ಭಟ್ಕಳ: ವಿಶ್ವ ಪ್ರಸಿದ್ದ ಮುರುಡೇಶ್ವರಕ್ಕೆ ಬರುವ ಪ್ರವಾಸಿಗರಿಗೆ ಆಗುತ್ತಿರುವ ತೊಂದರೆ ಮತ್ತು ಆಗಬೇಕಾದ ಅಭಿವೃದ್ಧಿಯ ಕೊರತೆಯ ಬಗ್ಗೆ ಸಹಾಯಕ ಆಯುಕ್ತರಿಗೆ ಗುರುವಾರದಂದು ಮುರುಡೇಶ್ವರದ ಸಾರ್ವಜನಿಕರು ಮನವಿಯನ್ನು ಸಲ್ಲಿಸಿದರು.
ಮುರ್ಡೇಶ್ವರ ಉತ್ತರ ಕನ್ನಡ ಜಿಲ್ಲೆಯ ಸುಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ವಿಶ್ವದಲ್ಲೇ ಪ್ರಸಿದ್ಧವಾಗಿದೆ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಮಾತ್ರ ತುಂಬಾ ಹಿಂದುಳಿದಿದೆ. ಈ ಧಾರ್ಮಿಕ ಐತಿಹಾಸಿಕ ಸ್ಥಳವನ್ನು ನೋಡಲು ಸಾವಿರೋಪಾದಿಯಲ್ಲಿ ಪ್ರವಾಸಿಗರು ಪ್ರತಿದಿನವೂ ಆಗಮಿಸುತ್ತಾರೆ. ಆದರೆ ಪ್ರವಾಸಿಗರಿಗೆ ಬೇಕಾಗುವ ಮೂಲಭೂತ ಸೌಕರ್ಯಗಳು ಇಲ್ಲದಂತಾಗಿದೆ.

ಪ್ರವಾಸಿಗರ ವಾಹನಗಳನ್ನು ನಿಲ್ಲಿಸಲು ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ಇರುವುದು. ರಾತ್ರಿಯ ಸಮಯದಲ್ಲಿ ಸುಲಭ ಶೌಚಾಲಯ ಇಲ್ಲದಿರುವುದು. ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು ಹಾಗೂ ಸಮುದ್ರದಲ್ಲಿ ಆಟವಾಡಿ ಬಂದವರಿಗೆ ಬಟ್ಟೆ ಬದಲಾಯಿಸಿಕೊಳ್ಳಲು ಡ್ರೆಸ್ಸಿಂಗ್ ರೂಂ ಇಲ್ಲದಿರುವುದು ಪ್ರವಾಸಕ್ಕೆ ಬಂದಿರುವ ಮಹಿಳೆಯರಿಗೆ ತುಂಬಾ ತೊಂದರೆಯಾಗುತ್ತಿದೆ. ಅದರ ಜೊತೆಯಲ್ಲಿ ಮುರ್ಡೇಶ್ವರ ದೇವಸ್ಥಾನದ ಎಡ ಮತ್ತು ಬಲ ಬದಿಯ ಕಡಲತಡದಲ್ಲಿ ಮೀನುಗಾರಿಕೆಯನ್ನು ನಡೆಸುತ್ತಿದ್ದು, ಯಾಂತ್ರಿಕ ದೋಣಿಗಳನ್ನು ಅಲ್ಲಿಯೇ ಇಡುತ್ತಿದ್ದಾರೆ. ಅಷ್ಟೇ ಅಲ್ಲದೇ ಹಿಡಿದು ತಂದ ಮೀನುಗಳಲ್ಲಿ ತಿನ್ನಲು ಯೋಗ್ಯವಲ್ಲದ ಮೀನುಗಳನ್ನು ಅಲ್ಲಿಯೇ ಕಡಲ ತೀರದದಲ್ಲಿ ಎಸೆಯುತ್ತಿದ್ದಾರೆ.
ದೋಣಿಗಳನ್ನು ಕಡಲತೀರದಲ್ಲಿ ಎಲ್ಲೆಂದರಲ್ಲಿ ನಿಲ್ಲಿಸುವದರಿಂದ ಪ್ರವಾಸಿಗರಿಗೆ ಕಡಲತೀರ ಪ್ರವೇಶ ಮಾಡುವುದು ತೀರಾ ಕಷ್ಟಕರವಾಗಿದೆ. ಹಾಗೂ ಕೊಳೆತ ಮೀನು ವಾಸನೆಯಿಂದ ಮುರ್ಡೇಶ್ವರ ಕಡಲತೀರದಲ್ಲಿ ವಿಹಂಗಮನ ನೋಟವನ್ನು ನೋಡುವ ಬದಲು ಮೂಗೂ ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಬಂದೊದಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಹಾಗೂ ಕನಿಷ್ಟ 1 ಅಥವಾ 2 ಕಿಮಿ ದೂರದಲ್ಲಿ ಸುಸಜ್ಜಿತ ರೀತಿಯಲ್ಲಿ ಯಾಂತ್ರೀಕೃತ ದೋಣಿಗಳನ್ನು ನಿಲ್ಲಿಸಲು ಮತ್ತು ಮೀನುಗಾರಿಕೆ ಚಟುವಟಿಕೆ ಮಾಡಲು ವ್ಯವಸ್ಥೆ ಮಾಡಿಕೊಡುವುದರ ಜೊತೆಗೆ ಮುರ್ಡೇಶ್ವರಕ್ಕೆ ಆಗಮಿಸುವ ಪ್ರವಾಸಿಗರಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಜಿಲ್ಲಾಡಳಿತದ ಕಾರ್ಯಕ್ಷಮತೆಯನ್ನು ಪ್ರತಿಯೊಬ್ಬರೂ ಶ್ಲಾಘಿಸುವಂತೆ ಮಾಡುವುದರ ಜೊತೆಗೆ ಮುರ್ಡೇಶ್ವರವನ್ನು ಅತ್ಯುನ್ನತ ಪ್ರವಾಸಿ ತಾಣವಾಗಿ ಮಾಡಬೇಕೆಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂದರ್ಭದಲ್ಲಿ ಮುರುಡೇಶ್ವರದ ಸಾರ್ವಜನಿಕರಾದ ಮಂಜುನಾಥ ನಾಯ್ಕ, ಗಜಾನನ ನಾಯ್ಕ, ನಾಗರಾಜ ಬಾಕಡ, ಶ್ರೀಧರ ದೇವಾಡಿಗ, ವೆಂಕಟೇಶ ಗೊಂಡ, ವಾಹಾಪ್ ಹಯಾತ್, ಸೈಯದ್ ಈಶಾ ಜಮಾಲುದ್ದಿನ್ ಸೇರಿದಂತೆ ಮುಂತಾದವರು ಇದ್ದರು.
Leave a Comment