ಯಲ್ಲಾಪುರ:
ಯಾರಾದರೂ ಬಂಗಾರ, ಆಭರಣ ಅಡವಿಡಲು, ಮಾರಾಟ ಮಾಡಲು ಬಂದರೆ ಅವರ ಕುರಿತು ಸರಿಯಾದ ಮಾಹಿತಿ ಇಲ್ಲದೇ ಹಣ ನೀಡಬಾರದು. ಒಂದು ವೇಳೆ ಪರಿಶೀಲನೆ ಮಾಡದೇ ಹಣ ನೀಡಿದಲ್ಲಿ, ಗ್ರಾಹಕರು ನೀಡಿದ ಆಭರಣ ಯಾವುದಾದರೂ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದ್ದಾಗಿದ್ದರೆ ಬ್ಯಾಂಕ್, ಸಹಕಾರಿ ಸಂಸ್ಥೆಗಳ ಸಿಬ್ಬಂದಿ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಐ ಸುರೇಶ ಯಳ್ಳೂರ ಹೇಳಿದರು.

ಅವರು ತಾ.ಪಂ ಸಭಾಭವನದಲ್ಲಿ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ತಾಲೂಕಿನ ಸಹಕಾರಿ ಸಂಘಗಳು ಹಾಗೂ ಬ್ಯಾಂಕ್ಗಳ ಪ್ರಮುಖರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಮ್ಮ ಸಂಸ್ಥೆ, ಎಟಿಎಂಗಳ ಎದುರು 24 ತಾಸು ಕಾರ್ಯನಿರ್ವಹಿಸುವ ಉತ್ತಮ ಗುಣಮಟ್ಟದ ಸಿಸಿ ಕ್ಯಾಮರಾ ಅಳವಡಿಸಬೇಕು. ಸೆಕ್ಯುರಿಟಿ ಗಾರ್ಡ್ ನೇಮಿಸಿಕೊಳ್ಳಬೇಕು. ಸುಭದ್ರ ಸ್ಟ್ರಾಂಗ್ ರೂಂ ಲಾಕರ್, ಬಾಗಿಲು ಅಳವಡಿಸುವುದು, ಅಲ್ಲಿಯೂ ಕ್ಯಾಮರಾ ಅಳವಡಿಸಬೇಕು. ಉನ್ನತ ಗುಣಮಟ್ಟದ ಮೋಷನ್ ಡಿಟೆಕ್ಷನ್ ಕ್ಯಾಮರಾ ಅಳವಡಿಸಬೇಕು. ಡಿವಿಆರ್ ಮತ್ತು ಎನ್ವಿಆರ್ಗಳು ಕಳ್ಳರಿಗೆ ಕಾಣದಂತೆ ಇಡಬೇಕು. ವ್ಯವಹಾರಕ್ಕಾಗಿ ಬರುವ ಗ್ರಾಹಕರ ಸ್ಪಷ್ಟ ಮಾಹಿತಿ ದಾಖಲಿಸಿಕೊಳ್ಳಬೇಕು. ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ಇಲಾಖೆಗೆ ಮಾಹಿತಿ ನೀಡಬೇಕೆಂದರು. ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಹಕಾರಿ ಸಂಘಗಳು, ಬ್ಯಾಂಕ್ಗಳು ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಿಕೊಳ್ಳುವ ಅಗತ್ಯತೆಯಿದೆ ಎಂದು ಎಚ್ಚರಿಸಿದರು.
ಯುಕೆ ಸೌಹಾರ್ದ ಸಹಕಾರಿಯ ಅಧ್ಯಕ್ಷ ಪ್ರಮೋದ ಹೆಗಡೆ, ಹಿತ್ಲಳ್ಳಿಯ ಎಲ್ಎಸ್ಎಂಪಿ ಸೊಸೈಟಿ ಅಧ್ಯಕ್ಷ ಡಿ. ಟಿ. ಹೆಗಡೆ, ಮಾವಿನಮನೆ ಸಹಕಾರಿ ಸಂಘದ ಅಧ್ಯಕ್ಷ ಸುಬ್ಬಣ್ಣ ಬೋಳ್ಮನೆ, ಮರ್ಚಂಟ್ ಕೊ ಆರೇಟಿವ್ನ ಮುಖ್ಯಕಾರ್ಯನಿರ್ವಾಹಕ ನಾಗರಾಜ ಮದ್ಗುಣಿ, ಶ್ರೀಮಾತಾ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿಯ ಶಾಖಾ ವ್ಯವಸ್ಥಾಪಕ ಸಿ. ಎಸ್. ಪತ್ರೆಕರ್, ನಿರ್ದೇಶಕ ಕೆ. ಎಸ್. ಭಟ್ಟ ಆನಗೋಡ, ಕುಂದರಗಿ ಸೇವಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಾಹಕ ನರೇಂದ್ರ ಭಟ್ಟ, ಆನಗೋಡ ಸೇವಾ ಸಹಕಾರಿ ಸಂಘದ ಸುಬ್ರಾಹ ಹೆಗಡೆ ಮಳಗಿಮನೆ, ಎಲ್ಎಸ್ಎಂಪಿ ಸೊಸೈಟಿ ಮುಖ್ಯಕಾರ್ಯನಿರ್ವಾಹಕ ಎಂ. ಎಸ್. ಹೆಗಡೆ ಸೇರಿದಂತೆ ವಿವಿಧ ಸಹಕಾರಿ ಸಂಘಗಳು ಹಾಗೂ ಬ್ಯಾಂಕ್ಗಳ ಪ್ರಮುಖರು ಭಾಗವಹಿಸಿದ್ದರು.
Leave a Comment