ಹೊನ್ನಾವರ – ಶರಾವತಿ ಸೇತುವೆಯಮೇಲೆ ಎರಡು ಬೈಕ್‍ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ರಸ್ತೆಯಮೇಲೆ ಬಿದ್ದ ಒಬ್ಬ ಬೈಕ್ ಸವಾರನಮೇಲೆ ಹಿಂದಿನಿಂದ ಬಂದ ಲಾರಿಯೊಂದು ಹರಿದು ಸ್ಥಳದಲ್ಲಿಯೇ ಮೃತಪಟ್ಟ ದುರ್ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ಅಪಘಾತದಲ್ಲಿ ಮೃತಪಟ್ಟವನನ್ನು ಭಟ್ಕಳ ತಾಲೂಕಿನ ಶಿರಾಲಿಯ ಪ್ರಕಾಶ ನಾಗಪ್ಪ ಶೆಟ್ಟಿ (50) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಇನ್ನೊಂದು ಬೈಕ್‍ನಲ್ಲಿದ್ದ ನಾರಾಯಣ ನಾಗಪ್ಪ ಗೌಡ, ಮಾಳ್ಕೋಡ, ಸಂದೀಪ ತಿಮ್ಮಪ್ಪ ಗೌಡ ಪಡುಕುಳಿ ಇವರು ಗಾಯಗೊಂಡಿದ್ದಾರೆ.
ಕಾಸರಕೋಡ ಕಡೆಯಿಂದ ಹೊನ್ನಾವರ ಕಡೆಗೆ ತನ್ನ ಬೈಕ್‍ನ್ನು ಅತೀ ವೇಗವಾಗಿ ಚಲಾಯಿಸಿಕೊಂಡು ಬಂದ ನಾರಾಯಣ ನಾಗಪ್ಪ ಗೌಡ ಸೇತುವೆಯಮೇಲೆ ಒಮ್ಮೆಲೇ ಬೈಕ್‍ನ್ನು ಬಲಕ್ಕೆ ಹೊರಳಿಸಿ ಎದುರಿನಿಂದ ಬರುತ್ತಿದ್ದ (ಹೊನ್ನಾವರ ಕಡೆಯಿಂದ ಕಾಸರಕೋಡ ಕಡೆಗೆ) ಪ್ರಕಾಶ ನಾಗಪ್ಪ ಶೆಟ್ಟಿ ಎಂಬಾತನಿಗೆ ಅಪಘಾತಪಡಿಸಿದ್ದಾನೆ. ಅಪಘಾತದ ತೀವೃತೆಗೆ ರಸ್ತೆಯಮೇಲೆ ಬಿದ್ದಿದ್ದ ಪ್ರಕಾಶ ಶೆಟ್ಟಿ ದೇಹದಮೇಲೆ ಹಿಂದಿನಿಂದ ಬರುತ್ತಿದ್ದ ಲಾರಿ ಹರಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಬೈಕ್ ಚಲಾಯಿಸುತ್ತಿದ್ದ ನಾರಾಯಣ ನಾಗಪ್ಪ ಗೌಡ ಮತ್ತು ಲಾರಿ ಚಾಲಕ ಯಾಸೀನ್ ಅಮೀರ್ ಶೇಖ್ ವಿರುದ್ಧ ಮೃತ ಪ್ರಕಾಶ ಶೆಟ್ಟಿ ಸಹೋದರ ಪ್ರದೀಪ ಶೆಟ್ಟಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Leave a Comment