ಹೊನ್ನಾವರ : ಕೇಂದ್ರದ ಮೋದಿ ಸರ್ಕಾರ ಮತ್ತು ರಾಜ್ಯದ ಯಡಿಯೂರಪ್ಪ ನೇತೃತ್ವದ ಬಿ.ಜೆ.ಪಿ. ಸರಕಾರದ ಬಗ್ಗೆ ಜನ ಬೇಸತ್ತಿದ್ದಾರೆ. ಜನತೆಗೆ ಕಾಂಗ್ರೆಸ್ ಸರಕಾರವೇ ಅನಿವಾರ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗೆಸ್ ಪಕ್ಷದ ಕಾರ್ಯಕರ್ತರು ಸಂಘಟಿತರಾಗಿ ಬೂತ್ ಮತ್ತು ಪಂಚಾಯತ ಮಟ್ಟದಿಂದ ಪಕ್ಷವನ್ನು ಇನ್ನಷ್ಟು ಬಲಪಡಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಮಾಜಿ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿ ಕರೆ ನೀಡಿದರು.

ಅವರು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ನಗರದ ಸಾಗರ ರೆಸಿಡೆನ್ಸಿ ಸಭಾಭವನದಲ್ಲಿ ಪಂಚಾಯತ ಪ್ರಜಾ ಪ್ರತಿನಿಧಿ ರಚನೆಯ ಕುರಿತಂತೆ ಏರ್ಪಡಿಸಿದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದರು. ಜಾಗತಿಕ ಅರ್ಥವ್ಯವಸ್ಥೆ ಕುಸಿದಾಗಲೂ ಹಿಂದಿನ ಪ್ರಧಾನಿ ಡಾ|| ಮನಮೋಹನ ಸಿಂಗ್ ಭಾರತದ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಿ ಬೆಲೆ ಏರಿಕೆಯನ್ನು ತಡೆದಿದ್ದರು. ಆದರೂ ಇಂದಿನ ಪ್ರಧಾನಿ ಮೋದಿ ವಿನಾಃ ಕಾರಣ ಮನಮೋಹನ ಸಿಂಗ್ ಸರಕಾರದ ವಿರುದ್ಧ ಅಪಪ್ರಚಾರ ನಡೆಸಿ ಸುಳ್ಳು ಭರವಸೆಯೊಂದಿಗೆ ದೇಶದ ಚುಕ್ಕಾಣಿ ಹಿಡಿದರೂ ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ ಪಕ್ಷದ ಅಧ್ಯಕ್ಷತೆಯನ್ನು ವಹಿಸಿದ ನಂತರ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಬಂದಿದ್ದು, ಪಕ್ಷದ ಕಾರ್ಯಚಟುವಟಿಕೆ ನಿರಂತರವಾಗಿ ಸಾಗುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಪುನಃ ಸ್ಥಾಪನೆಯಾಗುವ ದಿನಗಳು ಸನ್ನಿಹಿತವಾಗಿದೆ ಎಂದರು. ಈಗಾಗಲೇ ಕೆ.ಪಿ.ಸಿ.ಸಿ. ಅಧ್ಯಕ್ಷರ ಆದೇಶದಂತೆ ರಾಜ್ಯಾದ್ಯಂತ ಪ್ರತಿ ಪಂಚಾಯತ ಮಟ್ಟದಲ್ಲಿ ಪ್ರಜಾ ಪ್ರತಿನಿಧಿ ರಚನೆ ನಡೆಯುತ್ತಿದ್ದು, ಪಕ್ಷದ ಕಾರ್ಯಕರ್ತರು ನಮ್ಮ ಭಾಗದಲ್ಲಿ ಎಲ್ಲಾ ರೀತಿಯ ಸಹಕಾರ ನೀಡುವಂತೆ ಮನವಿ ಮಾಡಿದರು.
ಜಿಲ್ಲಾ ಪಂಚಾಯತ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ ಸದ್ಯದಲ್ಲೇ ಜಿಲ್ಲಾ ಪಂಚಾಯತ ಮತ್ತು ತಾಲೂಕು ಪಂಚಾಯತ ಚುನಾವಣೆ ಘೋಷಣೆಯಾಗಲಿದ್ದು, ಕಾಂಗ್ರೆಸ್ ಕಾರ್ಯಕರ್ತರು ಸಂಘಟಿತರಾಗಿ, ದೈರ್ಯದಿಂದ ಚುನಾವಣೆಯನ್ನು ಎದುರಿಸುವಂತೆ ಮನವಿ ಮಾಡಿದರು. ಹಿಂದಿನ ಸಿದ್ಧರಾಮಯ್ಯ ಸರಕಾರ ತಂದ ಅನೇಕ ಅಭಿವೃದ್ಧಿ ಯೋಜನೆಗಳು ಇನ್ನೂ ಜನತೆಯ ಮನದಾಳದಲ್ಲಿದ್ದು, ಅದನ್ನು ಜನತೆಗೆ ತಿಳಿಸುವ ಕೆಲಸ ಪಕ್ಷದ ಕಾರ್ಯಕರ್ತರಿಂದ ಆಗಬೇಕು ಎಂದರು.
ಕಾಂಗ್ರೆಸ್ ಹಿಂದುಳಿದ ವರ್ಗ ವಿಭಾಗದ ಕಾರ್ಯದರ್ಶಿ ರವಿಕುಮಾರ ಶೆಟ್ಟಿ ಮಾತನಾಡಿ ಹೆಚ್ಚೆಚ್ಚೂ ಯುವಕರನ್ನು ಕಾಂಗ್ರೆಸ್ ಪಕ್ಷದ ತೆಕ್ಕೆಗೆ ಸೆಳೆಯುವಂತಹ ಕೆಲಸ ಪಕ್ಷದ ಮುಖಂಡರು ಮಾಡುವಂತೆ ಮನವಿ ಮಾಡಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಠಿ ಮಾಡುವ ಮೋದಿ ಕನಸು ಭಗ್ನವಾಗಿದ್ದು ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದ್ದರೂ ಕೇಂದ್ರ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಆಪಾಧಿಸಿದರು.
ಸಭೆಯಲ್ಲಿ ನೂತನ ಪಂಚಾಯತ ಸದಸ್ಯರಿಗೆ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಪರವಾಗಿ ಮಾಲಾರ್ಪಣೆ ಮಾಡಿ ಅಭಿನಂದಿಸಲಾಯಿತು.

ಸಭೆಯಲ್ಲಿ ಹೊನ್ನಾವರ ನಗರ ಘಟಕದ ಅಧ್ಯಕ್ಷ ಕೇಶವ ಮೇಸ್ತ, ಇಂಟೆಕ್ ಅಧ್ಯಕ್ಷ ಆಗ್ನೇಲ್ ಡಯಾಸ್, ಶಕ್ತಿ ವಿಭಾಗದ ಅಧ್ಯಕ್ಷ ಬಾಲಚಂದ್ರ ನಾಯ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ಸಂದೇಶ ಶೆಟ್ಟಿ, ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಕೆ.ಎಚ್. ಗೌಡ, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಝಕ್ರಿಯಾ ಶೇಖ್, ಕೆ.ಪಿ.ಸಿ.ಸಿ. ಸದಸ್ಯ ವಿನೋದ ನಾಯ್ಕ, ಇಂದಿರಾ ಪ್ರಿಯದರ್ಶಿನಿ ವಿಭಾಗದ ಸುಧಾ ನಾಯ್ಕ, ಜಿಲ್ಲಾ ಮುಖಂಡರಾದ ರವಿ ಶೆಟ್ಟಿ, ಕವಲಕ್ಕಿ, ದಾಮೋದರ ನಾಯ್ಕ ಇನ್ನೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
Leave a Comment