ಬೆಂಗಳೂರು;
ಮುಂದಿನ ಮಾರ್ಚ್ ವೇಳೆಗೆ ಕರ್ನಾಟಕ ರಾಜ್ಯದಲ್ಲಿ ಒಂದು ಸಾವಿರ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ವತಿಯಿಂದ ಹುಬ್ಬಳ್ಳಿಯಲ್ಲಿ ಆರಂಭಿಸಲಾಗುತ್ತಿರುವ ಜನೌಷಧಿ ಸಗಟು ವಿತರಣಾ ಕೇಂದ್ರವನ್ನು ಬೆಂಗಳೂರಿನ ಕೇಂದ್ರ ಕಚೇರಿಯಿಂದ ವರ್ಚವಲ್ ಸಭೆಯ ಮೂಲಕ ಉದ್ಘಾಟಿಸಿ ಸಚಿವರು ಮಾತನಾಡಿದರು.
ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಸಹಕಾರ ಸಂಸ್ಥೆಯೊಂದಕ್ಕೆ ಜನೌಷಧಿ ವಿತರಣಾ ಜವಾಬ್ಧಾರಿ ನೀಡಲಾಗಿದೆ. ರಾಜ್ಯ ಸಹಕಾರ ಮಾರಾಟ ಮಹಾಮಂಡಲದವರು ಇದನ್ನು ಚೆನ್ನಾಗಿ ನಿಭಾಯಿಸುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ತಮಗಿದೆ. ಇದರಿಂದ ಜನೌಷಧಿಯ ಸರಬರಾಜನ್ನು ರಾಜ್ಯದ ಮೂಲೆಮೂಲೆಗೂ ವಿಶೇಷವಾಗಿ ಗ್ರಾಮಾಂತರ ಭಾಗಕ್ಕೆ ತಲುಪಿಸಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸಚಿವರು ತಿಳಿಸಿದರು.
ದೇಶದಲ್ಲಿ ಈವರೆಗೆ 6637 ಜನೌಷಧಿ ಕೇಂದ್ರಗಳಿದ್ದು, ಕರ್ನಾಟಕದಲ್ಲಿ 715 ಮಳಿಗೆಗಳಿವೆ. ಬೆಂಗಳೂರಿನಲ್ಲಿ ಜನೌಷಧಿ ಮಳಿಗೆಗಳನ್ನು ತೆರೆಯಲು ಇನ್ನೂ 300 ಅರ್ಜಿಗಳೂ ಸಲ್ಲಿಕೆಯಾಗಿವೆ. ಅವುಗಳನ್ನು ಪರಿಶೀಲಿಸಿ ಆದಷ್ಟು ಬೇಗ ಅನುಮತಿ ನೀಡಲಾಗುವುದು. ರಾಜ್ಯದಲ್ಲಿ ಜನೌಷಧಿ ಕೇಂದ್ರಗಳ ಜಾಲವನ್ನು ವಿಸ್ತರಣೆ ಮಾಡಲು ಮೂರು ವಿಭಾಗಗಳನ್ನಾಗಿ ವಿಭಜನೆ ಮಾಡಲಾಗಿದ್ದು, ಪ್ರತಿಯೊಂದು ವಿಭಾಗದಲ್ಲೂ ಹೆಚ್ಚಿನ ಮಳಿಗೆಗಳನ್ನು ತೆರೆಯುವ ಮೂಲಕ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಔಷಧ ಪೂರೈಕೆಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಆಯುಷ್ಮಾನ್ ಭಾರತ್ ಯೋಜನೆ ಮೂಲಕ 10 ಕೋಟಿ ಜನರಿಗೆ ಪ್ರತಿ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂಪಾಯಿ ಮೊತ್ತದ ಚಿಕಿತ್ಸೆಗೆ ಅವಕಾಶ ನೀಡಲಾಗಿದೆ. ಇಂತಹ ಸಾರ್ವತ್ರಿಕ ಆರೋಗ್ಯ ರಕ್ಷಣಾ ಯೋಜನೆ ಯಾವ ಮುಂದುವರಿದ ದೇಶಗಳಲ್ಲೂ ಇಲ್ಲ. ಕೊರೊನಾ ನಿಯಂತ್ರಣದಲ್ಲಿ ಇಡೀ ವಿಶ್ವಕ್ಕೆ ಹೋಲಿಸಿದರೆ ಭಾರತ ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ಸೋಂಕು ಹರಡುವಿಕೆಯನ್ನು ತಡೆಗಟ್ಟಿದೆ ಎಂದರು.
ಆರೋಗ್ಯ ಸರ್ವೆ ವರದಿ ಪ್ರಕಾರ ಸಾರ್ವಜನಿಕರು ತಾವು ದುಡಿದ ಶೇ.15 ರಿಂದ 20ರಷ್ಟು ಆದಾಯವನ್ನು ಔಷಧಕ್ಕಾಗಿ ವ್ಯಯ ಖರ್ಚು ಮಾಡುತ್ತಿದ್ದಾರೆ ಎಂಬ ಅಂಶ ಕಂಡುಬಂದಿತ್ತು. ಹಾಗಾಗಿ ಜನರನ್ನು ಬಡತನದಿಂದ ಮೇಲೆತ್ತುವ ಕಾರ್ಯ ಸಫಲವಾಗಬೇಕಾದರೆ ಅವರ ಆರೋಗ್ಯ ಪರಿಸ್ಥಿತಿ ಸುಧಾರಣೆ ಅತ್ಯಗತ್ಯವಾಗಿದ್ದು, ಅದಕ್ಕಾಗಿ ಜನೌಷಧಿ ಕೇಂದ್ರಗಳ ಮೂಲಕ ಬ್ರ್ಯಾಂಡೆಡ್ ಔಷಧಿಗಳಂತೆಯೇ ಅಗ್ಗದ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಜನೌಷಧಿ ಕೇಂದ್ರಗಳಲ್ಲಿ ನೀಡಲಾಗುತ್ತಿದೆ, ಔಷಧಿಗೆ ದಿನೇ ದಿನೇ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಸದಾನಂದ ಗೌಡ ಹೇಳಿದರು.
ಇತ್ತೀಚಿನ ದಿನಗಳಲ್ಲಿ ಜನರು ಆಯುರ್ವೇದಿಕ್ ಔಷಧಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿರುವುದರ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಜನೌಷಧಿ ಮಳಿಗೆಗಳಲ್ಲೂ ಆಯುರ್ವೇದಿಕ್ ಔಷಧಗಳು ಲಭ್ಯವಾಗುವಂತೆ ಮಾಡಲು ನಿರ್ಧರಿಸಲಾಗಿದ್ದು, ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವರು ಹೇಳಿದರು.
ಜನೌಷಧಿಯ ದರ ಉಳಿದ ಬ್ರಾಂಡೆಡ್ ಔಷಧಗಳಿಗೆ ಹೋಲಿಸಿದರೆ ಶೇಕಡಾ 10ರಿಂದ ಶೇಕಡಾ 90ರಷ್ಟು ಕಡಿಮೆಯಿದೆ. ದರ ಕಡಿಮೆ ಇದೆ ಅಂದಾಕ್ಷಣ ಜನೌಷಧಿಯ ಗುಣಮಟ್ಟದಲ್ಲಿ ಕೊರತೆಯಿದೆ ಎಂದು ತಿಳಿಯಬೇಕಾಗಿಲ್ಲ. ಜನೌಷಧಿ ಕೇಂದ್ರಗಳಲ್ಲಿ 1270ಕ್ಕಿಂತ ಅಧಿಕ ಬಗೆಯ ಮಾತ್ರೆ ಹಾಗೂ ಔಷಧಗಳು ಲಭ್ಯವಿವೆ. ಹಾಗೆಯೇ 190 ಬಗೆಯ ವೈದ್ಯಕೀಯ ಉಪಕರಣಗಳು ಲಭ್ಯವಿವೆ ಎಂದರು. ಇವೆಲ್ಲವೂ ಉತ್ತಮ ಗುಣಮಟ್ಟದ್ದಾಗಿವೆ. ಸಾಮಾನ್ಯ ಜನ ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಕಾರ ಸಚಿವ ಶ್ರೀ ಎಸ್ ಟಿ ಸೋಮಶೇಖರ್ ಅವರು ಮಾತನಾಡಿ ರಾಜ್ಯದಲ್ಲಿ ಜನೌಷಧದ ಲಾಭವನ್ನು ಬಡವರಿಗೆ ತಲುಪಿಸಲು ಸಹಕಾರ ಇಲಾಖೆಯು ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರಕುಮಾರ್ – ಜನರ ಅನುಕೂಲಕ್ಕಾಗಿ ಸಹಕಾರ ಸಂಘಗಳ ಸಹಯೋಗದಲ್ಲಿ ಹೆಚ್ಚೆಚ್ಚು ಜನೌಷಧಿ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದರು.
ಬಾಗಲೂರಿನಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಉದ್ಘಾಟನೆ
ಈ ಕಾರ್ಯಕ್ರಮದ ನಂತರ ಕೇಂದ್ರ ಸಚಿವ ಶ್ರೀ ಡಿ.ವಿ. ಸದಾನಂದ ಗೌಡ ಅವರು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಾಗಲೂರಿನಲ್ಲಿ ರಾಜ್ಯದ 716ನೇ ಜನೌಷಧಿ ಕೇಂದ್ರವನ್ನು ಉದ್ಘಾಟಿಸಿದರು. ನಂತರ ಅವರು, ಸಾಮಾನ್ಯ ಜನರ ಆರೋಗ್ಯ ರಕ್ಷಣೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೆಚ್ಚಿನ ಒತ್ತು ನೀಡಿದ್ದಾರೆ. ಕೂಲಿಕಾರ್ಮಿಕರು, ಬಡವರು ಹಾಗೂ ಮಧ್ಯಮವರ್ಗದ ಜನರ ಆರೋಗ್ಯ ರಕ್ಷಣೆಗಾಗಿ ಗುಣಮಟ್ಟದ ಔಷಧಗಳನ್ನು ಪೂರೈಸುವ ದೃಷ್ಟಿಯಿಂದ ಜನೌಷಧಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ ಎಂದು ಹೇಳಿದರು.
ಸಾಮಾನ್ಯವಾಗಿ ಮಧುಮೇಹ, ರಕ್ತದೊತ್ತಡ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿರುವ ಜನರು ಪ್ರತಿ ತಿಂಗಳು ಔಷಧಿಗಾಗಿ ಎರಡರಿಂದ ಎರಡೂವರೆ ಸಾವಿರ ರೂಪಾಯಿ ಖರ್ಚು ಮಾಡುತ್ತಿದ್ದರು, ಇದೀಗ 350ರಿಂದ 400 ರೂಪಾಯಿಗೆ ಅವರಿಗೆ ಜನೌಷಧಿ ಮಳಿಗೆಗಳಲ್ಲಿ ಔಷಧ ದೊರಕುತ್ತಿದೆ. ಜನೌಷಧಿ ಮಳಿಗೆಗಳಲ್ಲಿ ಶೇ.10ರಿಂದ ಶೇ.90ರಷ್ಟು ದರ ಕಡಿಮೆಯಾಗುತ್ತದೆ ಎಂದರು.
ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲಾ ತಾಲೂಕು ಸೇರಿದಂತೆ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನೌಷಧಿ ಕೇಂದ್ರಗಳನ್ನು ತೆರೆದು, ಸಾರ್ವಜನಿಕರ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ಕ್ರಮಗಳನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಅವರು ಹೇಳಿದರು.
Leave a Comment