ಅರ್ಕ (ಶ್ವೇತಾರ್ಕ) ಅಲಕ್ರ (ರಕ್ತಾರ್ಕ) ರೂಪಿಕಾ, ಅಲಾರ್ಕ, ದೇವರ ಎಕ್ಕ, ಎಕ್ಕದಗಿಡ, ಎಕ್ಕದಕಂಟೀರುಯಿ, ಮೊದರ್, ಎರಕ್ಕು, ಎರುಕ್ಕುಂ ಎಕ್ಕ, ಅಕ್ಕಪತ್ರಂ, ಜಿಲ್ಲೆಡು, ಎಂಬ ಹೆಸರುಗಳಿಂದ ಕರೆಯುತ್ತಾರೆ. ಎಕ್ಕದ ಗಿಡವು ಭಾರತದೇಶದ ಎಲ್ಲಾ ಕಡೆಯೂ ಬೆಳೆಯುತ್ತೆ. ಈ ಗಿಡದಲ್ಲಿ ಎರಡು ಪ್ರಭೇದಗಳಿದ್ದು, ಇವೆರಡರಲ್ಲೂ ಒಂದೇ ರೀತಿಯ ಔಷಧೀಯ ಗುಣಗಳಿದ್ದು, ಬಿಳಿ ಬಣ್ಣದ ಹೂವು ಬಿಡುವ ಗಿಡವನ್ನು “ಶ್ವೇತಾರ್ಕ” ಎಂದು, ತಿಳಿ ನೇರಳೆ ಹೂವುಗಳು ಬಿಡುವ ಗಿಡವನ್ನು “ರಕ್ತಾರ್ಕ”ಎಂದು ಪೂರ್ವಿಕರು ಕರೆದಿದ್ದಾರೆ. ಇದು 10-12 ಅಡಿ ಎತ್ತರ ಪೊದೆಯಂತೆ ಬೆಳೆಯುತ್ತೆ. ಹೋಮ, ಯಜ್ಞ ಯಾಗಾದಿಗಳಲ್ಲಿ ಋಷಿಮುನಿಗಳು ಎಕ್ಕದ ಗಿಡವನ್ನು ವಿಶೇಷವಾಗಿ ಬಳಸುತ್ತಿದ್ದರು. ಈ ಗಿಡವನ್ನು ಸಮೂಲ ಸಮೇತ ತುಪ್ಪದೊಡನೆ ಹೋಮಾಗ್ನಿಗೆ ಸಮರ್ಪಿಸಿದಾಗ ಮೇಲೇಳುವ ಹೋಮ ಧೂಮವು ಕೂಡ ಅದ್ಭುತವಾದ ಔಷಧೀಯ ಗುಣಗಳನ್ನು ಹೊಂದಿರುತ್ತೆ.


ಪ್ರಕೃತಿಯ ಅಮೂಲ್ಯ ಸಂಪತ್ತಿನ ರಕ್ಷಣೆ ಹಾಗು ಸಸ್ಯ ಸಂಪತ್ತಿಗೆ ತಗಲುವ ರೋಗ ರುಜಿನಗಳ ನಿವಾರಣೆ ಕೂಡ ಸಾಧ್ಯವಾಗುವುದು, ಯಜ್ಞ ಯಾಗಗಳಲ್ಲಿ ಎಕ್ಕದ ಗಿಡವನ್ನು ಬಳಸುವುದರಿಂದಲೇ….! ಸುಮಾರು 14-15 ವರ್ಷಗಳಾಗಿರುವ ಶ್ವೇತಾರ್ಕದ ಬುಡದಲ್ಲಿ ಅಗೆದಾಗ ವಿಘ್ನೇಶ್ವರನ ರೂಪವನ್ನು ಹೋಲುವಂತಹ ಒಂದು ಆಕಾರವನ್ನು, ಅದರ ಬೇರುಗಳ ಬೆಳವಣಿಗೆಯಲ್ಲಿ ಕಾಣಬಹುದು.ಇದನ್ನು ಗಿಡದಿಂದ ಬೇರ್ಪಡಿಸಿ ತಂದು, ಶುಭ್ರಗೊಳಿಸಿ, ಧೂಪ ದೀಪ, ನೈವೇದ್ಯಗಳನ್ನು ಅರ್ಪಿಸಿ, ಮನೆಯ ದೇವರ ಕೋಣೆಯಲ್ಲಿ ದಕ್ಷಣಾಭಿಮುಖವಾಗಿ ಇಟ್ಟು ಪೂಜಿಸಿದರೆ, ಮನೆಯಲ್ಲಿ ಶಾಂತಿ, ಸಮೃದ್ಧಿ ನೆಲಸಿ, ಕಷ್ಟಕಾರ್ಪಣ್ಯಗಳು, ಆಕಸ್ಮಿಕವಾಗಿ ಎರಗುವ ಅಪಘಾತ, ಅಪಾಯ, ಅಪಮೃತ್ಯುವಿನಿಂದ ಪಾರಾಗುವರು ಎಂದು ಹಳೆಯ ತಾಳೆಗರಿ ಗ್ರಂಥಗಳಲ್ಲಿ ಋಷಿಮುನಿಗಳು ಉಲ್ಲೇಖಿಸಿದ್ದಾರೆ. ಇದರ ಸ್ಪರ್ಶ ಹಾಗು ಪೂಜೆ ಮಾಡುವುದರಿಂದ ಮುಖದಲ್ಲಿ ತೇಜಸ್ಸು, ಕಣ್ಣಿನಲ್ಲಿ ಕಾಂತಿ ಮೂಡುತ್ತದೆ.ಇಷ್ಟಾರ್ಥಸಿದ್ಧಿಯಾಗಿ, ಜನಾಕರ್ಷಣೆಯಾಗುತ್ತೆ. ಶ್ವೇತಾರ್ಕವನ್ನು ಪೂಜಿಸುವ ಪದ್ಧತಿ ಭಾರತದೇಶದ ಎಲ್ಲಾ ಕಡೆಯೂ ನೋಡಬಹುದು.ರಥಸಪ್ತಮಿ ದಿನ ಎಕ್ಕದ ಎಳೆಗಳನ್ನ ತಲೆ, ಭುಜ, ತೊಡೆ, ಪಾದಗಳ ಮೇಲೆ ಇಟ್ಕೊಂಡು ಸ್ನಾನ ಮಾಡಿದರೆ ಸೂರ್ಯನ ಅನುಗ್ರಹ ಲಭಿಸುತ್ತೆ ಎಂದು ಬಲ್ಲವರು ಹೇಳ್ತಾರೆ. “ಅಕ್ಕನಿಲ್ಲದ ಮನೆಯಿರಬಹುದು ಎಕ್ಕ ಹೊಕ್ಕದ ಮನೆಯಿಲ್ಲ” ಎಂಬ ಗಾದೆ ಮಾತಿನಂತೆ. ಹಳ್ಳಿ ಪೇಟೆ ಎಂಬ ಭೇದಭಾವಗಳಿಲ್ಲದೆ ಇದನ್ನ ಪೂಜೆ, ಪುನಸ್ಕಾರಗಳಲ್ಲಿ ಪುರಾತನ ಕಾಲದಿಂದಲೂ ಬಳಸುತ್ತಿದ್ದಾರೆ. ಬಿಳಿ ಎಕ್ಕವನ್ನು ದೇವರ ಎಕ್ಕ ಎಂದು ಸಹ ಕರೆಯುತ್ತಾರೆ. ಹಿಂದೂ ಧಾರ್ಮಿಕ ವಿಧಾನಗಳಲ್ಲಿ ಇದನ್ನ ಸರ್ವಶ್ರೇಷ್ಠವೆಂದು ಪುರಾತನ ಕಾಲದಿಂದಲೂ ಹಿಂದೂಗಳ ನಂಬಿಕೆ, ಇದು ನವಗ್ರಹ ಅಧಿಪತಿಯಾದ ಸೂರ್ಯನನ್ನು ಪ್ರತಿನಿಧಿಸುತ್ತೆ. ಬಿಳಿ ಎಕ್ಕದ ಗಿಡವನ್ನು ಅನೇಕರು ಮನೆ ಮುಂದೆ ಬೆಳೆಸಿರುತ್ತಾರೆ. ಇದು ಮನೆ ಮುಂದೆ ಇದ್ದರೆ ಅದೃಷ್ಟದ ಸಂಖೇತವೆಂದು ಹಿಂದೂಗಳು ಭಾವಿಸುತ್ತಾರೆ.

ಈ ಗಿಡ ಮನೆ ಮುಂದೆ ಇದ್ದರೆ ಯಾವುದೇ ರೀತಿಯ Negative energy ಮನೆಗೆ ಪ್ರವೇಶಿಸುವುದಿಲ್ಲವೆಂದು ಬಲ್ಲವರು ಹೇಳುತ್ತಾರೆ. ಎಕ್ಕದ ಎಲೆಯನ್ನು ಕೆಂಡದ ಮೇಲೆ ಸುಟ್ಟು ಭಸ್ಮ ಮಾಡಿ, ಭಸ್ಮಕ್ಕೆ ಎಮ್ಮೆಯ ಬೆಣ್ಣೆ ಬೆರಸಿ, ಒಡೆದ ತುಟಿಗಳಿಗೆ ಲೇಪಿಸುತ್ತಾ ಬಂದರೆ, ಒಡೆದ ತುಟಿಗಳ ಸಮಸ್ಯೆ ನಿವಾರಣೆಯಾಗುತ್ತೆ. ಎಕ್ಕದ ಬೇರನ್ನು, ಗೋಮೂತ್ರದಲ್ಲಿ ಗಂಧ ತೇಯ್ದು, ಅದಕ್ಕೆ ಸ್ವಲ್ಪ ಅರಸಿಣ ಸೇರಿಸಿ, ಬಿಳಿ ಮಚ್ಚೆ (ತೊನ್ನು) ಮೇಲೆ ದೀರ್ಘ ಸಮಯ ಲೇಪಿಸುತ್ತಾ ಬಂದರೆ, ಮಚ್ಚೆಗಳು ಮಾಯವಾಗಿ, ಚರ್ಮ ಯಥಾಸ್ಥಿತಿಗೆ ಬರುತ್ತೆ. ಹಣ್ಣಾಗಿ ಉದರಿದ ಎಲೆಗಳನ್ನು ಸುಟ್ಟು ತಯಾರಿಸಿದ, ಭಸ್ಮವನ್ನು, ಎರಡು ಚಿಟಿಕೆ, ಜೇನುತುಪ್ಪದಲ್ಲಿ ಬೆರಸಿ, ದಿನಕ್ಕೆ ಎರಡು ಸರ್ತಿ ಎರಡು ಅಥವಾ ಮೂರುವಾರ ಸೇವಿಸಿದರೆ, ಉಬ್ಬಸ (ಅಸ್ತಮಾ) ಅಪಸ್ಮಾರ ರೋಗ, ಹೊಟ್ಟೆಶೂಲೆ ಉಪಶಮನವಾಗುತ್ತೆ. ಬಿಳಿ ಎಕ್ಕದ ಹೂವಿಗೆ ಸಮ ಪ್ರಮಾಣದಲ್ಲಿ ಬೆಲ್ಲ ಬೆರಸಿ, ನುಣ್ಣಗೆ ಅರೆದು, ಗಂಟೆಗೊಮ್ಮೆ ಒಂದು ಚಮಚದಂತೆ 2-3 ದಿನ ಸೇವಿಸಿದರೆ 15-16 ವರ್ಷ ಆಗಿದ್ದರು, ಋತಮತಿಯಾಗದ ಪ್ರಾಯಕ್ಕೆ ಬಂದ ಯುವತಿ, ಋತುಮತಿಯಾಗುವಳು. ಮುಟ್ಟು ತಡವಾಗಿ, ಕ್ರಮತಪ್ಪಿದ ಋತಸ್ರಾವ ಸಮಸ್ಯೆಗೆ ಇದು ದಿವೌಷಧಿ. ಬಿಳಿ ಎಕ್ಕದ ಹೂವಿನಲ್ಲಿರುವ ಕೆಸರದೊಡನೆ ಅಡಿಗೆ ಉಪ್ಪು ಸೇರಿಸಿ, ನುಣ್ಣಗೆ ಅರೆದು, ದಿನವು ಬೆಳಿಗ್ಗೆ ಸಂಜೆ 10-15 ದಿನಗಳ ಕಾಲ ಸೇವಿಸುತ್ತಾ ಬಂದರೆ, ಅಜೀರ್ಣ ಆಹಾರ ಪಚನವಾಗದಿರುವಿಕೆ, ಹೊಟ್ಟೆ ಉಬ್ಬರ,ಹೊಟ್ಟೆ ನೋವು ಸಮಸ್ಯೆಗಳು ನಿವಾರಣೆಯಾಗುತ್ತೆ.
**************
ಸೂಚನೆ:- ಆಯುರ್ವೇದದಲ್ಲಿ ಎಕ್ಕದ ಹಾಲನ್ನು, ಪುರಾತನ ಕಾಲದಿಂದಲೂ ಬಳಸುತ್ತಾ ಬಂದಿದ್ದಾರೆ. ಆದರೆ….! ಹಾಲು ಕಣ್ಣಿಗೆ ಬೀಳದಂತೆ ಹೆಚ್ಚರ ವಹಿಸಬೇಕು. ಹಾಲು ಕಣ್ಣಿಗೆ ಬಿದ್ದರೆ ದೃಷ್ಠಿ ಕಳೆದುಕೊಳ್ಳುವ ಸಂಭವವಿರುತ್ತೆ. ಎಕ್ಕದ ಹಾಲನ್ನು ಆಯುರ್ವೇದದ ರೀತಿ ಉಪಯೋಗಿಸಬೇಕಾದ್ರೆ, ಸೂರ್ಯೋದಯಕ್ಕೆ ಮೊದಲೇ ಉಪಯೋಗಿಸಬೇಕು. ಏಕೆಂದರೆ ಸೂರ್ಯೋದಯದ ನಂತರ ಎಕ್ಕದ ಹಾಲಿಗೆ ವಿಷತತ್ವ ಬರುತ್ತೆ. ಆದ್ದರಿಂದ ಆಯುರ್ವೇದ ಪಂಡಿತರು ಎಕ್ಕದ ಹಾಲನ್ನು ಸೂರ್ಯೋದಯಕ್ಕೆ ಮೊದಲು ಶೇಖರಿಸಿ ಉಪಯೋಗಿಸುತ್ತಾರೆ. ಗರ್ಭಿಣಿ ಸ್ತ್ರೀಯರು, ಹಾಲುಣಿಸುವ ತಾಯಂದಿರು ಯಾವುದೇ ಕಾರಣಕ್ಕೂ ಉಪಯೋಗಿಸಲೇ ಕೂಡದು. ಹಾಲನ್ನು ಹೊಟ್ಟೆಗೆ ತೆಗೆದುಕೊಂಡರೆ, ಏನಾದ್ರೂ ಏರುಪೇರಾದ್ರೆ, ಅಂತಹ ಸಮಯದಲ್ಲಿ ಗರುಗದ ಸೊಪ್ಪಿನ ರಸ ಕುಡಿಸಿದರೆ ಸಮಸ್ಯೆ ನಿವಾರಣೆಯಾಗುತ್ತೆ.
************

ಮೂಲವ್ಯಾಧಿ, ಮೊಳಕೆ ಸಮಸ್ಯೆ ಇದ್ದಾಗ, ಮಲವಿಸರ್ಜನೆ ಸಮಯದಲ್ಲಿ, ನವೆ, ತೀವ್ರ ನೋವು, ರಕ್ತಸ್ರಾವ ಇರುತ್ತೆ. ಹಾಲಿಗೆ ಅರಸಿಣ ಬೆರಸಿ ಲೇಪಿಸುತ್ತಾ ಬಂದರೆ ಶೀಘ್ರ ನಿವಾರಣೆಯಾಗುತ್ತೆ. ಮೈಮೇಲಿನ ಮಚ್ಚೆಗಳ ಮೇಲೆ, ಎಕ್ಕದ ಹಾಲು ಅರಸಿಣ ಕಲಸಿ ಲೇಪಿಸುತ್ತಿದ್ದರೆ, ಮಚ್ಚೆಗಳು ನಿವಾರಣೆಯಾಗುತ್ತೆ. ಚರ್ಮವ್ಯಾಧಿಗಳಾದ, ನವೆ, ಗಜ್ಜಿ, ದದ್ದು, ಹುಳುಕಡ್ಡಿ ಮೇಲೆ ಲೇಪಿಸಿದರೆ ಗುಣವಾಗುತ್ತೆ. ಚೇಳು, ವಿಷ ಜಂತುಗಳು ಕಚ್ಚಿದಾಗ, ಕಚ್ಚಿದ ಗಾಯದ ಮೇಲೆ ಎಕ್ಕದ ಹಾಲು ಲೇಪಿಸುತ್ತಿದ್ದರೆ, ವಿಷ ಪ್ರಭಾವ ಇಳಿದು,ಪ್ರಾಣಾಪಾಯದಿಂದ ಪಾರಾಗುತ್ತಾರೆ. ಹಲ್ಲು ನೋವು ಇರುವಕಡೆ, ಹತ್ತಿಯಲ್ಲಿ ಎಕ್ಕದ ಹಾಲನ್ನು ಅದ್ದಿ ಇಡುತ್ತಾ ಬಂದರೆ ನೋವು ಶೀಘ್ರ ನಿವಾರಣೆಯಾಗುತ್ತೆ. ಮುಖದ ಮೇಲಿನ ಮಚ್ಚೆಗಳಿಗೆ, ಎಕ್ಕದ ಹಾಲು ಅರಸಿಣ ಕಲಸಿ ಲೇಪಿಸುತ್ತಾ ಬಂದಲ್ಲಿ, ಮಚ್ಚೆಗಳು ಮಾಯವಾಗಿ, ಮುಖದ ಚರ್ಮ ಮೃದುವಾಗಿ, ಹೊಳೆಯುತ್ತೆ, ಅಂದವನ್ನು ಹೆಚ್ಚಿಸುತ್ತೆ. ಇದು ಚರ್ಮದ ಅಂದಕ್ಕೆ ಅದ್ಭುತವಾಗಿ ಕೆಲಸ ಮಾಡುತ್ತೆ. ಎಕ್ಕದ ಚಿಗರನ್ನು 48 ದಿನಗಳ ಕಾಲ, ವೀಳೆದೆಲೆಯಲ್ಲಿ ಇಟ್ಟುಕೊಂಡು ತಿಂದರೆ, ಎಂತಹ ಅಸಾಧ್ಯವಾದ ಶ್ವಾಸಕೋಶ ಸಮಸ್ಯೆಗಳಿದ್ದರೂ ನಿವಾರಣೆಯಾಗುತ್ತೆ. ಗ್ರಾಮಾಂತರ ಪ್ರದೇಶಗಳಲ್ಲಿ ಕಾಲಿಗೆ ಮುಳ್ಳು ಚುಚ್ಚಿದರೆ, ಮುಳ್ಳು ತೆಗೆಯಲು ಬರದಿದ್ದರೆ, ಎಕ್ಕದ ಹಾಲನ್ನು ಮುಳ್ಳು ಚುಚ್ಚಿದ ಜಾಗಕ್ಕೆ ಬಿಟ್ಟರೆ, ಮರುದಿನ ಮುಳ್ಳು ತಾನಾಗಿಯೆ ಹೊರಬರುತ್ತೆ. ಮುಳ್ಳಿನ ವಿಷ ನಿವಾರಣೆಯಾಗುತ್ತೆ. ಎಕ್ಕದ ತೊಗಟೆಯನ್ನು ನೆರಳಲ್ಲಿ ಒಣಗಿಸಿ, ಕುಟ್ಟಿ ಪುಡಿಮಾಡಿಟ್ಟುಕೊಂಡು, 1/2 ಚಮಚ ಚೂರ್ಣವನ್ನು, 1 ಚಮಚ ಜೇನುತುಪ್ಪದಲ್ಲಿ ಕಲಸಿ ಸೇವಿಸಿದರೆ ಕಫ, ಕೆಮ್ಮು ನಿವಾರಣೆಯಾಗುತ್ತೆ. ಎಕ್ಕದ ಎಲೆ, ನುಗ್ಗೆ ಎಲೆ, ಅರಸಿಣ ನುಣ್ಣಗೆ ಅರೆದು, ಮೂಲವ್ಯಾಧಿಯಲ್ಲಿ ಕಾಣಿಸಿಕೊಳ್ಳುವ ಮೊಳಕೆ ಮೇಲೆ ಲೇಪಿಸುತ್ತಿದ್ದರೆ, ಶೀಘ್ರ ಪರಿಹಾರ ಕಾಣುತ್ತೆ. ಎಕ್ಕದ ಎಲೆಗಳಿಗೆ ಎಳ್ಳೆಣ್ಣೆ ಸವರಿ, ಕೆಂಡದ ಮೇಲೆ ಹಾಕಿ, ಬಿಸಿಬಿಸಿಯಾಗಿದ್ದಾಗಲೇ, ಕೀಲುನೋವು, ಮಂಡಿನೋವು, ಸೊಂಟನೋವು, ಸಂಧಿವಾತ ಇರುವ ಕಡೆ ಹಾಕಿ ಕಟ್ಟು ಕಟ್ಟಿ, ಬಿಸಿನೀರಿನ ಶಾಖವನ್ನು ಕೊಡುತ್ತಿದ್ದರೆ, ನೋವು ಶೀಘ್ರ ಶಮನವಾಗುತ್ತೆ. ಗರ್ಭಿಣಿ ಸ್ತ್ರೀಯರಿಗೆ ಸ್ತನಗಳಲ್ಲಿ ಗಡ್ಡೆ, ನೋವು ಕಾಣಿಸಿಕೊಂಡರೇ, ಎಕ್ಕದ ಎಲೆಗಳಿಗೆ ಎಳ್ಳೆಣ್ಣೆ ಸವರಿ, ಬೆಂಕಿಕೆಂಡದ ಮೇಲೆ ಹಾಕಿ, ಬಿಸಿಮಾಡಿ ಸ್ತನಗಳ ಮೇಲೆ ಹಾಕಿ, ಹತ್ತಿ ಬಟ್ಟೆಯಲ್ಲಿ ಕಟ್ಟು ಕಟ್ಟುವುದರಿಂದ ನೋವು ನಿವಾರಣೆಯಾಗುತ್ತೆ. ಸ್ತ್ರೀ-ಪುರುಷರಲ್ಲಿ ಅನೇಕರಿಗೆ ಉಷ್ಣ ಪದಾರ್ಥಗಳನ್ನು ಸೇವಿಸಿದಾಗ, ಉಷ್ಣ ಹಿಡಿದು, ಜನನೇಂದ್ರಿಯಗಳಲ್ಲಿ ತಾಳಲಾರದ ಉರಿ, ಮೂತ್ರ ವಿಸರ್ಜನೆ ಮಾಡಲು ಕಷ್ಟಸಾಧ್ಯವಾಗುತ್ತೆ, ಅಂತಹ ಸಮಯದಲ್ಲಿ, ಎರಡೂ ಕಾಲಿನ ಹೆಬ್ಬೆರಳಿನ, ಉಗರು ಕಣ್ಣಿಗೆ ತಾಜಾ ಎಕ್ಕದ ಹಾಲನ್ನು ಬಿಟ್ಟರೆ, ಉರಿ ತಗ್ಗಿ, ಮೂತ್ರ ವಿಸರ್ಜನೆ ಸರಾಗವಾಗಿ, ಸಮಸ್ಯೆ ಶೀಘ್ರ ನಿವಾರಣೆಯಾಗುತ್ತೆ. ಮಧುಮೇಹ ಇರುವುವರು, ತಾಜಾ ಎಕ್ಕದ ಎಲೆಗಳನ್ನು ತಂದಿಟ್ಟುಕೊಂಡು, ರಾತ್ರಿ ಸಮಯದಲ್ಲಿ, ಪಾದಗಳಿಗೆ ಎಲೆಗಳನ್ನು ಹಾಕಿ ಕಟ್ಟುಕಟ್ಟಿ, ಬೆಳಿಗ್ಗೆ ಬಿಚ್ಚಿತ್ತಾ ಬಂದರೆ ಮಧುಮೇಹ ಶೀಘ್ರ ಹತೋಟಿಗೆ ಬರುತ್ತೆ. * ಎಕ್ಕದ ಉಪಯೋಗಗಳು ಅಗಣಿತವಾದದ್ದು.
* ಸೂಚನೆ:- ಎಕ್ಕದ ಯಾವುದೇ ಭಾಗವನ್ನು ಆಯುರ್ವೇದ ವೈದ್ಯರ ಸಲಹೆ ಇಲ್ಲದೆ ನೇರವಾಗಿ ಉಪಯೋಗಿಸಬಾರದು. ಹಾಲು ಕಾಣ್ಣಿಗೆ ಬೀಳದಂತೆ ಎಚ್ಚರವಹಿಸಿ.
Leave a Comment