ಭಟ್ಕಳ: ಒಂದು ಸಮುದಾಯದ ಮನವಿಯ ಮೇರೆಗೆ ಕೋವಿಡ್ ಕಂಟೈನ್ಮೆಂಟ್ ಪ್ರದೇಶಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಒಡಾಡಲು ಅನುವು ಮಾಡಿಕೊಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಶಾಸಕ ಸುನೀಲ ನಾಯ್ಕ ತರಾಟೆಗೆ ತೆಗೆದುಕೊಂಡಿದ್ದಾರೆ.

ಸೋಮವಾರ ಪಟ್ಟಣದ ನ್ಯಾಯಾಲಯದ ಎದುರಿನ ಕಂಟೈನ್ಮೆಂಟ್ ಪ್ರದೇಶದಲ್ಲಿ ಜನರು ಅನಾಯಾಸವಾಗಿ ಒಡಾಡುತ್ತಿರುವುದು ಶಾಸಕರ ಗಮನಕ್ಕೆ ಬಂದಿತ್ತು. ಇತ್ತೀಚಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಕೊಂಚ ಇಳಿಮುಖವಾಗಿದ್ದು ಭಟ್ಕಳದಲ್ಲಿ ಕೆಲವು ಪ್ರದೇಶಗಳನ್ನು ಕಂಟೈನ್ಮೆಂಟ್ ಝೋನ್ ಗಳಾಗಿ ಘೋಷಿಸಿ ಕೋವಿಡ್ ಪ್ರಕರಣಗಳು ಹೆಚ್ಚಿರುವ ಕಡೆಗಳ ರಸ್ತೆಗಳನ್ನು ಬ್ಯಾರಿಕೇಡ್ ಅಳವಡಿಸುವ ಮೂಲಕ ಸಂಪೂರ್ಣ ಮುಚ್ಚಲಾಗಿತ್ತು. ಕೆಲವು ಪುರಸಭೆ ಮತ್ತು ಪ.ಪಂ ಜನಪ್ರತಿನಿಧಿಗಳು ತಮ್ಮವರನ್ನು ಒಲೈಸಲು ಪುರಸಭೆ, ಪ.ಪಂ, ಪೊಲೀಸ್ ಅಧಿಕಾರಿಗಳನ್ನು ಬೆದರಿಸಿ, ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಬ್ಯಾರಿಕೇಡ್ಗಳನ್ನು ತೆರವುಗೊಳಿಸಿದ್ದರು.
ಸರ್ಕಾರದ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಲ್ಲದೆ ಕಾರ್ಯನಿರತ ಅಧಿಕಾರಿಗಳ ಮೇಲೆ ದರ್ಪ ತೋರಿದ ವಿಚಾರ ತಿಳಿದು ಸ್ಥಳಕ್ಕೆ ಶಾಸಕರು ಭೇಟಿ ನೀಡಿ ಸಂಭಂದಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೂಡಲೆ ತೆರವುಗೊಳಿಸಿದ ಬ್ಯಾರಿಕೇಡ್ಗಳನ್ನು ಹಾಕಿಸಿ ಇಂತಹ ಉದ್ಧಟತನ ತೋರಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ ಪ್ರಕರಣ ಸೋಮವಾರ ಸಂಜೆ ನಡೆದಿದೆ.
Leave a Comment