದ ಸಿಸಿ ಕ್ಯಾಮರಾವನ್ನು ಪರಿಶೀಲಿಸಿದ್ದಾರೆ. ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು ಯುವಕರು ಕೈಚೀಲದಲ್ಲಿದ್ದ 20 ಸಾವಿರ ರೂ ನಗದನ್ನು ತಮ್ಮ ಜೇಬಿನಲ್ಲಿ ಹಾಕಿಕೊಳ್ಳುತ್ತಿರುವ ದೃಶ್ಯಾವಳಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಜನರಲ್ ಸ್ಟೋರ್ನಲ್ಲಿ ಖಾಲಿಯಾದ ಸಾಮಗ್ರಿಗಳನ್ನು ತರಲು ಮಾಲೀಕರು ಕೈಚೀಲದಲ್ಲಿ ಹಣ ಹಾಕಿಕೊಂಡು ತೆರಳುವ ಸಂದರ್ಭದಲ್ಲಿ ಫೇಸ್ಟ್ ಖರೀದಿಸಲು ಆಗಮಿಸಿದ ಯುವಕ ಕೈಚೀಲದಲ್ಲಿ ಹಣವಿರುವುದನ್ನು ಗಮನಿಸಿದ್ದಾನೆ. ಈ ಹಣವನ್ನು ಎಗರಿಸುವ ಉದ್ದೇಶದಿಂದಲೇ ಎರಡು ಬಾರಿ ತನ್ನ ಸಹಪಾಟಿಯೊಂದಿಗೆ ಅಂಗಡಿಗೆ ಆಗಮಿಸಿ ಬೇರೆ ಬೇರೆ ಸಾಮಗ್ರಿಗಳನ್ನು ಖರೀದಿಸುವ ಪ್ಲಾನ್ ಮಾಡಿ, ಜ್ಯೂಸ್ ಬಾಕ್ಸ್ ನೀಡುವಂತೆ ಕೇಳಿದ ಕಳ್ಳ, ಅಂಗಡಿ ಮಾಲೀಕ ಒಳಭಾಗಕ್ಕೆ ಹೋದಾಗ ಅವನ ಜೊತೆ ಬಂದ ಇನ್ನೊಬ್ಬ ಕಳ್ಳ ಕೈಚೀಲದಲ್ಲಿದ್ದ 20 ಸಾವಿರ ರೂ ನಗದನ್ನು ಕಳುವು ಮಾಡಿ ಜೇಬಿಗೆ ಹಾಕಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಈ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಅಂಗಡಿ ಮಾಲೀಕ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಈ ವಿಡಿಯೋ ಫೂಟೇಜ್ನ್ನು ಸಂಗ್ರಹಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಮೂಲಕ ಕುಮಟಾ ಪಟ್ಟಣದಲ್ಲೂ ಕಳ್ಳರ ಗ್ಯಾಂಗ್ ಕಾರ್ಯಾಚರಿಸುತ್ತಿರುವುದು ಅಂಗಡಿಕಾರರಲ್ಲಿ ಆತಂಕ ಹುಟ್ಟಿಸಿದೆ. ಅಂಗಡಿ, ಶೋ ರೂಮ್ ಮಾಲೀಕರು ಗ್ರಾಹಕರ ಸೋಗಿನಲ್ಲಿ ಬರುವ ಕಳ್ಳರಿಂದ ಎಚ್ಚರವಹಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ತಕ್ಷಣ ಅವರ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Leave a Comment