ದೇಶಾದ್ಯಂತ ಇರುವ ಸಾರ್ವಜನಿಕ ಮತ್ತು ಖಾಸಗಿ ವಲಯದ ಉಕ್ಕು ಕಂಪನಿಗಳು ದೇಶದ ವೈದ್ಯಕೀಯ ಆಕ್ಸಿಜನ್ ಅಗತ್ಯವನ್ನು ಪೂರೈಸಲು ತಮ್ಮ ಪ್ರಯತ್ನಗಳನ್ನು ತೀವ್ರಗೊಳಿಸಿವೆ. (ಮಂಗಳವಾರ) ಉಕ್ಕು ಘಟಕಗಳು ಒಟ್ಟು 3680.30 ಎಂಟಿ ದ್ರವೀಕೃತ ವೈದ್ಯಕೀಯ ಆಕ್ಸಿಜನ್(ಎಲ್ಎಂಒ) ಅನ್ನು ಉತ್ಪಾದಿಸಿವೆ ಮತ್ತು ಒಟ್ಟು 4076.65 ಎಂಟಿ ಎಲ್ಎಂಒ ಅನ್ನು ಪೂರೈಕೆ ಮಾಡಿವೆ. 2021ರ ಏಪ್ರಿಲ್ 25ರಂದು ಹಲವು ರಾಜ್ಯಗಳಿಗೆ 3131.84 ಮೆಟ್ರಿಕ್ ಟನ್ ಎಲ್ಎಂಒ ಅನ್ನು ಪೂರೈಕೆ ಮಾಡಿದ್ದವು. ಏಪ್ರಿಲ್ ಮಧ್ಯ ಭಾಗದಿಂದ ಪ್ರತಿ ದಿನ ಸರಾಸರಿ 1500 ರಿಂದ 1700 ಮೆಟ್ರಿಕ್ ಟನ್ ಆಮ್ಲಜನಕವನ್ನು ರವಾನಿಸುತ್ತಿವೆ.
ಕೇಂದ್ರ ಉಕ್ಕು ಹಾಗೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಕಳೆದ ವಾರ ಸಾರ್ವಜನಿಕ ಮತ್ತು ಖಾಸಗಿ ವಲಯದ ಉಕ್ಕು ಕಂಪನಿಗಳ ಮುಖ್ಯಸ್ಥರೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದರು. ಅವರು ಉಕ್ಕು ಘಟಕಗಳಿಂದ ವೈದ್ಯಕೀಯ ಆಮ್ಲಜನಕ ಪೂರೈಕೆಯನ್ನು ಹೆಚ್ಚಿಸಲು ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ನಡೆಸಬೇಕು ಎಂದು ಕರೆ ನೀಡಿದ್ದರು. ಅಲ್ಲದೆ ಆರೋಗ್ಯ ಮೂಲಸೌಕರ್ಯವನ್ನು ವೃದ್ಧಿಸುವ ಸಲುವಾಗಿ ಆಕ್ಸಿಜನ್ ಸಹಿತ ಹಾಸಿಗೆಗಳನ್ನೊಳಗೊಂಡ ದೊಡ್ಡ ಕೋವಿಡ್ ಆರೈಕೆ ಕೇಂದ್ರಗಳನ್ನು ನಿರ್ಮಿಸುವಂತೆಯೂ ಅವರು ಕರೆ ನೀಡಿದ್ದರು.
ಭಾರತೀಯ ಉಕ್ಕು ಪ್ರಾಧಿಕಾರ ದೇಶದ ಅತಿ ದೊಡ್ಡ ಉಕ್ಕು ಉತ್ಪಾದನಾ ಕಂಪನಿಯಾಗಿದ್ದು, ಅದು ದೇಶದಲ್ಲಿ ದ್ರವೀಕೃತ ವೈದ್ಯಕೀಯ ಆಕ್ಸಿಜನ್ ಪೂರೈಕೆ ಸಾಮರ್ಥ್ಯ ವೃದ್ಧಿಗೆ ಹಲವು ಕ್ರಮಗಳನ್ನು ಕೈಗೊಂಡಿದೆ. ಅದು ಪ್ರತಿ ದಿನ ತನ್ನ ಏಕೀಕೃತ ಉಕ್ಕು ಘಟಕಗಳಾದ ಭಿಲಾಯ್(ಛತ್ತೀಸ್ ಗಢ), ರೂರ್ಕೆಲಾ(ಒಡಿಶಾ), ಬೊಕಾರೊ(ಜಾರ್ಖಂಡ್), ದುರ್ಗಾಪುರ್ ಮತ್ತು ಬುರನ್ಪುರ್(ಪಶ್ಚಿಮ ಬಂಗಾಳ) ಇವುಗಳಿಂದ ಎಲ್ಎಂಒ ಅನ್ನು ಪೂರೈಕೆ ಮಾಡುತ್ತಿದ್ದು, ಇವುಗಳ ಸಾಮರ್ಥ್ಯದ ಮಟ್ಟ ಏಪ್ರಿಲ್ 2ನೇ ವಾರದಲ್ಲಿ ಪ್ರತಿ ದಿನ ಸುಮಾರು 500 ಮೆಟ್ರಿಕ್ ಟನ್ ಇದ್ದದ್ದು, ಸದ್ಯ 1100 ಅಧಿಕ ಎಂಟಿಗೆ ಹೆಚ್ಚಿಸಲಾಗಿದೆ. ಕಂಪನಿ ಈವರೆಗೆ ಸುಮಾರು 50,000 ಎಂಟಿ ಎಲ್ಎಂಒ ಅನ್ನು ಪೂರೈಕೆ ಮಾಡಿದೆ. ಏಪ್ರಿಲ್ ತಿಂಗಳೊಂದರಲ್ಲೇ ಎಸ್ಎಐಎಲ್ ದೇಶಾದ್ಯಂತ ಘಟಕಗಳು ಇರುವ ರಾಜ್ಯಗಳೂ ಸೇರಿದಂತೆ 15 ರಾಜ್ಯಗಳಿಗೆ 17,500ಕ್ಕೂ ಅಧಿಕ ಎಂಟಿ ಅನ್ನು ಪೂರೈಕೆ ಮಾಡಿದೆ.
ಎಸ್ಎಐಎಲ್ ಗೆ ಸೇರಿದ ಬೊಕಾರೊ, ರೂರ್ಕೆಲಾ ಮತ್ತು ದುರ್ಗಾಪುರ ಘಟಕಗಳು ಸೇರಿದಂತೆ ನಾನಾ ಭಾಗಗಳಲ್ಲಿರುವ ಘಟಕಗಳಿಂದ ನಿನ್ನೆ (ಮಂಗಳವಾರ) 14 ಆಕ್ಸಿಜನ್ ಎಕ್ಸಪ್ರೆಸ್ ರೈಲುಗಳ ಮೂಲಕ 950 ಎಂಟಿಗೂ ಅಧಿಕ ಎಲ್ಎಂಒ ಅನ್ನು ಸಾಗಣೆ ಮಾಡಲಾಗಿದೆ. ಎಸ್ಎಐಎಲ್ ನ ಘಟಕಗಳು ವಿಮಾನದ ಮೂಲಕ ಖಾಲಿ ಟ್ಯಾಂಕರ್ ಗಳನ್ನು ಪಡೆಯುತ್ತಿವೆ ಮತ್ತು ಅವುಗಳನ್ನು ಭರ್ತಿ ಮಾಡಿದ ನಂತರ ಅವುಗಳನ್ನು ರಸ್ತೆ ಅಥವಾ ರೈಲು ಮಾರ್ಗದ ಮೂಲಕ ನಿಗದಿತ ಸ್ಥಳಕ್ಕೆ ರವಾನಿಸಲಾಗುತ್ತಿದೆ. ರೈಲ್ವೆ, ಭಾರತೀಯ ವಾಯುಪಡೆ, ಉಕ್ಕು ಘಟಕಗಳು ಮತ್ತು ಆಕ್ಸಿಜನ್ ಘಟಕಗಳು ಟ್ಯಾಂಕರ್ ಗಳ ಸಾಗಾಣೆಗೆ ಸಮನ್ವಯದ ಪ್ರಯತ್ನಗಳನ್ನು ನಡೆಸುತ್ತಿವೆ. ಇಂದು ಭಾರತೀಯ ವಾಯುಪಡೆ, ಆಸ್ಟ್ರೇಲಿಯಾದ ಪರ್ತ್ ನಿಂದ ನಾಲ್ಕು ಕ್ರಯೋಜೆನಿಕ್ ಟ್ಯಾಂಕರ್ ಗಳನ್ನು ವಿಮಾನದ ಮೂಲಕ ಹೊತ್ತು ತಂದಿದೆ.
Leave a Comment