ದೀಪಾವಳಿ ಅಂದ ತಕ್ಷಣ ಹಳ್ಳಿ ಅಡುಗೆಯ ರುಚಿ ಬಲ್ಲವರಿಗೆ ಥಟ್ಟನೆ ಮೊಗೆ ಕಾಯಿ ಅಕ್ಕಿ ಬಳಸಿ ಮಾಡುವ ಕಡುಬು ನೆನಪಾಗುತ್ತದೆ. ಒಂದರ್ಥದಲ್ಲಿ ಕಡುಬಿಲ್ಲದ ದೀಪಾವಳಿ ಹಬ್ಬದ ಆಚರಣೆಯನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲವೇನೋ ಅನ್ನುವಷ್ಟು ಗ್ರಾಮೀಣ ಭಾಗದಲ್ಲಿ ಕಡುಬು ಹಬ್ಬದ ಆಚರಣೆಯಲ್ಲಿ ಹಾಸುಹೊಕ್ಕಾಗಿದೆ. ಇದೇ ಕಾರಣಕ್ಕಾಗಿಯೇ ದೀಪಾವಳಿ ಸಮಯದಲ್ಲಿ ವ್ಯರ್ಥ ಚರ್ಚೆಗೆ ಕಾರಣವಾಗಿರುವ ಪಟಾಕಿ ನಿಷೇದದ ಬಗ್ಗೆ ಯಾವುದೇ ತಲೆ ಕೆಡಿಸಿಕೊಳ್ಳದ ಮಂದಿ ಹಬ್ಬದ ತಯಾರಿಗೆ ಬೇಕಾದ ಮೊಗೆಕಾಯಿ, ಕಲ್ಲಂಗಡಿ, ಕಬ್ಬು ಮುಂತಾದ ವಸ್ತುಗಳ ಖರೀದಿಯಲ್ಲಿ ವ್ಯಸ್ತರಾದಂತೆ ಕಾಣಿಸುತ್ತಿದೆ.

ಇದರ ಪರಿಣಾಮವೆಂಬಂತೆ ಒಂದು ಜೊತೆ ಮೊಗೆ ಕಾಯಿಗಳ ಬೆಲೆ ಗಾತ್ರಕ್ಕನುಗುಣವಾಗಿ 50 ರಿಂದ ನೂರೈವತ್ತು ರುಪಾಯಿ ವರೆಗೂ ಕೇಳಿಬರುತ್ತಿದೆ.
ದೀಪಾವಳಿ ಮತ್ತು ತುಳಸಿ ಹುಣ್ಣಿಮೆಯ ಗೋ ಪೂಜೆಗೆ ಕಡುಬು ಮಾಡಲು ಬೇಕಾಗುತ್ತದೆ ಎನ್ನುವ ಕಾರಣಕ್ಕಾಗಿಯೇ ಹಳ್ಳಿಗಳ ಪ್ರತಿ ಮನೆಯಲ್ಲೂ ಮೊಗೆ ಕಾಯಿಗಳನ್ನು ಬೆಳೆದುಕೊಳ್ಳುತ್ತಿದ್ದರಾದರೂ ಇತ್ತೀಚೆಗೆ ಈ ಪರಿಪಾಠ ಮರೆಯಾಗಿದ್ದು ಮಳೆಗಾಲದ ತರಕಾರಿ ಬೆಳೆಯುವವರು ಮಾತ್ರ ದೊಡ್ಡ ಪ್ರಮಾಣದಲ್ಲಿ ಮೊಗೆಯನ್ನೂ ಬೆಳೆಯುತ್ತಾರೆ. ಇಲ್ಲಿ ಹೆಗ್ಗಣಗಳ ಕಾಟವಿಲ್ಲದಿದ್ದರೆ ಮೊಗೆ ಕಾಯಿಗಳನ್ನು ತಿಂಗಳುಗಳ ಕಾಲ ಸುಲಭವಾಗಿ ರಕ್ಷಿಸಿಟ್ಟುಕೊಳ್ಳಬಹುದಾದ್ದರಿಂದ ಮೊಗೆ ಬೆಳೆ ಮಳೆಗಾಲದಲ್ಲಿಯೇ ಬಂದರೂ ಬೇಡಿಕೆ ಹೆಚ್ಚಿರುತ್ತದೆ ಎನ್ನುವ ಕಾರಣಕ್ಕೆ ಮಾರಾಟ ಮಾತ್ರ ದೀಪಾವಳಿ ಸಮಯದಲ್ಲಿ ಮಾಡುತ್ತಾರೆ.
ಮೊಗೆ ಕಾಯಿಗಳನ್ನು ಸಣ್ಣಗೆ ಹೆಚ್ಚಿ ಅಕ್ಕಿ ಹಿಟ್ಟಿನ ಜೊತೆ ಕಲಸಿ ಅರಶಿಣ ಎಲೆ ಅಥವಾ ಬಾಳೆ ಎಲೆಯಲ್ಲಿ ಸುತ್ತಿ ಹಬೆಯಲ್ಲಿ ಬೇಯಿಸಿದರೆ ಕಡುಬು ಸಿದ್ಧವಾಗುತ್ತದೆ. ಕಾಯಿ ಬೆಲ್ಲ ಸೇರಿಸಿ ಮಾಡಿದ ಹಾಲಿನಲ್ಲಿ ಮುರಿದ ಕಡುಬು ನುರಿದು ತಿನ್ನುವ ಕ್ಷಣಕ್ಕಾಗಿಯೇ ಕಾಯುವ ಕಡುಬು ಪ್ರಿಯರು ಹಳ್ಳಿಯಲ್ಲಿ ಬಹಳಷ್ಟಿದ್ದಾರೆ. ರಸ್ತೆ ಬದಿಯ ಪಾಸ್ಟ್‍ಪುಡ್ ಅಂಗಡಿಗಳಲ್ಲಿ ಸಿಗುವ ಜಂಕ್‍ಪುಡ್ ತಿಂದು ನಾಲಿಗೆ ರುಚಿ ಕೆಡಿಸಿಕೊಂಡಿರುವ ಇಂದಿನ ಜಮಾನಾದ ಜನರಿಗೆ ಹಳ್ಳಿಯಲ್ಲಿನ ಪೌಷ್ಠಿಕಾಂಶಗಳ ಆಗರವಾಗಿರುವ ಕಡುಬುಗಳ ರುಚಿ ಗೊತ್ತಿಲ್ಲ. ದೀಪಾವಳಿ ಹಬ್ಬದ ನೆವದಿಂದಲಾದರೂ ಮರೆತು ಹೋಗುತ್ತಿರುವ ಕಡುಬುಗಳಂತ ಆರೋಗ್ಯಕ್ಕೂ ಹಿತವೆನಿಸುವ ಖಾದ್ಯಗಳನ್ನು ಇಂದಿನ ಜನಾಂಗಕ್ಕೆ ಪರಿಚಯಿಸುವ ಕೆಲಸವಾಗಬೇಕಿದೆ ಎನ್ನುವುದು ಹಲವು ಹಿರಿಯರ ಅಂಬೋಣ.

Leave a Comment