ಕುಮಟಾ: ತಾಲೂಕಿನ ಬರಗದ್ದೆಯ ಸೇವಾ ಸಹಕಾರಿ ಸಂಘದ ಮುಂದಿನ 5 ವರ್ಷದ ಅವಧಿಗೆ ನೂತನ ಅಧ್ಯಕ್ಷರಾಗಿ ಗಣಪತಿ ಗೋಪಾಲಕೃಷ್ಣ ಹೆಗಡೆ ಹಾಗೂ ಉಪಾಧ್ಯಕ್ಷರಾಗಿ ಮಹಾಬಲೇಶ್ವರ ಗಜಾನನ ಭಟ್ಟ ಆಯ್ಕೆಯಾಗಿದ್ದಾರೆ.
ತಮಗೆ ಅನ್ಯಾಯವಾಗಿದೆ ಎಂದು ಪ್ರತಿಭಟನೆ ನಡೆಸುತ್ತಿದ್ದ ಸಂಘದ ರೈತ ಸದಸ್ಯರು ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಈಗ ಹೋರಾಟ ನಿರ್ಣಾಯಕ ಹಂತವನ್ನು ತಲುಪಿ, ಕಳೆದ 1 ವಾರದ ಹಿಂದೆ ನಡೆದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ನೂತನ ನಿರ್ದೇಶಕರು ಆಯ್ಕೆಯಾಗಿದ್ದರು. ಎಲ್ಲ 11 ಕ್ಷೇತ್ರದಲ್ಲಿಯೂ ತಮ್ಮದೇ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ರೈತರು ಹಳೆಯ ಆಡಳಿತವನ್ನು ತಿರಸ್ಕರಿಸಿದ್ದರು.

ಕಳೆದ ಕೆಲ ವರ್ಷಗಳಿಂದ ಹಲವು ನಾಟಕೀಯ ಬೆಳವಣಿಗೆ ನಡೆಯುತ್ತಿತ್ತು. ಕೊನೆಗಳಿಗೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯ ಚುನಾವಣೆಯಲ್ಲಿಯೂ ಕೆಲ ಘಟನೆಗಳು ಇದಕ್ಕೆ ಸಾಕ್ಷಿಯಾಯಿತು. ಹಾಲಿ ಕಾರ್ಯದರ್ಶಿ ಮತ್ತು ಸಿಬ್ಬಂದಿಗಳು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆಯ ಚುನಾವಣೆ ವೇಳೆ ಸಂಘದ ಬಾಗಿಲು ತೆರೆಯಲು ಆಗಮಿಸಿಲ್ಲ. ಹೀಗಾಗಿ ಚುನಾವಣಾಧಿಕಾರಿ ಸಮ್ಮುಖದಲ್ಲಿ ಸಂಘದ ಹೊರ ಭಾಗದಲ್ಲಿ ಚುನಾವಣಾ ಪ್ರಕ್ರಿಯೆಗಳನ್ನು ನಡೆಸಿ, ಅಂತಿಮವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆ ನಡೆಸಲಾಯಿತು.
ಬಾಕ್ಸ್: ಕಳೆದ ಕೆಲ ವರ್ಷಗಳ ಹಿಂದೆ ತಾಲೂಕಿನ ಬರಗದ್ದೆಯ ಸೇವಾ ಸಹಕಾರಿ ಸಂಘದಲ್ಲಿ ಕೋಟ್ಯಾಂತರ ರೂ. ಅವ್ಯವಾಹಾರವಾಗಿದೆ ಎಂಬ ಆರೋಪ ಕೇಳಿ ಬಂದು, ಜಿಲ್ಲೆಯಾದ್ಯಂತ ಭಾರೀ ಸುದ್ದಿಯಾಗಿತ್ತು. ಈ ನಡುವೆ ಅಂತಿಮವಾಗಿ ಹೊಸ ನಿರ್ದೇಶಕರ ಮಂಡಳಿ ರಚನೆಯಾಗಿದೆ. ಒಟ್ಟಾರೆಯಾಗಿ ಈ ಹಿಂದಿನ ಆಡಳಿತ ಮಂಡಳಿ ನಡೆಸಿದ ಅವ್ಯವಾಹಾರದ ಕುರಿತು ಸಮಗ್ರ ತನಿಖೆ ನಡೆಸಲು ಹೊಸ ಆಡಳಿತ ಮಂಡಳಿ ಸೂಚನೆ ನೀಡುತ್ತದೆಯೋ ಎಂಬುದು ಬಹಳ ಕುತೂಹಲಕಾರಿ ಸಂಗತಿಯಾಗಿದೆ.
Leave a Comment