ಯಲ್ಲಾಪುರ:
ಕಡಿಮೆ ಹಣಕ್ಕೆ ಇನೋವಾ ಕಾರು ಕೊಡಿಸುತ್ತೇನೆಂದು ನಂಬಿಸಿ, ಹಣ ಪಡೆದು ವಂಚಿಸುತ್ತಿದ್ದ ಅಂತರ್ರಾಜ್ಯ ಕಳ್ಳನನ್ನು ಯಲ್ಲಾಪುರ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಬಂಧಿತನನ್ನು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮಂಜುನಾಥ.ಬಿ.ಎಸ್ ಎಂದು ಗುರುತಿಸಲಾಗಿದೆ. ಈತ ಪಟ್ಟಣದಲ್ಲಿ ಕೆಲವರಿಗೆ ಹೊಸ ಇನೋವಾ ಕಾರನ್ನು ಕಡಿಮೆ ದರದಲ್ಲಿ ನೀಡುವುದಾಗಿ ಹೇಳಿ, ಹಣ ಪಡೆದುಕೊಂಡಿದ್ದ. ಆದರೆ ಕಾರನ್ನೂ ಕೊಡದೇ, ಹಣವನ್ನೂ ಕೊಡದೇ ವಂಚಿಸಿದ ಕುರಿತು ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ವಿಚಾರಣೆ ವೇಳೆ ಈತ ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿಯೂ ಇದೇ ಮಾದರಿಯ ವಂಚನೆ ಎಸಗಿರುವುದನ್ನು ಬಾಯಿಬಿಟ್ಟಿದ್ದಾನೆ. ಈತನಿಂದ ಕೃತ್ಯಕ್ಕೆ ಬಳಸುತ್ತಿದ್ದ ಬಲೆನೊ ಕಾರ್ ಹಾಗೂ 2.30 ಲಕ್ಷ ರೂ ನಗದು ವಶಪಡಿಸಿಕೊಳ್ಳಲಾಗಿದೆ. ಎಸ್ಪಿ ಶಿವಪ್ರಕಾಶ ದೇವರಾಜು, ಡಿಎಸ್ಪಿ ಜಿ. ಟಿ. ನಾಯಕ ಮಾರ್ಗದರ್ಶನದಲ್ಲಿ ಸಿಪಿಐ ಸುರೇಶ ಯಳ್ಳೂರ ನೇತೃತ್ವದಲ್ಲಿ ಪಿಎಸ್ಐಗಳಾದ ಮಂಜುನಾಥ ಗೌಡರ್, ಭೀಮಸಿಂಗ್ ಲಮಾಣಿ, ಸಿಬ್ಬಂದಿ ಬಸವರಾಜ ಹಗರಿ, ಮಹಮ್ಮದ್ ಶಫಿ, ಗಜಾನನ ನಾಯ್ಕ, ವಿನೋದ ರೆಡ್ಡಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Leave a Comment