ಹಳಿಯಾಳ:- 2 ವರ್ಷ 2 ತಿಂಗಳುಗಳ ಬಳಿಕ ಅಂತೂ ಹಳಿಯಾಳ ಪುರಸಭೆಗೆ ಆಡಳಿತ ಮಂಡಳಿ ನೇಮಕವಾಗಿದೆ. ಪುರಸಭೆಯ ನೂತನ ಅಧ್ಯಕ್ಷರಾಗಿ ಕಾಂಗ್ರೇಸ್ ಪಕ್ಷದ ಸದಸ್ಯರಾಗಿರುವ ಅಜರುದ್ದೀನ್ ಬಸರಿಕಟ್ಟಿ ಮತ್ತು ಉಪಾಧ್ಯಕ್ಷರಾಗಿ ಸುವರ್ಣಾ ಮಾದರ್ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ(ಬಿಸಿಎ)ಅ ಗೆ ಮೀಸಲಾಗಿದ್ದರೇ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿರಿಸಲಾಗಿತ್ತು. ಮಂಗಳವಾರ ಇಲ್ಲಿನ ಪುರಸಭೆಯ ಸಭಾ ಭವನದಲ್ಲಿ ಅಧ್ಯಕ್ಷ -ಉಪಧ್ಯಕ್ಷರ ಆಯ್ಕೆ ಪ್ರಕ್ರಿಯೆಗಳು ನಡೆದವು.
ಹಳಿಯಾಳ ಪುರಸಭೆ ಒಟ್ಟು 23 ಸ್ಥಾನಗಳನ್ನು ಹೊಂದಿದ್ದು ಅದರಲ್ಲಿ ಕಾಂಗ್ರೇಸ್ ಬೆಂಬಲಿತ 14 ಸದಸ್ಯರು, ಬಿಜೆಪಿ 7 ಸದಸ್ಯರು, ಜೆಡಿಎಸ್ ಒಂದು ಹಾಗೂ ಪಕ್ಷೇತರ ಒರ್ವ ಸದಸ್ಯರಿದ್ದಾರೆ.

ಮಂಗಳವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್ ನಿಂದ ಅಝರುದ್ದಿನ್ ಬಸರಿಕಟ್ಟಿ ಮತ್ತು ಬಿಜೆಪಿಯಿಂದ ಪ್ರಕಾಶ ಕಮ್ಮಾರ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನಿಂದ ಸುವರ್ಣಾ ಮಾದರ್ ಬಿಜೆಪಿಯಿಂದ ಶಾಂತಾ ಹಿರೇಕರ್ ನಾಮ ಪತ್ರ ಸಲ್ಲಿಸಿದರು.
ಬಳಿಕ ನಡೆದ ಮತದಾನ ಪ್ರಕ್ರಿಯೇಯಲ್ಲಿ ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಮತ್ತು ವಿಧಾನ ಪರಿಷತ್ ಸದಸ್ಯರು ಭಾಗವಹಿಸಿ ಮತದಾನ ಮಾಡಿದರು. ಇಲ್ಲಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಅಜರುದ್ದೀನ್ ಬಸರಿಕಟ್ಟಿ ಹಾಗೂ ಉಪಾಧ್ಯಕ್ಷ ಸ್ಥಾನದ ಸುವರ್ಣಾ ಮಾದರ್ ಅವರಿಗೆ ಕ್ರಮವಾಗಿ 14 ಕಾಂಗ್ರೇಸ್ ಸದಸ್ಯರು, ಶಾಸಕರ-1, ವಿಪ ಸದಸ್ಯರ-1, ಪಕ್ಷೇತರ ಸದಸ್ಯ-1, ಜೆಡಿಎಸ್ನ-1 ಹೀಗೆ ಇಬ್ಬರಿಗೂ ತಲಾ 18 ಮತಗಳು ಚಲಾವಣೆಯಾಗಿದ್ದರಿಂದ ಅಜರುದ್ದೀನ್ ಅವರು ನೂತನ ಅಧ್ಯಕ್ಷರಾಗಿ ಹಾಗೂ ಸುವರ್ಣಾ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಘೊಷಿಸಿದರು.

ಬಿಜೆಪಿ ಕೇವಲ 7ಸ್ಥಾನ ಹೊಂದಿದ್ದು ಅವರು ವಿರೋಧ ಪಕ್ಷದಲ್ಲಿ ಮುಂದುವರೆಯಲಿದ್ದಾರೆ ಎಂಬುದು ಇಲ್ಲಿ ಸ್ಪಷ್ಟವಾಗಿದೆ.
ನೂತನ ಅಧ್ಯಕ್ಷ ಅಜರುದ್ದೀನ್ ಬಸರಿಕಟ್ಟಿ ಮಾತನಾಡಿ ಸರ್ವಾನುಮತದಿಂದ ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದಕ್ಕೆ ಎಲ್ಲ ಸದಸ್ಯರಿಗೆ ಹಾಗೂ ಶಾಸಕ ಆರ್ ವಿ ದೇಶಪಾಂಡೆ ಹಾಗೂ ವಿಪ ಸದಸ್ಯ ಎಸ್.ಎಲ್.ಘೊಟ್ನೇಕರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದೆ ತಮ್ಮ ಅಧಿಕಾರಾವಧಿಯಲ್ಲಿ ಪಕ್ಷಾತೀತವಾಗಿ ಹಾಗೂ ಜಾತ್ಯಾತೀತವಾಗಿ ಅಭಿವೃದ್ದಿ ಕಾರ್ಯಗಳನ್ನು ಮಾಡುತ್ತೆನೆ ಎಂದು ಭರವಸೆ ನೀಡಿದರು.


ನೂತನ ಉಪಾಧ್ಯಕ್ಷೆ ಸುವರ್ಣಾ ಮಾದರ್ ಮಾತನಾಡಿ ಶಾಸಕ ಆರ್ ವಿ ದೇಶಪಾಂಡೆ, ವಿಪ ಸದಸ್ಯ ಎಸ್.ಎಲ್.ಘೊಟ್ನೇಕರ ಅವರ ಮಾರ್ಗದರ್ಶನದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಳಿಯಾಳದಲ್ಲಿ ಮಾದರಿ ಅಭಿವೃದ್ದಿ ಕಾರ್ಯಗಳನ್ನು ಮಾಡುತ್ತೇವೆ ಎಲ್ಲರ ಸಹಾಯ-ಸಹಕಾರ ಬೇಕು ಎಂದು ಕೊರಿದರು.
ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಶಾಸಕರು ಹಾಗೂ ವಿಪ ಸದಸ್ಯರು ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾಂಗ್ರೇಸ್ ಪುರಸಭೆ ಸದಸ್ಯರಾದ ಸುರೇಶ ತಳವಾರ, ಅನಿಲ ಪಿರಾಜಿ ಗೌಳಿ(ಚವ್ವಾಣ), ರುದ್ರಪ್ಪಾ ಯಲ್ಲಪ್ಪಾ ಕೆಸರೆಕರ, ಸುರೇಶ ವಗ್ರಾಯಿ, ನವೀನ ಕಾಟಕರ, ಪ್ರಭಾಕರ ಗಜಾಕೋಶ, ಮುಸರತಜಹಾ ಬಸಾಪುರ, ಮೊಹನ ಮೇಲಗಿ, ದ್ರೌಪದಿ ಅಗಸರ, ಲಕ್ಷ್ಮೀ ವಡ್ಡರ, ಫಯಾಜಅಹಮ್ಮದ ಶೇಖ, ಶಮಿನಾಬಾನು ಜಂಬುವಾಲೆ ಹಾಗೂ ಪಕ್ಷೇತರ ಸದಸ್ಯ ಶಂಕರ ನಿಂಗಪ್ಪಾ ಬೆಳಗಾಂವಕರ, ಜೆಡಿಎಸ್ ಪಕ್ಷ ಸದಸ್ಯೆ ಶಭನಾ ಸೈಯದಲಿ ಅಂಕೋಲೆಕರ, ಬಿಜೆಪಿಯ ಸದಸ್ಯರಾದ ಚಂದ್ರಕಾಂತ ಕಮ್ಮಾರ, ಉದಯ ಹೂಲಿ, ಸಂತೋಷ ಘಟಕಾಂಬಳೆ, ಶಾಂತಾ ಹಿರೇಕರ, ರೂಪಾ ಗಿರಿ, ಸಂಗೀತಾ ಜಾಧವ, ರಾಜೇಶ್ವರಿ ಹಿರೇಮಠ ಇದ್ದರು.

Leave a Comment