ಭಟ್ಕಳ: ತಾಲೂಕಿನ ಎಲ್ಲಾ ಶಿಕ್ಷಕರಿಗೆ ಮತ್ತು ವಿವಿಧ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಸರಕಾರಿ ನೌಕರರಿಗೆ ಪ್ರಥಮ ಆದ್ಯತೆಯ ಮೇರೆಗೆ ಕೋವಿಡ್ ಲಸಿಕೆ ನೋಡುವಂತೆ ಆಗ್ರಹಿಸಿ ಭಟ್ಕಳ ಘಟಕದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದಿಂದ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರಿಗೆ ಸೋಮವಾರದಂದು ಮನವಿ ಸಲ್ಲಿಸಿದರು.

ಕೋವಿಡ್ 19 ನ ತೀವ್ರ ದುಷ್ಪರಿಣಾಮವನ್ನು ಎದುರಿಸುತ್ತಿದ್ದೇವೆ. ವೈದ್ಯರು, ಪೋಲೀಸ್ ಸಿಬ್ಬಂದಿಗಳು, ದಾದಿಯರು, ಆಶಾ ಕಾರ್ಯಕರ್ತರಂತೆ ಶಿಕ್ಷಕರು, ವಿವಿಧ ಇಲಾಖೆಯ ಸರಕಾರಿ ನೌಕರರು ಈ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. ತಮ್ಮ ಜೀವ ಹಾಗೂ ಜೀವನವನ್ನೇ ಪಣಕ್ಕಿಟ್ಟು ಹೋರಾಟ ನಡೆಸುತ್ತಿದ್ದು, ಈ ಪೈಕಿ ಹಲವು ನೌಕರರು, ಶಿಕ್ಷಕರಿಗೆ ಸೋಂಕು ತಗುಲಿ ಸಂಕಷ್ಟ ಅನುಭವಿಸಿದ್ದರೆ ಇನ್ನು ಕೆಲವರು ಮ್ರತಪಟ್ಟಿದ್ದಾರೆ. ಈ ಹೋರಾಟಕ್ಕೆ ಅತ್ಯಂತ ಪರಿಣಾಮಕಾರಿ ಅಸ್ತ್ರವೆಂದರೆ ಅದು ಲಸಿಕೆಯಾಗಿದೆ.
ಹಾಗಾಗಿ ಸರಕಾರವು ವಿವಿಧ ಇಲಾಖೆಗಳ ಕೊರೋನಾ ವಾರಿಯರ್ಸ್ ಗಳಿಗೆ ಈಗಾಗಲೇ ಲಸಿಕೆಯನ್ನು ನೀಡಿದೆ. ಶಿಕ್ಷಣ ಇಲಾಖೆಯಲ್ಲಿ ಕೋವಿಡ್ ಕರ್ತವ್ಯ ನಿರತ ಶಿಕ್ಷಕರಿಗೆ ಮಾತ್ರ ಲಸಿಕೆಯನ್ನು ನೀಡಿದೆ. ಜುಲೈ 1 ರಿಂದ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸಲು ಸರಕಾರವು ಆದೇಶಿಸಿದ್ದು, ಪೂರ್ವ ಸಿದ್ಧತೆ ಮಾಡಿಕೊಳ್ಳಲು ಈಗಾಗಲೇ ಸೂಚಿಸಿದೆ. ಅದರಂತೆ ಜೂನ್ 15 ರಿಂದಲೇ ದಾಖಲಾತಿ ಹಾಗೂ ವಿವಿಧ ಪೂರ್ವ ಸಿದ್ದತಾ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕಿದೆ.
ತಜ್ಞರು ಕೋವಿಡ್ 3 ನೇ ಅಲೆಯು ಮಕ್ಕಳಿಗೆ ತೀವ್ರ ಪರಿಣಾಮವನ್ನುಂಟು ಮಾಡುತ್ತದೆಯೆಂದು ಈಗಾಗಲೇ ತಿಳಿಸಿದ್ದಾರೆ.ಶಿಕ್ಷಕರು ಮಕ್ಕಳ ನೇರ ಸಂಪರ್ಕಕ್ಕೆ ಬರುವುದರಿಂದ ಮಕ್ಕಳ ಹಾಗೂ ಶಿಕ್ಷಕರ ಆರೋಗ್ಯದ ಹಿತದೃಷ್ಟಿಯಿಂದ ಜೂನ್ 15 ರೊಳಗೆ ತಾಲೂಕಿನ ಎಲ್ಲಾ ಶಿಕ್ಷಕರಿಗೆ (ಸರಕಾರಿ, ಅನುದಾನಿತ, ಅನುದಾನರಹಿತ ಶಾಲಾ ಕಾಲೇಜುಗಳ) ಹಾಗೂ ಉಳಿದ ಇಲಾಖೆಗಳ ಎಲ್ಲಾ ನೌಕರರಿಗೆ ಲಸಿಕೆಯನ್ನು ನೀಡಬೇಕೆಂದು ಸಹಾಯಕ ಆಯುಕ್ತರು ಭಟ್ಕಳ ರವರಿಗೆ ಸರಕಾರಿ ನೌಕರರ ಸಂಘ ಭಟ್ಕಳದ ವತಿಯಿಂದ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.
ಮನವಿಗೆ ಸಕಾರಾತ್ಮಕ ವಾಗಿ ಸ್ಪಂದಿಸಿ ಕೂಡಲೇ ಲಸಿಕೆಯನ್ನು ನೀಡಲಾಗುವುದೆಂದು ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರು ಸ್ಪಷ್ಟ ಭರವಸೆಯನ್ನು ನೀಡಿದರು.ಈ ಸಂದರ್ಭದಲ್ಲಿ ನೌಕರರ ಸಂಘದ ಅಧ್ಯಕ್ಷ ಮೋಹನ ನಾಯ್ಕ, ಪ್ರಧಾನ ಕಾರ್ಯದರ್ಶಿ ಗಣೇಶ ಹೆಗಡೆ, ರಾಜ್ಯ ಪರಿಷತ್ ಸದಸ್ಯ ಪ್ರಕಾಶ ಶಿರಾಲಿ, ಸದಸ್ಯರುಗಳಾದ ಶಂಶುದ್ದೀನ್, ಬಸವರಾಜ್ ಬಳ್ಳಾರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಲ್ಲಾಸ ನಾಯ್ಕ, ಖಜಾಂಚಿ ಪ್ರಶಾಂತ್ ಕಾಯ್ಕಿಣಿ ಹಾಜರಿದ್ದರು.
Leave a Comment