ಹಳಿಯಾಳ:- ಹಳಿಯಾಳ ಪಟ್ಟಣದಲ್ಲಿ ಸೋಮವಾರ ಹುಚ್ಚು ನಾಯಿಯೊಂದು ಸುಮಾರು 8 ಕ್ಕೂ ಹೆಚ್ಚು ಜನರಿಗೆ ಕಚ್ಚಿ ಗಾಯಗೊಳಿಸಿರುವ ಘಟನೆ ವರದಿಯಾಗಿದೆ.
ಸೋಮವಾರ ಬೆಳಿಗ್ಗೆ ಪಟ್ಟಣದ ಪೋಲಿಸ್ ಠಾಣೆ ಪಕ್ಕದ ರಸ್ತೆಯಿಂದ ಅಲ್ಲೊಳ್ಳಿ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಗುಡ್ನಾಪುರಗಲ್ಲಿ, ಇಂಡಸ್ಟ್ರೀಯಲ್ ಏರಿಯಾ, ದೇಶಪಾಂಡೆ ಆಶ್ರಯ ನಗರ, ದುರ್ಗಾನಗರ ಸೇರಿದಂತೆ ಕೆಲವು ಬಡಾವಣೆಗಳಲ್ಲಿ ನಾಯಿಯೊಂದು ಸಿಕ್ಕ ಸಿಕ್ಕವರಿಗೆ ಕಚ್ಚಿ ಗಾಯಗೊಳಿಸಿದೆ.

ನಾಯಿಯೊಂದು ಸಿಕ್ಕಸಿಕ್ಕವರಿಗೆ ಕಚ್ಚುತ್ತಿದ್ದು ಅದು ಹುಚ್ಚುನಾಯಿ ಆಗಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಪಟ್ಟಣದಲ್ಲಿ ಹರಡುತ್ತಿದ್ದಂತೆ ತಕ್ಷಣ ಎಚ್ಚೆತ್ತುಕೊಂಡ ಪುರಸಭೆ ಧ್ವನಿ ವರ್ದಕದ ಮೂಲಕ ಜನರಲ್ಲಿ ಮನೆಯಿಂದ ಮಕ್ಕಳನ್ನು ಹೊರ ಬಿಡದಂತೆ ಹಾಗೂ ನಾಯಿಯಿಂದ ಎಚ್ಚರಿಕೆಯಿಂದ ಇರುವಂತೆ ಜೊತೆಗೆ ಜನರನ್ನು ಕಚ್ಚಿ ಗಾಯಗೊಳಿಸುತ್ತಿರುವ ನಾಯಿ ಕಂಡಲ್ಲಿ ಕೂಡಲೇ ಪುರಸಭೆ, ಪೋಲಿಸ್ ಇಲಾಖೆಗೆ ಮಾಹಿತಿ ನೀಡುವಂತೆ ಪ್ರಚಾರ ಮಾಡಲಾಯಿತು.
ಚಿಬ್ಬಲಗೇರಿ ಗ್ರಾಮ ರಸ್ತೆಯಿಂದ ಬಂದಿರಬಹುದು ಎನ್ನಲಾದ ಜನರಿಗೆ ಕಚ್ಚಿ ಗಾಯಗೊಳಿಸಿದ ನಾಯಿ ಮಾತ್ರ ಸಾಯಂಕಾಲದವರೆಗೂ ಯಾರ ಕೈಗೂ ಸಿಗದೆ ನಾಪತ್ತೆಯಾಗಿದೆ. ಆದರೇ ಜನರು ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪುರಸಭೆ ಮನವಿ ಮಾಡಿದೆ.
ನಾಯಿಯಿಂದ ಕಚ್ಚಿಸಿಕೊಂಡು ಗಾಯಗೊಂಡವರನ್ನು ಹಳಿಯಾಳ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿ ಚುಚ್ಚು ಮದ್ದು ನೀಡಲಾಗಿದೆ. ಅದೃಷ್ಟವಶಾತ್ ಯಾರಿಗೂ ಗಂಭೀರ ಸ್ವರೂಪದ ಗಾಯಗಳಾಗಿಲ್ಲ ಎನ್ನುವುದು ಕುಟುಂಬದ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಪಟ್ಟಣದ 3-4 ಬಡಾವಣೆಗಳಲ್ಲಿ ಮಾತ್ರ ಹುಚ್ಚು ನಾಯಿಯಿಂದ ತೊಂದರೆ ಆಗಿದೆ. ನಾಯಿ ಸುಮಾರು 9 ಜನರಿಗೆ ಕಚ್ಚಿ ಗಾಯಗೊಳಿಸಿದ ಬಗ್ಗೆ ಮಾಹಿತಿ ಇದೆ. ಎಲ್ಲರಿಗೂ ಚಿಕಿತ್ಸೆ ನೀಡಿ ರೆಬಿಸ್ ಚುಚ್ಚು ಮದ್ದು ನೀಡಲಾಗಿದೆ. ನಾಯಿ ಹಿಡಿಯುವ ಕಾರ್ಯಾಚರಣೆ ಮಾಡಲಾಗುತ್ತಿದೆ. ಹುಚ್ಚು ನಾಯಿ ಕಂಡರೇ ಜನರು ಕೂಡಲೇ ಮಾಹಿತಿ ನೀಡಿ ಸಹಕರಿಸಬೇಕು ಪಾಲಕರು ಮಕ್ಕಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು- ಹಳಿಯಾಳ ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ.
Leave a Comment