ಹೊನ್ನಾವರ: ಕಾಸರಕೋಡ್ ಬಂದರು ಕಾಮಗಾರಿ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಸಾರ್ವಜನಿಕರ ಬೇಡಿಕೆಯನ್ನು ಆಲಿಸಲು ಕಾಸರಕೋಡ್ ಗ್ರಾಮ ಪಂಚಾಯತಿ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತೆರಳಿ ಚರ್ಚಿಸಿದರು.

ಕಳೆದ 40 ದಿನಗಳಿಂದ ಖಾಸಗಿ ಬಂದರು ಕಾಮಗಾರಿ ವಿರೋಧಿಸಿ ಮೀನುಗಾರರು ನಡೆಸುತ್ತಿರುವ ಹೋರಾಟವು ದಿನದಿಂದ ದಿನಕ್ಕೆ ತಾರಕ್ಕೇರುತ್ತಿದ್ದು, ಇದೀಗ ಸ್ಥಳಕ್ಕೆ ಇದೇ ಪ್ರಥಮ ಬಾರಿಗೆ ಕಾಸರಕೋಡ್ ಪಂಚಾಯತಿಗೆ ನೂತನವಾಗಿ ಆಯ್ಕೆಯಾದ ಸದಸ್ಯರು ಭೇಟಿ ನೀಡಿ ಸಮಸ್ಯೆ ಕುರಿತು ಚರ್ಚೆ ನಡೆಸಿದರು. ಕಳೆದ ವಾರ ಪಂಚಾಯತಿಗೆ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಇಂದು ಜನಪ್ರತಿನಿಧಿಗಳು ಭೇಟಿ ನೀಡಿದಾಗ ಗ್ರಾಮಸ್ಥರು ಬಂದರು ನಿರ್ಮಾಣದಿಂದ ಆಗುವ ಸಮಸ್ಯೆ ಬಗ್ಗೆ ವಿವರಿಸಿದರು. ಜಿಲ್ಲೆಯಲ್ಲಿ ಶರಾವತಿ ನದಿ ಸ್ವಚ್ಚನದಿಯಾಗಿದ್ದು, ಈ ಸದಿ ಹರಿಯುವ ಅಕ್ಕ ಪಕ್ಕ ಯಾವುದೇ ಫ್ಯಾಕ್ಟರಿ ಇಲ್ಲದೇ ಇರುದರಿಂದ ಶುಚಿತ್ವದಿಂದ ಕೂಡಿದೆ ಇದರ ಪರಿನಾಂವಾಗಿ ಈ ಭಾಗದವರು ಆರೋಗ್ಯದಿಂದ ಇದ್ದಾರೆ. ಮುಂದಿನ ದಿನದಲ್ಲಿ ಈ ಬಂದರು ನಿರ್ಮಾಣದಿಂದ ನದಿ ಕೂಡಾ ಮಲಿನವಾಗಲಿದೆ. ಅಲ್ಲದೇ ಹಳದೀಪುರ, ಹಾಗೂ ಅಪ್ಸರಕೊಂಡ ತೀರದಲ್ಲಿ ಕಡಲಾಮೆ ಸುರಕ್ಷೀತ ಪ್ರದೇಶ ಎನ್ನುವ ಅಧಿಕಾರಿಗಳಿಗೆ ಇದೀಗ ಈ ಭಾಗದಲ್ಲಿ ಆಮೆ ಸಂಚಾರ ಹಾಗೂ ಮೊಟ್ಟೆ ದೊರೆತಿರುದರಿಂದ ಇದು ಕಡಲಾಮೆ ಸಂಚಾರದ ಸ್ಥಳ ಎನ್ನುವ ನಮ್ಮ ವಾದಕ್ಕೆ ಪುಷ್ಟಿ ಬಂದಿದೆ. ಈ ಪ್ರಮಾಣದಲ್ಲಿ ವಿರೋಧವಿದ್ದರೂ ನಮ್ಮೊಂದಿಗೆ ಯಾರು ಸರಿಯಾಗಿ ಸ್ಪಂದಿಸುತ್ತಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಟ್ಟಕ್ಕೆ ನಮ್ಮ ಅಳಲು ಕೇಳಲು ನಾವು ಗ್ರಾಮ ಪಂಚಾಯತಿಯ ಪ್ರತಿನಿಧಿಗಳಿಗೆ ಮನವಿ ಮಾಡುತ್ತಿದ್ದೇವೆ ಎಂದರು. ಜನಪ್ರತಿನಿಧಿಗಳು ಅಧಿಕಾರಿಗಳೂ ಮೀನುಗಾರರ ಸಂಕಷ್ಟ ಆಲಿಸದೇ ಬಂದರು ಕಂಪನಿಯ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ನಮ್ಮ ಮನವಿ ಹೋರಾಟದ ದ್ವನಿ ಕೇಳಿಸಿಕೊಳ್ಳುತ್ತಿಲ್ಲ. ಶಾಂತಿಯುತ ಹೋರಾಟಕ್ಕೆ ಬಗ್ಗುವಂತೆ ಕಾಣುತ್ತಿಲ್ಲ. ಗ್ರಾಮ ಪಂಚಾಯತಿಯ ಮಟ್ಟದಿಂದಲೇ ಅಧಿಕಾರಿಗಳು ಜನಪ್ರತಿನಿಧಿಗಳು ನಮ್ಮ ಹೋರಾಟಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದರು.
ಮನವಿಗೆ ಸ್ಪಂದಿಸಿ ಪಂಚಾಯತಿ ಅಧ್ಯಕ್ಷ ಮಂಜು ಗೌಡ ಮಾತನಾಡಿ ನಿಮ್ಮೊಂದಿಗೆ ಈ ಹಿಂದಿಯೂ ಇದ್ದೇವೆ ಮುಂದೆಯು ಇರಲಿದ್ದೇವೆ. ನಿಮ್ಮ ಬೇಡಿಕೆಯಂತೆ ಗ್ರಾಮ ಸಭೆ ಕರೆಯಲು ಚಿಂತನೆ ನಡೆಸುತ್ತಿದ್ದು, ಒಂದೆರಡು ದಿನದಲ್ಲಿ ಈ ಬಗ್ಗೆ ಕೈಗೊಳ್ಳಬೇಕಾದ ಕ್ರಮವನ್ನು ಕೈಗೊಳ್ಳಲಿದ್ದೇವೆ. ಎಲ್ಲರ ಒಪ್ಪಿಗೆ ಮೇರೆಗೆ ಸಭೆ ಮಾಡುವುದಾಗಿ ತಿಳಿಸಿದರು.

ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ನಾಗರಾಜ ಮಾತನಾಡಿ ಗ್ರಾಮ ಸಭೆ ಕರೆದಲ್ಲಿ ಚರ್ಚೆಯಾದ ವಿಷಯವನ್ನು ಕೈಗೊಂಡ ತಿರ್ಮಾನದ ಬಗ್ಗೆ ಮೇಲಾಧಿಕಾರಿಗಳಿಗೆ ತಲುಪಿಸುತ್ತೇನೆ. ಸ್ಥಳಿಯವಾಗಿ ಪಂಚಾಯತಿ ಮಟ್ಟದಿಂದ ಸಾರ್ವಜನಿಕರಿಗೆ ದೊರೆಯುವ ಎಲ್ಲಾ ಸೌಲಭ್ಯವನ್ನು ನಿಯಮಾನುಸಾರವಾಗಿ ನೀಡಲು ಬದ್ದ ಎಂದು ಭರವಸೆ ನೀಡಿದರು.
………………..
ನಮ್ಮ ಬದುಕು ಮತ್ತು ನಮ್ಮ ಸ್ವಾತಂತ್ರ್ಯದ ಹಕ್ಕು ಕಸಿದುಕೊಳ್ಳುವ ಯತ್ನ ನಡೆಯುತ್ತಿದೆ. ಈಗಾಗಲೇ 40 ದಿನದಿಂದ ಪ್ರತಿಭಟನೆ ನಡೆಸುತ್ತಿದ್ದು, 400 ದಿನ ಕಳೆದರು ಪ್ರತಿಭಟನೆ ವಾಪಸ್ಸು ಪಡೆಯದೇ ನ್ಯಾಯ ಸಿಗುವರೆಗೂ ಹೋರಾಟ ಮುಮದುವರೆಯಲಿದೆ.
ವಿವನ್ ಫರ್ನಾಂಡಿಸ್.
ಈಗಾಗಲೇ ರಸ್ತೆ ಮಾಡಲು ಮುಂದಾಗಿದ್ದು, ಮುಂದಿನ ದಿನದಲ್ಲಿ 40 ಮೀಟರ್ ರಸ್ತೆ, ರೈಲ್ವೆ ನಿರ್ಮಾಣವಾಗಲಿದೆ ಎಂದು ಹೇಳಲಾಗುತ್ತಿದ್ದು, ಇದು ಆರಂಭಗೊಂಡರೆ ಈ ಭಾಗದ ಎಲ್ಲರ ಮನೆ ಹಾಗೂ ಜಮೀನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಒಂದುವರೆ ತಿಂಗಳಿನಿಂದ ಪ್ರತಿಭಟನೆ ಮಾಡುತ್ತಿದ್ದರು ನಮ್ಮ ಕೂಗು ಸರ್ಕಾರಕ್ಕೆ ಕೇಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಧಾ ತಾಂಡೇಲ್.
…………………..
27 ಸದಸ್ಯ ಬಲದ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷರು ಹಾಗೂ 8 ಸದಸ್ಯರು ಪಾಲ್ಗೊಂಡಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಯಿತು. ಮುಂದಿನ ದಿನದಲ್ಲಿ ನ್ಯಾಯ ಸಿಗದಿದ್ದರೆ ಗ್ರಾಮಸಭೆಗೆ ಸ್ಪಂದಿಸದಿದ್ದರೆ ಪಂಚಾಯತಿ ಹಾಗೂ ಸಂಭದಿಸಿದ ಅಧಿಕಾರಿಗಳ ಕಛೇರಿಯ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಇದೇ ಸಂದರ್ಭದಲ್ಲಿ ನೀಡಿದರು.
Leave a Comment