ಭಟ್ಕಳ: ಮಾರುಕೇರಿಯ ಹೂತ್ಕಳದ ಶ್ರೀ ಧನ್ವಂತರಿ ಮಹಾವಿಷ್ಣು ಗಣಪತಿ ದೇವಸ್ಥಾನದಿಂದ ಕಿತ್ರೆಯ ಶ್ರೀ ಕ್ಷೇತ್ರ ದೇವಿಮನೆಯ ಶಿವಶಾಂತಿಕಾ (ದುರ್ಗಾ) ಪರಮೇಶ್ವರಿ ದೇವಸ್ಥಾನಕ್ಕೆ ಶಿವರಾತ್ರಿಯ ಅಂಗವಾಗಿ ಗುರುವಾರ ಬೆಳಗಿನ ಜಾವ ಸ್ಥಳೀಯರು ಲೋಕಕಲ್ಯಾಣಾರ್ಥವಾಗಿ ಎರಡನೇ ವರ್ಷದ ಪಾದಯಾತ್ರೆ ನಡೆಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಪಾದಯಾತ್ರೆ ಸಂದರ್ಭದಲ್ಲಿ ಎಲ್ಲರೂ ಓಂ ನಮ: ಶಿವಾಯ ಪಠಿಸಿದರು. ದೇವಿಮನೆಯಲ್ಲಿ ಭಕ್ತರನ್ನುದ್ಧೇಶಿಸಿ ಮಾತನಾಡಿದ ಎಸ್.ಪಿ. ಹೈಸ್ಕೂಲ್ ಮುಖ್ಯಶಿಕ್ಷಕ ಪಿ.ಟಿ.ಚವ್ಹಾಣ, ಶಿವರಾತ್ರಿ ದಿನ ದೇವರ ಸನ್ನಿಧಿಗೆ ಪಾದಯಾತ್ರೆ ಮಾಡಿರುವುದರಿಂದ ಎಲ್ಲರಿಗೂ ಒಳ್ಳೆಯದಾಗಲಿದೆ. ಗ್ರಾಮದಲ್ಲಿ ಆಧ್ಯಾತ್ಮಿಕ ಚಿಂತನೆ, ಪ್ರೀತಿ ವಿಶ್ವಾಸ, ಬಾಂಧವ್ಯ ವೃದ್ಧಿಸಲು ಇಂತಹ ಕಾರ್ಯಕ್ರಮ ಅನುಕೂಲವಾಗಿದೆ. ವರ್ಷಂಪ್ರತಿ ಈ ಪಾದಯಾತ್ರೆಯನ್ನು ಮುಂದುವರಿಸಿ ಹೆಚ್ಚಿನ ಜನರು ಪಾಲ್ಗೊಳ್ಳುವಂತೆ ಮಾಡಬೇಕು ಎಂದರು.
ಪಾದಯಾತ್ರೆಯಲ್ಲಿ ಕೃಷ್ಣಮೂರ್ತಿ ಹೆಗಡೆ, ಕೃಷ್ಣ ಹೆಬ್ಬಾರ, ರಾಘವೇಂದ್ರ ಹೆಬ್ಬಾರ, ಗ್ರಾ.ಪಂ. ಸದಸ್ಯರಾದ ಎಂ.ಡಿ.ನಾಯ್ಕ, ನಾರಾಯಣ ಗೊಂಡ, ಸುಧಾ ಹೆಗಡೆ, ಪ್ರಮುಖರಾದ ಸೋಮಶೇಖರ ನಾಯ್ಕ, ನಾಗೇಶ ಹೆಬ್ಬಾರ, ರವಿ ನಾಯ್ಕ, ಗುರುದತ್ತ ದೇವಾಡಿಗ, ನಾಗೇಶ ದೇವಡಿಗ, ನಾರಾಯಣ ಗೊಂಡ, ಮಹೇಶ ಶೆಟ್ಟಿ ಸೇರಿದಂತೆ 75ಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು.
Leave a Comment