• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕಾಳುಬಳ್ಳಿಯ ಮೇಲೆ ಬೆಳೆದ ಬೆಳ್ಳಿಯ ಕಥೆ: ಬಳ್ಳಿಕಾಳ ಬೆಳ್ಳಿ

April 13, 2021 by Harshahegde Kondadakuli Leave a Comment

ಇತಿಹಾಸ ಎಂದರೆ ನಮ್ಮ ನಿನ್ನೆಗಳು. ಆದರೆ ಇತಿಹಾಸವೆಂದಾಕ್ಷಣ ಮೂಗು ಮುರಿಯುವವರೇ ಬಹಳಷ್ಟು ಮಂದಿ. ಏಕೆಂದರೆ ಅದರಲ್ಲಿ ಬರುವ ಹೆಸರುಗಳು, ಸ್ಥಳಗಳು, ಯುದ್ಧಗಳು ದಂಗೆಗಳು ಮತ್ತು ಎಲ್ಲಕ್ಕಿಂತ ಅವುಗಳಲ್ಲಿನ ಇಸವಿಗಳು. ಹೀಗಾಗಿಯೇ ನಮಗೆ ಇತಿಹಾಸವೆಂದರೆ ಹೈಸ್ಕೂಲಿನವರೆಗಿನ ಒಂದು ಪಠ್ಯ ವಿಷಯ ಅಷ್ಟೇ. ಬಹುಶಃ ಇತಿಹಾಸವನ್ನು ಪ್ರಾಢಶಾಲೆಯಿಂದ ಹೊರತಂದವರು ಬೆರಳೆಣಿಕೆಯಷ್ಟು ಜನ ಮಾತ್ರ. ಅದರಲ್ಲೂ ಕೆಲವರು ಮನಸ್ಸಿಲ್ಲದ ಮನಸ್ಸಿನಿಂದ ಯಾವುದೋ ಡಿಗ್ರಿಯ ಸಲುವಾಗಿ ತೆಗೆದುಕೊಂಡವರೇ. ಆದರೆ ಇನ್ನುಳಿದ ಕೆಲವೇ ಕೆಲವರು ಮಾತ್ರ ಅದರ ಮೇಲಿನ ಆಸಕ್ತಿಯಿಂದ ಆ ವಿಷಯವನ್ನು ತೆಗೆದುಕೊಳ್ಳುತ್ತಾರೆ. ಸ್ವಾಮೀ ವಿವೇಕಾನಂದರು ಹೇಳುವಂತೆ ನಮ್ಮ ಚರಿತ್ರೆಯನ್ನರಿಯದವರು ಸದೃಢ ರಾಷ್ಟ್ರ ಕಟ್ಟಲಾರರು. ಹಾಗಾಗಿ ಚರಿತ್ರೆಯನ್ನರಿಯುವುದು ಬಹಳ ಮುಖ್ಯ.                

                            ನಾವೆಲ್ಲಾ ಇತಿಹಾಸವನ್ನು ಒಂದು ಪಠ್ಯದ ರೂಪದಲ್ಲಿ ನೋಡಿದ ಸಲುವಾಗಿಯೋ ಅಥವಾ ಅವುಗಳನ್ನು ಪ್ರಸ್ತುತಪಡಿಸುವಲ್ಲಿ ತೋರಿದ ನೀರಸತೆಯಿಂದಲೋ ಏನೋ ನಮಗದು ಸಹ್ಯವಾಗಲೇ ಇಲ್ಲ. ಆದರೆ ನಿಜಕ್ಕೂ ಇತಿಹಾಸವೆಂದರೆ ಅದೊಂದು ರೋಚಕ ಕಥೆಗಳ ಗುಚ್ಛ. ಜಗತ್ತಿನ ಇತಿಹಾಸದಲ್ಲಿ ಬರುವ ಎಲ್ಲ ಕಥೆಗಳು ಒಂದಕ್ಕೊಂದರ ಕೊಂಡಿಯೇ. ಹಾಗಾಗಿ ಇತಿಹಾಸವನ್ನು ಎಲ್ಲಿಂದ ಅಧ್ಯಯನ ಮಾಡಬೇಕು ಎಂದು ಕೇಳಿದರೆ ಅದಕ್ಕೆ ನಿರುತ್ತರವೇ ಉತ್ತರ. ಅಲ್ಲದೇ ಈ ಇತಿಹಾಸವನ್ನೋ ಚರಿತ್ರೆಯನ್ನೋ ಒಬ್ಬ ವ್ಯಕ್ತಿ ಬರೆದುದಾದ್ದರಿಂದ ಅದು ಆತನ ಪೂರ್ವಾಗ್ರಹದ ಮೇಲೂ ಅವಲಂಬನೆಯಾಗಿರುತ್ತದೆ. ಉದಾಹರಣೆಗೆ ನನಗೆ ಅಶೋಕ ಚಕ್ರವರ್ತಿಯೆಂದರೆ ಬಹಳ ಖುಷಿ ಎಂದಿಟ್ಟುಕೊಳ್ಳೋಣ, ನಾನು ಪುನಃ ಪುನಃ ಆತನ ಇತಿಹಾಸವನ್ನೇ ಕೆದಕುತ್ತೇನೆಯೇ ಹೊರತು ಆತನನ್ನು ಬಿಟ್ಟು ಹೊರಬರುವ ಮನಸ್ಸೇ ಮಾಡುವುದಿಲ್ಲ, ಅಥವಾ ಆಗುವುದಿಲ್ಲ. ಆದ್ದರಿಂದ ಪ್ರಾಪಂಚಿಕ ಇತಿಹಾಸವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ನಮಗೆ ಗೋಚರವಾಗುವ ಸತ್ಯ ಏನೆಂದರೆ ಚರಿತ್ರೆಯ ಬಹುತೇಕ ಕೊಂಡಿಗಳು ಸಿಗುವುದೇ ಇಲ್ಲ ಎಂಬುದಾಗಿ. ಜೊತೆಗೆ ಯಾವುದೋ ಒಂದು ಸಾಮ್ರಾಜ್ಯದ ಬಗ್ಗೆಯೇ , ಒಂದು ಅರಸನ ಬಗ್ಗೆಯೇ ಲೆಕ್ಕಕ್ಕೆ ಸಿಗದಷ್ಟು ಪುರಾಣಗಳು ಸಿಗುವುದು ಇದೆ. ಇತಿಹಾಸದ ಸಮಗ್ರವಾದ   ಅಧ್ಯಯನ ನಡೆಯದೇ ಅವುಗಳ ವಿಶೇಷತೆ , ಆಳ, ಮಹತ್ವ ಅರಿಯಲು ಸಾಧ್ಯವಿಲ್ಲ. ಮೇಲೆ ಹೇಳಿದ ಪೂರ್ವಾಗ್ರಹವೆಂಬ ಆಶೌಚದಿಂದ ಇಂದಿಗೂ ಚರಿತ್ರೆಯ ಸಂಪೂರ್ಣ ಅಧ್ಯಯನವೆನ್ನುವುದು ಬಿಸಿಲ್ಗುದುರೆಯೇ.!!                                                        ಅಂತಹುದೇ ಕಾರಣದಿಂದಲೋ ಏನೋ ಇಂದಿಗೂ ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆಯಬೇಕಾಗಿದ್ದ ಅನೇಕರು ಇನ್ನೂ ಮಣ್ಣಲ್ಲಿ ಹುಡುಗಿಯೇ ಇದ್ದಾರೆ. ಅವರನ್ನು ಉತ್ಖನನ ಮಾಡಲು ಹೇಳಿಕೊಳ್ಳುವಂಥ ಯಾವ ಪ್ರಯತ್ನಗಳೂ ನಡೆದಿಲ್ಲ. ದುರಂತವೆಂದರೆ ಎಷ್ಟೋ ಜನರ ಬಗ್ಗೆ ಎಷ್ಟೋ ರಾಜ್ಯದ ಬಗ್ಗೆ ಅದರ ಅಸ್ತಿತ್ವದ ಬಗ್ಗೆ ನಮಗಿನ್ನೂ ಸಣ್ಣ ಸುಳಿವೂ ಸಿಕ್ಕಿಲ್ಲ. ಮತ್ತೆ ಕೆಲವರ ಬಗ್ಗೆ ಅಲ್ಪ ಸ್ವಲ್ಪ ಮಾಹಿತಿ ದೊರೆಯುತ್ತದಾದರೂ , ಪರ್ಪೆಕ್ಟ್ ಮಾಹಿತಿ ಇಲ್ಲ. ಹೀಗೆ ಚರಿತ್ರೆಯ ಪುಸ್ತಕದಲ್ಲಿ ಕಳೆದುಹೋಗಿರುವ ಒಂದು ಅಧ್ಯಾಯವೇ ಗೇರುಸೊಪ್ಪ ಸಂಸ್ಥಾನ.                                              ಸಾಮಾನ್ಯವಾಗಿ ನಾನು ಯಾವುದೇ ಪುಸ್ತಕವನ್ನು ಒಂದೇ ಗುಕ್ಕಿಗೆ ಓದಿ ಮುಗಿಸುವುದಿಲ್ಲ. ದಿನವೂ ಸ್ವಲ್ಪ ಸ್ವಲ್ಪವೇ ಓದುತ್ತಾ ಹೋಗುವ ಅಲಿಖಿತ ನಿಯಮ ರೂಢಿಸಿಕೊಂಡಿದ್ದೇನೆ. ಆದರೆ ಈ ಸಂಪ್ರದಾಯಕ್ಕೆ ಎರಡೇ ಎರಡು ಪುಸ್ತಕಗಳು ಮಾತ್ರ ಅಪವಾದ. ಒಂದು ಜುಗಾರಿ ಕ್ರಾಸ್, ಇನ್ನೊಂದು ಬಳ್ಳಿಕಾಳ ಬೆಳ್ಳಿ. ಬಳ್ಳಿಕಾಳ ಬೆಳ್ಳಿಯ ಜನಕ ಕೆ. ಎನ್. ಗಣೇಶಯ್ಯನವರು. ಯಾವುದೇ ಚಾರಿತ್ರಿಕ ಘಟನೆಯೊಂದನ್ನು ಕಾಲ್ಪನಿಕ ಕಥೆಯೊಂದರ ಸೂಜಿಯಲ್ಲಿ ಹೆಣೆಯುವುದಿದೆಯಲ್ಲಾ , ಅದಕ್ಕೆ ಭಾರೀ ಮುತುವರ್ಜಿ ಬೇಕು. ಏಕೆಂದರೆ ಹೇಗೆ ಬೇಕೋ ಹಾಗೆ ಬರೆಯಲು ಅದು ಧಾರಾವಾಹಿಯಲ್ಲ. ಅಥವಾ ಕಟ್ಟುಕಥೆಯೂ ಅಲ್ಲ. ಇದೊಂದು ರೀತಿ ಹಳೆಯ ಸರ್ಕಾರಿ ಕಡತಗಳಿರುವ ಕಟ್ಟಡವನ್ನು ಪುನಃ ನಿರ್ಮಿಸಿದಂತೆ. ಆ ಕಡತಗಳಿಗೆ ಏನೂ ಆಗದಂತೆ ಉಳಿದ ಭಾಗವನ್ನೆಲ್ಲ ಹೊಸದಾಗಿ ನಿರ್ಮಿಸಿವುದು ಬಹುದೊಡ್ಡ ಪ್ರಯಾಸದ ಕೆಲಸವೇ ಸರಿ. ಅದಕ್ಕೆ ಬೇಕಾಗುವ ಚಾಕಚಕ್ಯತೆ,ತಾಳ್ಮೆ , ಸಂಯಮ ಎಲ್ಲವೂ ಪ್ರೈಸ್ ಲೆಸ್ . ಅಂದರೆ ಬೆಲೆಕಟ್ಟಲಾರದಂತವುಗಳು. ಆ ನಿಟ್ಟಿನಲ್ಲಿ ಕೆ. ಎನ್ . ಗಣೇಶಯ್ಯನವರು ಭಾರೀ ದೊಡ್ಡ ಸಾಹಸವನ್ನೇ ಮಾಡಿದ್ದಾರೆ.                                                ವಿಜಯನಗರ ಸಾಮ್ರಾಜ್ಯಕ್ಕಿಂತಲೂ ವೈಭವೋಪೇತವಾದ ಸಾಮ್ರಾಜ್ಯವನ್ನು ಅಕ್ಷರಗಳಲ್ಲಿ ಚಿತ್ರಿಸಬೇಕೆಂದರೆ ಅದು ಸುಲಭದಲ್ಲಿ ಆಗುವ ಮಾತಲ್ಲ. ಅದಕ್ಕಿಂತಲೂ ಬರೆಯುತ್ತಿರುವುದು ಚರಿತ್ರೆಯ ಕಳೆದುಹೋದ ಒಂದು ಅಧ್ಯಾಯವನ್ನಾದ್ದರಿಂದ , ಓದುಗನಿಗೆ ಬೇಸರ ಬಾರದ ರೀತಿಯಲ್ಲಿ ಹಿಡಿದಿಟ್ಟುಕೊಳ್ಳುವ ಸರ್ಕಸ್ ತುಂಬಾ ಕಷ್ಟಕರವಾದದ್ದು. ಆದರೆ ಅದನ್ನು ಗಣೇಶಯ್ಯನವರು ಲೀಲಾಜಾಲವಾಗಿ ನಿಭಾಯಿಸಿದ್ದಾರೆ. ಎಲ್ಲಿಯೂ ಚರಿತ್ರೆಯ ಚೌಕಟ್ಟನ್ನು ಮೀರಿ ಹೋಗದೇ , ಒಂದೊಳ್ಳೆಯ ಸಸ್ಪೆನ್ಸ್ -ಥ್ರಿಲ್ಲರ್ ಕಥೆಯೊಂದಿಗೆ ಜೋಡಿಸಿದ್ದಾರೆ. ಕೊನೆಯವರೆಗೂ ಈ ರಹಸ್ಯ ಬೇಧಿಸುವ ಅಂಶವೇ ಓದುಗನನ್ನು ಕಣ್ಣು ಮಿಟುಕಿಸದಂತೆ ಹಿಡಿದಿಡುತ್ತದೆ.                                                                                                                                                 ರಾಣಿ ಚನ್ನಭೈರಾದೇವಿಯ ಕುರಿತು ನಾನೂ ಹಿಂದೊಮ್ಮೆ ಇದೇ ಅಂಕಣದಲ್ಲಿ ಬರೆದಿದ್ದೆ. ಆಗ ನಾನು ರೆಫರ್ ಮಾಡಿದ ಪುಸ್ತಕ ಬೇರೆಯದಾಗಿದ್ದರಿಂದ ಅಂತಹ ಆಳದ ಮಾಹಿತಿಗಳೇನೂ ನನಗೆ ಸಿಕ್ಕಿರಲಿಲ್ಲ. ಆಕೆಯ ಆಡಳಿತ ವೈಖರಿ , ಯುದ್ಧಗಳು, ನಾಡಿನ ಆಂತರಿಕ ವಿಷಯಗಳು , ಜೊತೆಗೆ ಆಕೆ ತನ್ನ ಸಣ್ಣವಯಸ್ಸಿನಲ್ಲಿಯೇ ರಾಜ್ಯವನ್ನು ಶ್ರೀಮಂತಿಕೆಯ ಸುಪ್ಪೊತ್ತಿಗೆಯಲ್ಲಿ ತೇಲಿಸಿದ ಪರಿ ಇವೆಲ್ಲವನ್ನು ಪುಸ್ತಕ ಹಿಡಿದು ಕುಳಿತುವನಿಗೆ ಕಣ್ಣಿಗೆ ಕಟ್ಟುವಂತೆ ಈ ಬಳ್ಳಿಯಲ್ಲಿ ಹೇಳಲಾಗಿದೆ. ನಾನೂ ಶರಾವತಿಯ ಹೊಳೆಸಾಲಿನವನೇ ಆದ್ದರಿಂದ , ನನಗೆ ಆ ಭಾಗದಲ್ಲಿ ಓಡಾಡಿ ತಿಳಿದಿರುವುದರಿಂದ ಈ ಕಾದಂಬರಿ ಮತ್ತಷ್ಟು ಆಪ್ತವೆನಿಸುತ್ತದೆ. ಈ ಹೊತ್ತಿಗೆಯಲ್ಲಿ ಬರುವ ಸ್ಥಳಗಳು, ಅವರು ಉಲ್ಲೇಖಿಸಿರುವ ಕೆಲವು ವಿಶಿಷ್ಟ ಆಚರಣೆಗಳು, ಕೆಲವು ಸಮುದಾಯಗಳು ಈ ತರಹದ ಸಂಗತಿಗಳೆಲ್ಲ ಬೇರೆ ಭಾಗದ ಜನರಿಗಿಂತ ಇಲ್ಲಿನ ಆಸುಪಾಸಿನವರಿಗೆ ಕಣ್ಣ ಮುಂದೆಯೇ ಹಾದುಹೋದಂತಾಗುತ್ತದೆ. ನಾವೇ ಒಮ್ಮೆ ಆ ಕಾಲಘಟ್ಟಕ್ಕೆ ಹೋಗಿ, ಕಥೆಯಲ್ಲಿಯೇ ಜೀವಿಸಿ ಬಂದಂತಹ ಅನುಭವವಾಗುವುದು ಈ ಕಾದಂಬರಿಯ ಹೆಚ್ಚುಗಾರಿಕೆ. ನಮ್ಮಲ್ಲಿನ ಜಾನಪದ ಪದ್ಯಗಳು, ಬೆಳೆಯುವ ಬೆಳೆಗಳು , ನದಿಯ ಭೌಗೋಳಿಕ ಸಂರಚನೆ ಹಳ್ಳಿಯ ಜನರ ಜಾನಪದ ಭಾಷೆ ಇಂಥದ್ದು ಕಾದಂಬರಿಯ ನೈಜತೆಯ ಸಾಕ್ಷಾತಕರಣಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ.                                                                                        ಒಂದೆಡೆಯಲ್ಲಿ ಗೇರುಸೊಪ್ಪೆಯ ಅಪಾರ ಸಂಪತ್ತಿನ ನಿಧಿಯನ್ನು ಹುಡುಕಿ ಬಂದ ಮಾಫಿಯಾದವರ ಗುಂಪು , ಮತ್ತೊಂದೆಡೆ ಆ ಗುಂಪನ್ನು ಹಿಡಿಯಲ್ಲಿ ಬೆನ್ನಟ್ಟಿ ಹೊರಟ ಅಧಿಕಾರಿ ವರ್ಗ, ಯಾರು ಮೊದಲು ನಿಧಿಯಿರುವ ನಕ್ಷೆಯನ್ನು ಬಿಡಿಸಿ ಆ ಸ್ಥಳಕ್ಕೆ ಹೋಗುತ್ತಾರೆನ್ನುವ ಅಪರಿಮಿತ ಕುತೂಹಲ  ಇವು ಕಾದಂಬರಿಯ ಪ್ರಮುಖ ಅಸ್ತ್ರಗಳು. ಹೇಗೆ ಗೇರುಸೊಪ್ಪೆ ಎಂಬ ನಗರ ಅಸ್ತಿತ್ವಕ್ಕೆ ಬಂತು, ಅದನ್ನು ರಾಣಿ ಚನ್ನಭೈರಾದೇವಿ ಹೇಗೆ ಕಟ್ಟಿ ಬೆಳೆಸಿದಳು, ಆಕೆಗೂ ವಿಜಯನಗರ ಸಾಮ್ರಾಜ್ಯಕ್ಕೂ ಎಲ್ಲಿಂದ ಸಂಬಂಧ, ಆಕೆಯ ವೈಯಕ್ತಿಕ ಜೀವನವೇನು, ತುಳುನಾಡಿನ ಭೂತಾರಾಧನೆಗೂ , ಉತ್ತರಕನ್ನಡದ ಜಟ್ಟಿಗ ಮಾಸ್ತಿಯ ಪೂಜೆಗೂ ಯಾವ ಲಿಂಕ್ , ಇವೆಲ್ಲವನ್ನೂ ಹೇಳುವ ಶಾಸನಗಳೇನಾದರೂ ಇವೆಯೇ, ಇದ್ದರೆ ಎಲ್ಲಿ, ಆಕೆಯ ದಾರುಣ ಅಂತ್ಯಕ್ಕೆ ಕಾರಣವೇನು , ಸಂಪೂರ್ಣ ಭಾರತದಲ್ಲಿಯೇ ಗೇರುಸೊಪ್ಪೆಗೆ ಆ ಕಾಲದಲ್ಲಿ ನೀಡುತ್ತಿದ್ದ ಗೌರವಕ್ಕೆ ಕಾರಣವೇನು, ಗೇರುಸೊಪ್ಪೆ ಹೇಗೆ ಅಂತ್ಯವಾಯಿತು …. ಈ ರೀತಿಯ ನಾನಾ ಪ್ರಶ್ನೆಗಳಿಗೆ ಉತ್ತರ ಈ ಕಾದಂಬರಿಯಲ್ಲಿದೆ. ನಿಜಕ್ಕೂ ಗೇರುಸೊಪ್ಪೆಯಲ್ಲಿದ್ದ ಸಂಪತ್ತೆಷ್ಟು ಎನ್ನುವ ವಿವರ ಕೇಳಿ ಆಶ್ಚರ್ಯವಾಗುವುದು ಅದಕ್ಕೊಂದು ರಫ್ ಲೆಕ್ಕ ಕೊಟ್ಟಾಗ ಮಾತ್ರ. ಆದರೆ ಇತಿಹಾಸವೆನ್ನುವ ಬೋರಿಂಗ್ ವಿಷಯವೊಂದನ್ನು ಈ ರೀತಿ ರೋಚಕ, ರಹಸ್ಯ ತಿರುವುಗಳ ಮೇಲೆ ಕಟ್ಟಿ ನಿಲ್ಲಿಸಲು ಗಟ್ಸ್ ಎನ್ನುತ್ತಾರಲ್ಲ, ಅದು ಬೇಕೇಬೇಕು. ಓದುವಾಗ ಅಲ್ಲಿಯೇ ನೆಲೆಸುವ ನಾವುಗಳು , ಕಾದಂಬರಿಯ ಕೊನೆಯ ಸಾಲನ್ನು ಓದಿ ರೋಮಾಂಚನಗೊಂಡ ಬಳಿಕವೇ ಪ್ರಸ್ತುತಕ್ಕೆ ಬರಲು ಸಾಧ್ಯ . ಮೂಗಿನ ಮೇಲೆ ಬೆರಳಿಟ್ಟು , ನಾವು ಓದಿದ್ದೆಲ್ಲವೂ ಸತ್ಯವಾ ಎಂದು ಒಮ್ಮೆ ನಮ್ಮನ್ನೇ ಅಚ್ಚರಿಯ ಕೂಪಕ್ಕೆ ತಳ್ಳುವ ಎಲ್ಲ ಶಕ್ತಿಯನ್ನು ಈ ಹೊತ್ತಿಗೆ ಹೊಂದಿದೆ. ಆದರೂ ನೀವು ಇದರಿಂದ ಹೊರಬರಲು ೨ ದಿನವಾದರೂ ಬೇಕು.                                                                            ನಮ್ಮ ದೇಶದಲ್ಲಿ ಇಂತಹ ಸಾವಿರ ಸಾವಿರ ವೀರಗಾಥೆಗಳಿವೆ, ದುರಾದೃಷ್ಟವೆಂದರೆ ಅವುಗಳನ್ನು ಹೆಕ್ಕುವ ಗೋಜಿಗೆ ಯಾರೂ ಹೋಗಿಲ್ಲ. ಒಂದು ನಿಟ್ಟಿನಲ್ಲಿ ಒಳ್ಳೆಯದಾಯಿತೆಂದು ಕಂಡರೂ ಭವ್ಯ ಭಾರತದ ಇತಿಹಾಸದ ಮುಕುಟಕ್ಕೆ ರತ್ನವಾಗಬಲ್ಲ ಗೇರುಸೊಪ್ಪೆಯಂತಹ ಅದೆಷ್ಟೋ ರಾಜ ಮನೆತನಗಳ ಪರಿಚಯವೇ ಇಲ್ಲವೆಂದು ಬೇಸರವೂ ಆಗುತ್ತದೆ. ಆ ನಿಟ್ಟಿನಲ್ಲಿ ಅಂಬೆಗಾಲು ಇಡುವವರಾದರೂ ಬರಲಿ ಎಂಬುದೇ ನಮ್ಮ ಹಾರೈಕೆ. ಎನಿ ವೇ ನೀವೂ ಈ ಕಾದಂಬರಿಯನ್ನು ಓದಿ , ಇತಿಹಾಸದ ಪುಸ್ತಕದಲ್ಲಿ ಬಿಟ್ಟುಹೋದ ಒಂದು ಮಹಾನ್ ಅಧ್ಯಾಯವೊಂದು ಧುತ್ತನೆ ಕಣ್ಣೆದುರಿಗೆ ಸಾಗಿ ಹೋಗುತ್ತದೆ. ಇದರಲ್ಲಿ ಅನುಮಾನವೇ ಇಲ್ಲ
                                           

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, ಅಂಕಣಗಳು Tagged With: ಚರಿತ್ರೆಯ ಸಂಪೂರ್ಣ, ಚಾಕಚಕ್ಯತೆ, ತಾಳ್ಮೆ, ಬಳ್ಳಿಕಾಳ ಬೆಳ್ಳಿ, ರೋಚಕ ಕಥೆಗಳ ಗುಚ್ಛ. ಜಗತ್ತಿನ ಇತಿಹಾಸ, ಸದೃಢ ರಾಷ್ಟ್ರ ಕಟ್ಟಲಾರರು, ಸಂಯಮ

Explore More:

About Harshahegde Kondadakuli

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar