ಹೊನ್ನಾವರ ಕಾಸರಕೋಡ ಟೊಂಕದಲ್ಲಿ ಸ್ಥಳೀಯರ ತೀವ್ರ ವಿರೋಧದ ನಡುವೆಯೂ ಹೈದರಾಬಾದ್ ಮೂಲದ ಖಾಸಗಿ ಕಂಪೆನಿಯವರಿಗೆ ಬ್ರಹತ್ ವಾಣಿಜ್ಯ ಬಂದರು ನಿರ್ಮಾಣ ಮಾಡಲು ಅವಕಾಶಮಾಡಿಕೊಟ್ಟಿರುವದನ್ನು ವಿರೋಧಿಸಿ 24 ಬುಧವಾರದಂದು ಜಿಲ್ಲೆಯ ಮೀನುಗಾರರು ಜಿಲ್ಲೆಯಾದ್ಯಂತ ಮೀನುಗಾರಿಕೆಯನ್ನು ಬಂದ್ ಮಾಡಿ ಎಲ್ಲರೂ ಅಂದು ಮುಂಜಾನೆ 10 ಘಂಟೆಗೆ ಹೊನ್ನಾವರದಲ್ಲಿ ನಡೆಯುವ ಮೀನುಗಾರರ ಪ್ರತಿಭಟನೆಯಲ್ಲಿ ಭಾಗವಹಿಸಿಸುವಂತೆ ಜಿಲ್ಲೆಯ ಮೀನುಗಾರರಿಗೆ ರಾಷ್ಟ್ರೀಯ ಮೀನುಗಾರರ ಸಂಘಟನೆಯು ಕರೆನೀಡಿದೆ.

ಈ ಸಂಬಂದವಾಗಿ ಸಂಘಟನೆಯ ರಾಜ್ಯ ಕಾರ್ಯದರ್ಶಿಗಳಾದ ಚಂದ್ರಕಾಂತ ಕೊಚರೇಕರ,ಮತ್ತು ಜಂಟಿ ಕಾರ್ಯದರ್ಶಿ ಅಜೀತ ತಾಂಡೇಲ್, ಪತ್ರಿಕಾ ಪ್ರಕಟಣೆ ನೀಡಿ, ಸ್ಥಳೀಯರ ತೀವ್ರ ವಿರೋಧದ ನಡುವೆಯೂ, ಅಭಿವೃದ್ಧಿಯ ನೆಪದಲ್ಲಿ – ಸ್ಥಳೀಯ ಪರಿಸರಕ್ಕೆ,ಜನರ ಆರೋಗ್ಯಕ್ಕೆ, ಮೀನುಗಾರಿಕೆಗೆ, ಮೀನುಗಾರರ ವ್ರತ್ತಿ ಬದುಕಿಗೆ, ಮೀನಿನ ಸಂತತಿ ಮತ್ತು ಜೀವವೈವಿಧ್ಯತೆಗೆ ಮಾರಕವಾಗಬಲ್ಲ ಹೊನ್ನಾವರ ಕಾಸರಕೋಡ ಟೊಂಕದಲ್ಲಿ ನಿರ್ಮಿಸಲಾಗುತ್ತಿರುವ ಹೈದರಾಬಾದ್ ಮೂಲದ ಖಾಸಗಿ ಕಂಪೆನಿಯ ಬ್ರಹತ್ ವಾಣಿಜ್ಯ ಬಂದರು ಯೋಜನೆಯನ್ನು ಸ್ಥಳೀಯರ ಮತ್ತು ಮೀನುಗಾರಿಕೆಯ ಸಮಗ್ರ ಹಿತದೃಷ್ಟಿಯಿಂದ ಕೂಡಲೇ ಕೈಬಿಡುವಂತೆ ಸಂಘಟನೆಯ ರಾಜ್ಯ ಪದಾಧಿಕಾರಿಗಳ ನಿಯೋಗವು ಇತ್ತೀಚೆಗೆ ರಾಜ್ಯದ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳರನ್ನು ಭೇಟಿ ಮಾಡಿ ಸರ್ಕಾರದ ಗಮನ ಸೆಳೆದಿದೆ. .ಸ್ಥಳೀಯ ಹೋರಾಟ ಸಮಿತಿಯು ತಾಲ್ಲೂಕು/ಜಿಲ್ಲಾ ಆಡಳಿತದ ಮೂಲಕ ಮತ್ತು ಜನಪ್ರತಿನಿಧಿಗಳ ಮೂಲಕವೂ ಸಹ ಸಾಕಷ್ಟು ಬಾರಿ ಸರ್ಕಾರದ ಗಮನ ಸೆಳೆದಿದೆ .

ಆದರೂ ಸರ್ಕಾರ ಈವರೆಗೆ ತನ್ನ ನಿರ್ಧಾರವನ್ನು ಹಿಂದಕ್ಕೆ ಪಡೆಯಲು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ರಾಜ್ಯ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ. ಸಂಘನೆಯ ರಾಜ್ಯ ಸಮೀತಿಯು ಇತ್ತೀಚೆಗೆ ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಚೌಧರಿಯವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಕಾಸರಕೋಡ ಟೊಂಕದಲ್ಲಿ ನಿರ್ಮಿಸಲಾಗುತ್ತಿರುವ ಖಾಸಗಿ ಮೂಲದ ವಾಣಿಜ್ಯ ಬಂದರು ನಿರ್ಮಾಣ ಯೋಜನೆಯನ್ನು ತಡೆಯುವಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಮೀನಮೇಷ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಇಲ್ಲಿನ ಸಮಸ್ಯೆಯನ್ನು ಮನವರಿಕೆ ಮಾಡಿಕೊಡುವಲ್ಲಿನ ಜನಪ್ರತಿನಿಧಿಗಳ ವೈಫಲ್ಯವೇ ಸ್ಥಳೀಯರನ್ನು ಹೋರಾಟಕ್ಕೆ ಇಳಿಯುವಂತೆಮಾಡಿದೆ ಮತ್ತು , ಸ್ಥಳೀಯರ ಹೋರಾಟಕ್ಕೆ ಬೆಂಬಲ ಸೂಚಿಸಿ ಅಂದೇ ನಮ್ಮ ಸಂಘಟನೆಯ ಪದಾಧಿಕಾರಿಗಳ ನಿಯೋಗವು ರಾಜಧಾನಿಯಲ್ಲಿ ಸರ್ಕಾರದ ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಖಾಸಗಿ ಬಂದರು ನಿರ್ಮಾಣ ಯೋಜನೆಯನ್ನು ಕೈಬಿಡುವಂತೆ ಆಗ್ರಹಪಡಿಸಿದೆ ಹಾಗೂ ಸ್ಥಳೀಯ ಮೀನುಗಾರ ಮಹಿಳೆಯರು ಇಲ್ಲಿಯ ಬಂದರು ನಿರ್ಮಾಣ ಕಾಮಗಾರಿಯನ್ನು ತಡೆದು ಕಳೆದ 15ದಿವಸಗಳಿಂದ ಕಾಮಗಾರಿಸ್ಥಳದಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ವಿಚಾರವನ್ನು ಸಹ ಗಮನಕ್ಕೆ ತರಲಾಗಿದೆ. ಆದರೆ ಈ ನಡುವೆ ಬಂದರು ಯೋಜನೆಯನ್ನು ಕೈಬಿಡುವ ಸಾಧ್ಯತೆಗಳನ್ನು ಪರಿಶೀಲನೆ ಮಾಡುವ ಬದಲಿಗೆ, ಕೆಲವು ಅಧಿಕಾರಿಗಳು ಕಂಪೆನಿ ಪರವಾಗಿ ಕಾಮಗಾರಿ ನಡೆಸಲು ಆತುರಪಡಿಸುತ್ತಿರುವುದನ್ನು ಮತ್ತು ಸ್ಥಳೀಯರ ಚಳವಳಿಯನ್ನು ಹತ್ತಿಕ್ಕಲು ನಡೆಯುತ್ತಿರುವ ಒಳಸಂಚಿನ ಕುರಿತಾಗಿಯೂ ಸಹ ರಾಷ್ಟ್ರೀಯ ಮೀನುಗಾರರ ಸಂಘಟನೆ ಗಂಭೀರವಾಗಿ ಪರಿಗಣಿಸಿದೆ.ಮೀನುಗಾರರ ವ್ರತ್ತಿಯೇ ತ್ಯಾಗ,ಮತ್ತು ಧೈರ್ಯದ ಪ್ರತೀಕವಾದದ್ದು. ಅವರ,ಸಹನೆ ಮತ್ತು ಸ್ವಾಭಿಮಾನಕ್ಕೆ ಧಕ್ಕೆ ತರುವ ಯಾವುದೇ ರೀತಿಯ ಪ್ರಯತ್ನವನ್ನು ನಮ್ಮ ಸಂಘಟನೆ ಖಂಡಿಸುತ್ತದೆ. ಈ ಹಿನ್ನೆಲೆಯಲ್ಲಿ 24ರಂದು ಜಿಲ್ಲೆಯ ಕರಾವಳಿಯಲ್ಲಿ ಮೀನುಗಾರರು ಮೀನುಗಾರಿಕೆಯನ್ನು ಬಂದ್ ಮಾಡಿ ಹೊನ್ನಾವರದಲ್ಲಿ ಆಯೋಜಿಸಿರುವ ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಕರೆ ನೀಡಿದ್ದೇವೆ. ಬಂದರು ಯೋಜನೆಯನ್ನು ಸರ್ಕಾರ ಕೈಬಿಡುವ ವರೆಗೂ ಸ್ಥಳೀಯರ ಬೆಂಬಲಕ್ಕೆ ನಿಲ್ಲುವ ನಿರ್ಧಾರಕ್ಕೆ ನಮ್ಮ ಸಂಘಟನೆ ಬಂದಿದೆ ಎಂದಿದ್ದಾರೆ. ಅಗತ್ಯ ಬಿದ್ದರೆ ಈ ಹೊರಾಟವನ್ನು ರಾಜ್ಯಾದ್ಯಂತ ವಿಸ್ತರಿಸಿ ಹೋರಾಟ ಸಮಿತಿಗೆ ಬೆಂಬಲವಾಗಿ ನಿಲ್ಲುತ್ತೇವೆ ಮತ್ತು ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಯು.ಆರ್.ಸಭಾಪತಿ ಸೇರಿದಂತೆ ರಾಜ್ಯ ಸಂಘಟನೆಯ ಅಧ್ಯಕ್ಷರು, ಕಾರ್ಯಾಧ್ಯಕ್ಷರೂ ಸಹಿತ ಎಲ್ಲರೂ ದಿನಾಂಕ 24ರಂದು ಹೊನ್ನಾವರದಲ್ಲಿ ನಡೆಯುವ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವದಾಗಿ ತಿಳಿಸಿ ಹೊನ್ನಾವರದಲ್ಲಿ ನಡೆಯುವ ಪ್ರತಿಭಟನಾ ಮೆರವಣಿಗೆಯಲ್ಲಿ ಜಿಲ್ಲೆಯ ಮೀನುಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸಬೇಕೇಂದು ಅವರು ಕೋರಿದ್ದಾರೆ.
Leave a Comment