ಭಟ್ಕಳ: ತಾಲೂಕಿನಲ್ಲಿ ಪ್ರಪ್ರಥಮವಾಗಿ ಜನರ ಆರೋಗ್ಯದ ಹಿತವನ್ನು ಕಾಪಾಡುವ ದೃಷ್ಟಿಯಲ್ಲಿ ಆಯುರ್ವೇದ ಶಿಬಿರವನ್ನು ಇನಾಯತ್ ಉಲ್ ಶಾಬಂದ್ರಿ ಅವರ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಇನಾಯತ್ ಉಲ್ ಶಾಬಂದ್ರಿ ಹೇಳಿದರು.

ಏಪ್ರಿಲ್ 10ರಂದು ಪಟ್ಟಣದ ಶ್ರೀನಿವಾಸ್ ಡಿಲಕ್ಸ್ ಹೊಟೇಲ್ ಹಿಂದುಗಡೆ ಇರುವ ಶಾದಿ ಮಹಲ್ನಲ್ಲಿ ಆಯುರ್ವೆದ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಅಮೃತೇಶ್ವರೀ ಎಜ್ಯುಕೇಶನಲ್ ಟ್ರಸ್ಟ್ (ರಿ.) ಇವರ ವತಿಯಿಂದ ಎಲ್ಲಾ ತರಹದ ಕಾಯಿಲೆಗಳಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಯಲಿದೆ ಎಂದರು.
ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಗೌರವಾಧ್ಯಕ್ಷ ಡಾ. ಶ್ರೀಧರ್ ರಾವ್ ಮಾತನಾಡಿ ಸಾಮಾನ್ಯ ಮತ್ತು ವಿಶೇಷ ಕಾಯಿಲೆಗಳಿಗೆ ನಮ್ಮ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸಾ ಸೌಲಭ್ಯಗಳಿವೆ. ದೀರ್ಘಕಾಲೀನ ರೋಗಗಳಾದ ಸಂಧಿವಾತ, ವಾತರಕ್ತ, ಮೂಳೆಸವೆತ, ಬೆನ್ನುನೋವು, ಪಾರ್ಶ್ವವಾಯು, ಮೂಲವ್ಯಾಧಿ, ಸಕ್ಕರೆಕಾಯಿಲೆ, ರಕ್ತದೊತ್ತಡ, ಥೈರಾಯ್ಡ್, ಕಾಮಾಲೆ ರೋಗ, ರಕ್ತಹೀನತೆ, ಮುಟ್ಟಿನ ತೊಂದರೆ, ಕಣ್ಣು, ಕಿವಿ, ಗಂಟಲು, ಸಂಬಂಧಿ ತೊಂದರೆಗೆ ಹಾಗೂ ಮಾನಸಿಕ ಕಾಯಿಲೆ ಮುಂತಾದ ಎಲ್ಲಾ ರೋಗಗಳಿಗೆ ಉತ್ತಮ ಚಿಕಿತ್ಸೆ ನೀಡಿ, ರೋಗ ಗುಣಪಡಿಸುವ ತಜ್ಞ ವೈದ್ಯರುಗಳು, ದಾದಿಯರು, ಅನುಭವಿ ಥೆರಪಿಸ್ಟ್ಗಳನ್ನೂಳಗೊಂಡ ತಂಡ ನಮ್ಮ ಆಸ್ಪತ್ರೆಯಲ್ಲಿ ಸದಾ ಸೇವೆಗೆ ಲಭ್ಯರಿರುತ್ತಾರೆ. 100 ಹಾಸಿಗೆಗಳ ಸುಸಜ್ಜಿತವಾದ ಆಸ್ಪತ್ರೆಯನ್ನು ಹೊಂದಿದ್ದು, ಆಸ್ಪತ್ರೆಯ ಆವರಣದಲ್ಲಿ ರಕ್ತ ಪರೀಕ್ಷೆ, ಎಕ್ಸ್ ರೇ ಮುಂತಾದ ಸೌಲಭ್ಯವನ್ನು ಮಾಡಲಾಗುವುದು, ಎಲ್ಲಾ ತರಹದ ಕಾಯಿಲೆಗಳಿಗೆ ಬೇಕಾದಂತಹ ನುರಿತ ತಜ್ಞರ ಬಳಗವನ್ನು ಹೊಂದಿದೆ ಎಂದರು.
ಆಸ್ಪತ್ರೆಯ ಮುಖ್ಯ ವ್ಯೆಧ್ಯಾಧಿಕಾರಿಯಾದ ಡಾ. ಎಸ್. ಜಿ ಪ್ರಸನ್ನ ಐತಾಳ್ ಮಾತನಾಡಿ ಆಯುರ್ವೇದದ ವಿವಿಧ ವಿಭಾಗಗಳಾದ ಕಾಯಚಿಕಿತ್ಸಾ ವಿಭಾಗದಲ್ಲಿ ಡಾ. ಸೂರಜ್ ಎ. ಆರ್, ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಡಾ. ಸಿಂಧೂಮೋಳ್, ಕಣ್ಣು, ಕಿವಿ ಮೂಗು ಮತ್ತು ಗಂಟಲು ವಿಭಾಗದಲ್ಲಿ ಡಾ. ಸ್ವಾತಿ ಪಿ. ಜೆ, ಮಹಿಳಾ ವಿಭಾಗದಲ್ಲಿ ಡಾ. ವೀಣಾಕುಮಾರಿ, ಮಕ್ಕಳ ವಿಭಾಗದಲ್ಲಿ ಡಾ. ಅರ್ಚನ ಕೆ, ಪಂಚಕರ್ಮದಲ್ಲಿ ಡಾ. ಪ್ರಸನ್ನ ಐತಾಳ್, ಸ್ವಸ್ತ ವಿಭಾಗದಲ್ಲಿ ಡಾ. ರಾಜೇಶಚಂದ್ರರವರು ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದಲ್ಲಿ ಉಪಸ್ಥಿತರಿರುತ್ತಾರೆ.
ಈ ಶಿಬಿರದಲ್ಲಿ ಉಚಿತ ತಪಾಸಣೆ ಮತ್ತು ಅವಶ್ಯಕವಾಗಿರುವವರಿಗೆ ಉಚಿತ ಆಯುರ್ವೇದ ಔಷಧವನ್ನು ನೀಡಲಾಗುವುದು. ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಪಾಲಿಸಿ, ಈ ಸುಸಂದರ್ಭವನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿಕೊಂಡರು. ಈ ಸಂದರ್ಭದಲ್ಲಿ ಸಾಧಿಕ್ ಮಟ್ಟಾ ಸೇರಿ ಇತರರು ಇದ್ದರು
Leave a Comment