ಭಟ್ಕಳ: ಇಷ್ಟುದಿನ ಜನರು ಕೋರೊನಾದಿಂದ ಸಂಕಷ್ಟ ಅನುಭವಿಸುತ್ತಿದ್ದು ಈಗ ವಾತಾವರಣದ ವೈಪರೀತ್ಯದಿಂದ ಉಂಟಾದ ತೌಕ್ತೆ ಹೆಸರಿನ ಚಂಡಮಾರುತದ ಪರಿಣಾಮದಿಂದಾಗಿ ಭಟ್ಕಳದ ಬೈಲೂರಿನ ಕ್ರಷಿಕನೋರ್ವರ ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದ ನೆಂದ್ರಾ ಬಾಳೆ ಗಾಳಿ ಮಳೆಗೆ ಸಂಪೂರ್ಣ ನೆಲಕಚ್ಚಿದ್ದು, ಸಾಲ ಮಾಡಿ ಬೆಳೆ ಹಾಕಿದ ರೈತನಿಗೆ ಲಕ್ಷಾಂತರ ರೂ.ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾದಂತಾಗಿದೆ.
ಸತತ ಎರಡನೇ ವರ್ಷ ಚಂಡಮಾರುತದ ಅಬ್ಬರ ಜನರನ್ನು ಕಂಗಾಲಾಗಿಸಿದ್ದು, ಈ ವರ್ಷ ಕೋರೋನಾದ ಎರಡನೇ ಅಲೆಯ ಮಧ್ಯಂತರದ ಅವಧಿಯಲ್ಲಿ ಕೇರಳದಲ್ಲಿ ಉಂಟಾದ ತೌಕ್ತೆ ಚಂಡಮಾರುತದ ಹಿನ್ನೆಲೆ ಸತತ ಮೂರು ದಿನಗಳ ಕಾಲ ಗಾಳಿ ಮಳೆ ಸಹಿತ ಕಡಲುಬ್ಬರಗಳಿಂದ ಕರಾವಳಿ ತೀರದ ಪ್ರದೇಶದ ಜನರ ಕಂಗಾಲಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಇನ್ನು ಸಾಕಷ್ಟು ಕ್ರಷಿ ಜಮೀನಿಗೆ ಸಮುದ್ರದ ನೀರು ನುಗ್ಗಿದ್ದರೆ ಬೇಲೂರಿನ ಮಡಿಕೇರಿ ಗ್ರಾಮದ ಕ್ರಷಿಕ ಅಚ್ಚುತ ವೈದ್ಯ ಎನ್ನುವವರ ಬಾಳೆ ಜಮೀನು ಸಂಪೂರ್ಣ ಹಾನಿಯಾಗಿ ಬಾಳೆಗಿಡಗಳೆಲ್ಲ ನೆಲಕಚ್ಚಿದೆ. ಈ ಭಾಗದಲ್ಲಿ ಅಪರೂಪದ ಬಾಳೆ ತಳಿಯಲ್ಲಿ ಒಂದಾದ ನೆಂದ್ರಾ ಬಾಳೆ ಕ್ರಷಿ ಸಾಕಷ್ಟು ಆದಾಯ ತರಲಿರುವ ಹಿನ್ನೆಲೆ ಹೆಚ್ಚಿನ ಕ್ರಷಿಕರು ಇದರ ಬೇಸಾಯ ಮಾಡುತ್ತಾರೆ.ಅದರಂತೆ ಕ್ರಷಿಕ ಅಚ್ಚುತ ವೈದ್ಯ ಅವರು ಕಳೆದ ಅಕ್ಟೋಬರ್ ತಿಂಗಳಲ್ಲಿ ಈ ವಿಶೇಷ ನೇಂದ್ರಾ ಬಾಳೆ ತಳಿಯ ನಾಟಿ ಮಾಡಿದ್ದು, ಉಡುಪಿ ಜಿಲ್ಲೆಯ ಕೊಲ್ಲೂರನಿಂದ 600 ಬಾಳೆ ಗಡ್ಡೆಯನ್ನು ವಾಹನದಲ್ಲಿ ಬೈಲೂರಿಗೆ ತಂದಿದ್ದು, ಒಂದು ಗಡ್ಡೆಗೆ 23 ರೂಪಾಯಿಯಂತೆ 15 ಸಾವಿರ ವೆಚ್ಚದಲ್ಲಿ ಖರೀದಿ ಬೆಳೆ ಹಾಕಲಾಗಿತ್ತು.
ಇನ್ನು ಬೆಳೆ ಖರೀದಿಯ ಜೊತೆಗೆ ಬೆಳೆಗೆ ಅನೂಕೂಲಕರವಾಗಿ ಜಮೀನನ್ನು ತಯಾರಿಸಿದ್ದ ಇವರುಇದಕ್ಕೆ 1 ಲಕ್ಷಕ್ಕೂ ಅಧಿಕ ರೂ. ವೆಚ್ಚದಲ್ಲಿ ಕೆಲಸಗಾರರನ್ನು ಹಾಕಿ ಜಾಗ ತಟ್ಟು (ಸಮ) ಮಾಡಿ ಬಾಳೆ ಕೃಷಿ ಮಾಡಲಾಗಿತ್ತು. 8 ತಿಂಗಳ ಈ ನೇಂದ್ರಾ ಬೆಳೆಯ ಇಳುವರಿಗೆ ಅನೂಕೂಲಕರ ನೀರಿನ ವ್ಯವಸ್ಥೆಯನ್ನು ಮಾಡುತ್ತಾ ಬಂದಿದ್ದರು. ಆದರೆ ಇನ್ನೇನು ಎರಡು ತಿಂಗಳಲ್ಲಿ ಫಸಲು ಕೈಗೆ ಸಿಗುವ ಹಂತದಲ್ಲಿದ್ದ ವೇಳೆ ಗಾಳಿ ಮಳೆಗೆ ಎಲ್ಲವೂ ನಾಶವಾಗಿ ಬೆಳೆದು ನಿಂತಿದ್ದ ಗಿಡಗಳೆಲ್ಲವೂ ನೆಲಸಮವಾಗಿದೆ.
ಈ ಬಗ್ಗೆ ತೋಟಗಾರಿಕೆ ಇಲಾಖೆಗೆ ಮಾಹಿತಿ ನೀಡಿದ ರೈತ ಅಚ್ಚುತ ವೈದ್ಯ ಬಳಿಕ ಸ್ಥಳಕ್ಕೆ ಬಂದ ಬೈಲೂರು ಪಂಚಾಯತ ಪಿಡಿಓ, ತೋಟಗಾರಿಕೆ ಇಲಾಖೆ ಸಿಬ್ಬಂದಿ ಮಾದೇವಪ್ಪ, ಕಂದಾಯ ಇಲಾಖೆ ಆರ್.ಎ. ಅವರು ಭೇಟಿ ನೀಡಿ ಹಾನಿ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಆದರೆ ಭಟ್ಕಳ ಹೊನ್ನಾವರ ತಾಲೂಕಾ ಗಡಿ ಬಾಗವಾದ ಹಿನ್ನೆಲೆ ಹೊನ್ನಾವರ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಹ ಬಂದು ಭೇಟಿ ನೀಡಿ ಪರಿಶೀಲನೆ ಕೈಗೊಂಡು ತೆರಳಿದ್ದಾರೆ.
ಒಟ್ಟಾರೆಯಾಗಿ ಬಾಳೆ ಬೆಳೆ ನಾಶದಿಂದ 4-5 ಲಕ್ಷ ಹಾನಿ ಸಂಭವಿಸಿದ್ದು, ರೈತ ನಷ್ಟ ಅನುಭವಿಸುವುದರೊಂದಿಗೆ ತಲೆಮೇಲೆ ಕೈಕೊಟ್ಟು ಕುಳಿತುಕೊಳ್ಳುವಂತಾಗಿದೆ.ಒಂದು ಕಡೆ ಕೋರೊನಾದಿಂದ ದುಡಿಮೆಇಲ್ಲವಾಗಿದ್ದು, ಇತ್ತ ಫಸಲಿಗೆ ಬಂದ ಬೆಳೆ ನಾಶದಿಂದ ನಷ್ಟ ಎದುರಿಸುವ ಸ್ಥಿತಿ ಕ್ರಷಿಕ ಅಚ್ಚುತ ವೈದ್ಯರದ್ದಾಗಿದೆ.
Leave a Comment