ಭಟ್ಕಳ: ಸದ್ಯ ಕೋವಿಡ್ ಲಾಕ್ ಡೌನ ಹಿನ್ನೆಲೆ ಮೀನುಗಾರಿಕೆ ನಿಷೇದವಾಗಿದೆ ಅತ್ತ ಕಳೆದ 3-4 ದಿನದ ಹಿಂದೆ ಅಬ್ಬರಿಸಿದ ಚಂಡಮಾರುತದಿಂದ ಮುರುಡೇಶ್ವರ ಭಾಗದ ಸಮುದ್ರ ದಡದಲ್ಲಿದ್ದ ಸಾಕಷ್ಟು ದೋಣಿಗಳಿಗೆ ಹಾನಿಯಾದ ಹಿನ್ನೆಲೆ ಸಮುದ್ರದ ಭಾರೀ ಅಲೆಗಳಿಂದಾಗಿ ಹಾನಿಯಾಗುವುದನ್ನು ತಪ್ಪಿಸಿಕೊಳ್ಳಲು ಮೀನುಗಾರರು ದೋಣಿಯನ್ನು ದೇವಸ್ಥಾನದ ಎದುರಿನ ರಸ್ತೆಯ ಅಕ್ಕ ಪಕ್ಕ ಇಟ್ಟು ರಕ್ಷಿಸಿಕೊಳ್ಳಲು ಮುಂದಾಗಿದ್ದಾರೆ.

ಬೈಲೂರು, ಕಾಯ್ಕಿಣಿ, ಮುರುಡೇಶ್ವರ ಭಾಗದ ಮೀನುಗಾರರು ಮುಡೇಶ್ವರದ ಸಮುದ್ರ ತೀರದ ಎರಡು ಕಡೆಗಳಲ್ಲಿ ದೋಣಿಗಳನ್ನು ಇಡುತ್ತಿದ್ದು, ಒಟ್ಟುಸುಮಾರು 800 ಪಾತಿ ದೋಣಿ ಮತ್ತು 380 ನಾಡ ದೋಣಿಗಳಿವೆ. ಚಂಡಮಾರುತ ಮೂನ್ಸೂಚನೆಯ ಹಿನ್ನೆಲೆ ಮೀನುಗಾರರು ಯಾರು ಸಹ ಸಮುದ್ರಕ್ಕೆ ತೆರಳದೇ ಮೀನುಗಾರಿಕೆ ನಿಷೇಧಿಸಿದ್ದರು. ಆದರೆ ಚಂಡಮಾರುತದ ಅಬ್ಬರ ಸಮುದ್ರದ ದಡದಲ್ಲಿರಿಸಿದ ದೋಣಿಗಳಿಗೆ ಹಾನಿಯುಂಟಾಗುವಷ್ಟರ ಮಟ್ಟಿಗೆ ನೀರಿನ ಅಲೆಗಳು ನುಗ್ಗಿದ್ದರ ಪರಿಣಾಮ ಸಾಕಷ್ಟು ನಾಡದೋಣಿ, ಪಾತಿ ದೋಣಿಗಳಿಗೆ ಹಾನಿಯಾಗಿದ್ದರೆ ಕೆಲವೊಂದು ನೀರಿನ ರಭಸಕ್ಕೆ ನೀರು ಪಾಲಾಗಿದ್ದವು. ಅದರಂತೆ ಪಾತಿ ದೋಣಿಯ ಬಲೆಗಳು ಹಾನಿಯಾಗಿದ್ದು ಮೀನುಗಾರರು ಸಂಕಷ್ಟ ಅನುಭವಿಸುವಂತಾಗಿದೆ.
ಚಂಡಮಾರುತದ ಅಬ್ಬರ ಇಳಿದ ಬಳಿಕ ಸ್ಥಳಕ್ಕೆ ಬಂದ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಹಾನಿಯ ವರದಿ ಸಿದ್ದಪಡಿಸಿದ್ದು ಇದರಲ್ಲಿ 77 ದೋಣಿಗಳ ಬಲೆ, ಕೆಲವು ದೋಣಿ ಹಾನಿ ಸಹಿತ ಕೆಲವೊಂದು ದೋಣಿಗಳ ನೀರು ಪಾಲಾಗಿರುವ ಬಗ್ಗೆ ಹಾನಿ ವರದಿ ಮಾಡಿದ್ದು ಈ ಬಗ್ಗೆ ಮುರುಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿ ಇಲಾಖೆಗೆ ನೀಡಬೇಕೆಂಬ ಸರಕಾರದ ಆದೇಶದಂತೆ ದೂರು ಸಹ ನಾಡದೋಣಿ ಮೀನುಗಾರರ ಸಂಘದ ವತಿಯಿಂದ ದೂರು ಸಲ್ಲಿಸಲಾಗಿದ್ದು ಮೀನುಗಾರರಿಗಾದ ಹಾನಿಗೆ ತಕ್ಕ ಪರಿಹಾರಕ್ಕೆ ಮೀನುಗಾರರು ಕಾಯುತ್ತಿದ್ದಾರೆ.
ಇವೆಲ್ಲದರ ಮಧ್ಯೆ ಚಂಡಮಾರುತದ ಅಬ್ಬರ ಇಳಿದ ಬಳಿಕ ಸಮುದ್ರದ ದಡದಲ್ಲಿ ದೋಣಿಗಳಿಡಲು ಸಮರ್ಪಕವಾದ ಸ್ಥಳಾವಕಾಶದ ಕೊರತೆ ಹಾಗೂ ಮೀನುಗಾರರು ತಮ್ಮ ದೋಣಿಗಳ ರಕ್ಷಣೆಯ ಹಿನ್ನೆಲೆ ಸದ್ಯ ನಾಡ ದೋಣಿ ಹಾಗೂ ಪಾತಿ ದೋಣಿ ಸಹಿತ 96 ದೋಣಿಗಳು ಸದ್ಯ ಮುರುಡೇಶ್ವರ ದೇವಸ್ಥಾನದ ಎದುರಿನ ರಸ್ತೆಯ ಎರಡು ಕಡೆಗಳಲ್ಲಿ ಸ್ಥಳಾಂತರಿಸಿಡಲಾಗಿದೆ.
ಇನ್ನೂ ಸಹ ತಾಲೂಕಿನಲ್ಲಿ ಮಳೆಯ ಅಬ್ಬರವಿದ್ದ ಹಿನ್ನೆಲೆಗಾಳಿ ಮತ್ತು ಸಮುದ್ರದಲ್ಲಿ ಅಲೆಗಳ ಆರ್ಭಟ ಪೂರ್ಣ ಪ್ರಮಾಣದಲ್ಲಿ ಇನ್ನೂ ಕಡಿಮೆಯಾದ ಹಿನ್ನೆಲೆಯಲ್ಲಿ ಆಗಬಹುದಾದ ಹಾನಿಯನ್ನು ತಡೆಯಲು ಮೀನುಗಾರರು ಮನಗಂಡು ತಲೆ ಮೇಲೆ ಕೈಕೊಟ್ಟು ಕುಳಿತಿದ್ದಾರೆ. ಇನ್ನು ಕೆಲ ತಿಂಗಳ ಬಳಿಕ ಬರುವ ಮಳೆಗಾಲದಿಂದ ಮೀನುಗಾರಿಕೆಗೆ ತೆರಳುವುದು ಕಷ್ಟ ಸಾದ್ಯವಾಗಿದೆ.
ಸದ್ಯ ದೋಣಿಗಳಿಡಲು ಮೀನುಗಾರರಿಗೆ ಲಾಕ್ ಡೌನ ಜಾರಿಯಲ್ಲಿರುವುದು ಅನೂಕೂಲವಾಗಿದ್ದು ಮುರ್ಡೇಶ್ವರದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿರುವುದಾಗಿದೆ. ಹಾಗೂ ಜನ ಸಂಚಾರ, ಪ್ರವಾಸಿಗರ ಓಡಾಟ ನಿಷೇಧವೂ ಮೀನುಗಾರರಿಗೆ ರಸ್ತೆಯಲ್ಲಿ ದೋಣಿಯನ್ನು ಇಡಲು ಸಹಕಾರಿಯಾಗಿದೆ.
ತೌಕ್ತೆ ಚಂಡಮಾರುತ ಹಾಗೂ ಈ ವರ್ಷವೂ ಸಹ ಕೋವಿಡ್ ಎರಡನೇ ಅಲೆ ಪರಿಣಾಮ ಮೀನುಗಾರಿಕೆಗೆ ಭಾರಿ ನಷ್ಟ ಅನುಭವಿಸುವಂತೆ ಮಾಡಿದ್ದು, ಮುರ್ಡೇಶ್ವರ ಕಡಲ ತೀರದಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿದ್ದು ಅಂದು ಸಮುದ್ರ ಭಾರಿ ಅಲೆಗಳು ದಡದಲ್ಲಿದ್ದ ಪಾತಿದೋಣಿ ಯಾಂತ್ರಿಕ ದೋಣಿ ಬೋಟ್ ಗಳಿಗೆ ಅಪ್ಪಳಿಸಿದರಿಂದ ಹಾನಿಯಾಗಿದ್ದರೆ ಅತ್ತ ಮೀನುಗಾರರು ಸಹ ದುಡಿಮೆ ಇಲ್ಲದೇ ಸಮಸ್ಯೆ ಅನುಭವಿಸಿವಂತಾಗಿದ್ದು ಸರಕಾರ ಸಹ ಮೀನುಗಾರರನ್ನು ಹೊರತು ಪಡಿಸಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು ಎಲ್ಲಾ ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಗೂಡಂಗಡಿಗಳು ಸಹ ಹಾನಿ:
ತಾಲ್ಲೂಕಿನ ವಿಶ್ವಪ್ರಸಿದ್ಧ ಮುರ್ಡೇಶ್ವರ ಕಡಲದ ತೀರದ ವ್ಯಾಪಾರಿಗಳ ಈ ವರ್ಷದ ವ್ಯಾಪಾರವನ್ನು ಕೊರೊನಾ ನುಂಗಿ ಹಾಕಿದರೆ, ಅರಬ್ಬಿ ಸಮುದ್ರದಿಂದ ಆಕಸ್ಮಿಕವಾಗಿ ಬಂದೆರಗಿದ ‘ತೌಕ್ತೆ’ ಚಂಡಮಾರುತ ಅವರ ಬದುಕನ್ನೇ ಕಸಿದುಕೊಂಡಿದೆ.
ಜಿಲ್ಲೆಗೆ ಅತಿ ಹೆಚ್ಚು ಪ್ರವಾಸಿಗರು ಬರುವ ಮುರ್ಡೇಶ್ವರದಲ್ಲಿ ಡಿಸೆಂಬರ್ನಿಂದ ಮೇತನಕ ಉತ್ತಮ ವ್ಯಾಪಾರ ವಹಿವಾಟು ನಡೆಯುತಿತ್ತು. ಸದಾ ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ಈ ತಾಣವು, ಕೋವಿಡ್ ಎರಡನೇ ಅಲೆಯ ಕಾರಣದಿಂದ ಒಂದು ತಿಂಗಳಿನಿಂದ ಸಂಪೂರ್ಣ ಸ್ತಬ್ಧವಾಗಿದೆ. ವ್ಯಾಪಾರವಿಲ್ಲದೇ ಕುಳಿತಿದ್ದವರ ಜೀವನದ ಮೇಲೆ ಚಂಡಮಾರುತ ಅಪ್ಪಳಿಸಿದೆ.
ಕಡಲತೀರದಲ್ಲಿದ್ದ ಹತ್ತಾರು ಗೂಡಂಗಡಿಗಳು, ಪ್ರವಾಸಿಗರ ಮನೋರಂಜನೆಗಾಗಿ ಬಳಸುವ ದೋಣಿಗಳು, ಆಟಿಕೆ ಸಾಮಗ್ರಿ ಸಮುದ್ರ ಅಲೆಗೆ ಸಿಲುಕಿ ಹಾನಿಗೀಡಾಗಿದೆ. ಸದ್ಯ ಚಂಡಮಾರುತದ ಅಬ್ಬರ ಇಳಿದ ಮೇಲೆ ಸಾಕಷ್ಟು ಗೂಡಂಗಡಿಗಳ ವಸ್ತುಗಳು ನೀರು ಪಾಲಾಗಿದ್ದು ಉಳಿದರು ಮರಳಿನಲ್ಲಿ ಹೂತು ಹೋಗಿವೆ. ಅದರಂತೆ ಇನ್ನು ಕೆಲವು ಅಂಗಡಿಗಳ ಅವಶೇಷಗಳಷ್ಟೇ ಇದ್ದು ಇದರ ಪುನರ್ ನಿರ್ಮಾಣ ಅಂಗಡಿಕಾರರ ಚಿಂತೆಗೆ ಕಾರಣವಾಗಿದೆ.
Leave a Comment