ನೈಜ ಕಲಾಕೃತಿಗಳ ಮೂಲಕ ತಮ್ಮ ವಿಶಿಷ್ಟ ಕಲಾ ಪ್ರತಿಭೆ ಅನಾವರಣಗೊಳಿಸಿರುವ ಯುವ ಕಲಾವಿದ ಕೌಶಿಕ್ ಕೃಷ್ಣ ಹೆಗಡೆ, ತಮ್ಮ ಕಲಾತ್ಮಕತೆಯಿಂದ ಜನಮನ ಗೆದ್ದಿದ್ದಾರೆ. ಅವರ ಕಲಾಕುಂಚದಲ್ಲಿ ಅರಳಿರುವ ಕಲಾ ರಚನೆಗಳು, ಯುವ ಕಲಾವಿದರಿಗೆ ಸ್ಪೂರ್ತಿಯಾಗಿವೆ. ಈ ಕುರಿತು ಒಂದು ವರದಿ…. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಗಡಿಹಳ್ಳಿಯ ಯುವ ಕಲಾವಿದ ಕೌಶಿಕ್ ಕೃಷ್ಣ ಹೆಗಡೆ ಅನನ್ಯ ಪ್ರತಿಭೆ. ಅವರ ಕೈಚಳಕದಲ್ಲಿ ಮೂಡಿರುವ ಕಲಾಕೃತಿಗಳು ನೈಜತೆಯ ಪ್ರತಿಬಿಂಬವಾಗಿವೆ. ಮಕ್ಕಳ ತುಂಟಾಟ, ಪ್ರಕೃತಿ ಸೌಂದರ್ಯ ರೂಪಕಗಳು, ವನ್ಯಜೀವಿ, ಗ್ರಾಮೀಣ ಪರಿಸರ, ನಾಗಸಾಧುಗಳ ಜೀವನಾಧಾರಿತ ಚಿತ್ರಗಳು ಜೀವತಳೆದಿವೆ. ಅವರ ಕಲಾಕೃತಿಗಳು ರಾಷ್ಟ್ರೀಯ , ಅಂತಾರಾಷ್ಡ್ರೀಯ ಮಟ್ಟದಲ್ಲಿಯೂ ಖ್ಯಾತಿಗಳಿಸಿವೆ. ಮೂರೇ ನಿಮಿಷದಲ್ಲಿ ವರನಟ ಡಾ. ರಾಜಕುಮಾರ್ ಅವರ ಭಾವಚಿತ್ರ ಹಾಗೂ ಸತತ 8 ಘಂಟೆಗಳ ಅವಧಿಯಲ್ಲಿ ನೂರು ಚಿತ್ರಗಳನ್ನು ಬಿಡಿಸಿ, ವಿಶಿಷ್ಟ ದಾಖಲೆಗಳನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಸತತ 8 ವರ್ಷಗಳಿಂದ ಚಿತ್ರಕಲೆಯ ವಿವಿಧ ಪ್ರಕಾರಗಳಲ್ಲಿ ತೊಡಗಿಸಿಕೊಂಡಿರುವ ಇವರು ಲ್ಯಾಂಡ್ ಸ್ಕೇಪ್, ವಾಟರ್ ಕಲರ್ , ತೈಲವರ್ಣ ಹಾಗೂ ಕಲರ್ ಪೆನ್ಸಿಲ್ ಶೇಡಿಂಗ್ ನಿಂದ ಚಿತ್ರಗಳನ್ನು ರಚಿಸುತ್ತಾ ಬಂದಿದ್ದಾರೆ. ಪೋಟ್ರೇಟ್ ಚಿತ್ರಗಳನ್ನು ಬರೆಯುವಲ್ಲಿಯೂ ಅಪಾರ ಆಸಕ್ತಿ ಹೊಂದಿದ್ದಾರೆ. ತಮ್ಮ ವಿಭಿನ್ನ ಕಲಾಕೃತಿಗಳ ಮೂಲಕ ಪರಿಚಿತರಾದ ಇವರು ರಾಜ್ಯವಷ್ಟೇ ಅಲ್ಲದೇ ನೆರೆ ರಾಜ್ಯಗಳಾದ ಗೋವಾ, ಮಹಾರಾಷ್ಟ್ರಗಳಲ್ಲಿಯೂ ತಮ್ಮ ಚಿತ್ರಗಳನ್ನು ಪ್ರದರ್ಶಿಸಿದ್ದಾರೆ. ಕೌಶಿಕ್ ಕೃಷ್ಣ ಹೆಗಡೆಯವರಿಗೆ ಕೆಮಲಿನ್ ಕಲಾ ಪ್ರಶಸ್ತಿ, ಅಯೋಧ್ಯಾ ಕಲಾ ಪ್ರಶಸ್ತಿ ಸೇರಿ ಹಲವು ಪುರಸ್ಕಾರಗಳು ಲಭಿಸಿವೆ. ಇವರ ಕಲಾಕೃತಿಗಳಿಂದ ಪ್ರೇರಿತಗೊಂಡಿರುವ ಸಮರ್ಥ ಹೆಗಡೆ ಡಿಡಿ ನ್ಯೂಸ್ ನೊಂದಿಗೆ , ಇವರಿಂದ ತಮಗೂ ಚಿತ್ರಕಲೆಯಲ್ಲಿ ಆಸಕ್ತಿ ಮೂಡಿದೆ ಎಂದರು. ಕಲಾವಿದ ಕೌಶಿಕ್ ಕೃಷ್ಣ ಹೆಗಡೆ, ರಾಜಾ ರವಿ ವರ್ಮ, ಬಿ ಕೆ ಎಸ್ ವರ್ಮ ಮುಂತಾದ ಹಿರಿಯ ಕಲಾವಿದರು ತಮಗೆ ಸ್ಫೂರ್ತಿ ಎಂದರು.
credit; DD Chandana






Leave a Comment