ಹೊನ್ನಾವರ: ತಾಲೂಕಿನ ಗುಂಡಬಾಳ,ಭಾಸ್ಕೇರಿ,ಬಡಗಣಿ ನದಿ ತೀರದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಬುಧವಾರ ಭೇಟಿ ನೀಡಿಪ್ರವಾಹ ಪೀಡಿತವಾಗುವ ಪ್ರದೇಶಗಳ ಪರಿಸ್ಥಿತಿಯನ್ನು ಅಧಿಕಾರಿಗಳೊಂದಿಗೆ ಅವಲೋಕಿಸಿ ಅಹವಾಲು ಆಲಿಸಿದರು.
ಗುಂಡಬಾಳ ನದಿ ತೀರದ ಪ್ರವಾಹ ಆವರಿಸುವ ಪ್ರದೇಶವಾದ ಗುಂಡಿಬೈಲ್,ಹಡಿನಬಾಳ,ಕಡಗೇರಿ ನಾಥಗೇರಿ ಪ್ರದೇಶಕ್ಕೆ ಭೇಟಿ ನೀಡಿದರು.

ಪ್ರವಾಹ ಪರಿಸ್ಥಿತಿಯಲ್ಲಿ ಉಂಟಾಗುವ ಸಮಸ್ಯೆ, ಸುರಕ್ಷಿತ ಪ್ರದೇಶಗಳಿಗೆ ತೆರಳಲು ವ್ಯವಸ್ಥೆ, ಅಧಿಕಾರಿಗಳು ಸ್ಪಂದಿಸುವ ರೀತಿ ಇನ್ನಿತರ ವಿಷಯದ ಕುರಿತು ಸ್ಥಳಿಯರೊಂದಿಗೆ ಚರ್ಚಿಸಿದರು.ಈ ಸಂದರ್ಭದಲ್ಲಿ ಸ್ಥಳಿಯರು ಜಿಲ್ಲಾಧಿಕಾರಿಗಳ ಬಳಿ ನೆರೆಹಾವಳಿ ಬಂದಾಗ ಎದುರಿಸುವ ಸಮಸ್ಯೆ ಹೇಳಿಕೊಂಡರು. ಪ್ರತಿವರ್ಷವು ಪ್ರವಾಹ ಬಂದಾಗ ರಾಜಕಾರಣಿಗಳ ಭರವಸೆ ಮಾತ್ರ ನೀಡುತ್ತಾರೆ.

ಆದರೆ ಯಾವುದೇ ರೀತಿಯಲ್ಲು ಶಾಶ್ವತ ಪರಿಹಾರ ನೀಡುವುದಿಲ್ಲ. ನದಿಗಳಲ್ಲಿ ಹುಳು ತುಂಬಿಕೊಂಡಿರುವ ಪರಿಣಾಮ ಅಲ್ಪಸ್ವಲ್ಪ ಮಳೆ ಸುರಿದರು ಕೆಲ ಗಂಟೆಯಲ್ಲೇ ಪ್ರವಾಹವಾಗುತ್ತದೆ. ನೀರು ತಗ್ಗ ಬಹುದೆಂಬ ಭರವಸೆಯಲ್ಲೆ ಕೆಲವರು ಕಾಳಜಿ ಕೇಂದ್ರಕ್ಕೆ ತೆರಳದೆ ಮನೆಯಲ್ಲೆ ಇರುತ್ತಾರೆ. ಗೇರುಸೋಪ್ಪಾ ಜಲಾಶಯದ ಹೆಚ್ಚುವರಿ ನೀರು ಬಿಟ್ಟಾಗ ಗುಂಡಬಾಳ ನದಿ ನೀರು ಸರಾಗವಾಗಿ ಹರಿಯದೇ ತೋಟ,ಮನೆಗಳಿಗೆ ನುಗ್ಗುತ್ತದೆ. ರಾತ್ರಿ ಹೊತ್ತಿನಲ್ಲಿ ನೀರು ಹೆಚ್ಚಳವಾದಾಗ ಸುರಕ್ಷಿತ ಪ್ರದೇಶಕ್ಕೆ ತೆರಳಲು ಬೋಟ್ ವ್ಯವಸ್ಥೆ ಸಿಗದೇ ಜೀವಭಯದಲ್ಲಿರಬೇಕಾದ ಪರಿಸ್ಥಿತಿ ಇದೆ ಎಂದರು. ಈ ಬಗ್ಗೆ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ನೆರೆ ಪೀಡಿತ ಪ್ರದೇಶಗಳಿಗೆ ಪ್ರತಿವಾರ್ಡಗೆ ಎರಡು ಬೋಟ್ ವ್ಯವಸ್ಥೆ ಇರಿಸಿಕೊಳ್ಳಿ,ಪ್ರತಿಯೊಂದು ಮನೆಯ ಸದಸ್ಯರ ದೂರವಾಣಿ ಪಡೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಖರ್ವಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಾಬ್ಲಾ ನಾಯ್ಕ ಅವರು ನೆರೆ ಪೀಡಿತ ಪ್ರದೇಶದ ಆಯ್ದ ಸ್ಥಳಗಳಲ್ಲಿ ಕಬ್ಬಿಣದ ರ‍್ಯಾಲಿಂಗ್ ಮಾಡುವಂತೆ ಡಿಸಿಯವರಲ್ಲಿ ವಿನಂತಿಸಿದರು. ಪ್ರವಾಹ ಬಂದು ಕೆಲವೇ ದಿನಗಳವರೆಗೆ ಇರುವುದರಿಂದ ಕಬ್ಬಣದ ರ‍್ಯಾಲಿಂಗ್ ಬದಲು ಬಲವಾದ ಹಗ್ಗಗಳನ್ನು ಅಳವಡಿಸಿದರೆ ಇನ್ನೂ ಅನೂಕೂಲವಾಗುವುದು ಎಂದು ಸಿಪಿಐ ಶ್ರೀಧರ್ ಎಸ್.ಆರ್ ರವರು ಸಲಹೆ ನೀಡಿದರು ಡಿಸಿಯವರು ಸಲಹೆಗೆ ಸಮ್ಮತಿಸಿದರು.

*ಇಕ್ಕಟ್ಟಿನ ದಾರಿಯಲ್ಲಿ ಬೈಕ್‌ನಲ್ಲಿ ತೆರಳಿದ ಡಿಸಿ* ಈ ಮೊದಲೆಲ್ಲ ಅಧಿಕಾರಿ ವರ್ಗ ಪ್ರವಾಹ ಬಂದ ನಂತರ ನೇರೆ ಪೀಡಿತ ಪ್ರದೇಶಗಳಿಗೆ ಆಗಮಿಸುತ್ತಿದ್ದರು. ಆದರೆ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಅವರು ಕಡಗೇರಿ,ನಾಥಗೇರಿ ಪ್ರದೇಶಕ್ಕೆ ಪಿಡಿಓ ಚೆನ್ನಬಸಪ್ಪ ಅವರ ಬೈಕ್ ನಲ್ಲಿ ತೆರಳಿ ವಿಷೇಶ ಮುತುವರ್ಜಿ ವಹಿಸಿ ಮುನ್ನೇಚ್ಚರಿಕಾ ಕ್ರಮಗಳ ಕುರಿತು ಸೂಚಿಸಿದರು. ಒರ್ವ ಜಿಲ್ಲಾಧಿಕಾರಿಯ ಈ ನಡೆ ಅಲ್ಲಿನ ಜನರ ಮೆಚ್ಚುಗೆಗೆ ಪಾತ್ರವಾಯಿತು.ನೆರೆ ಪರಿಸ್ಥಿತಿಯ ಬಗ್ಗೆ ಪತ್ರಕರ್ತರ ಸಲಹೆಗೂ ಸಮ್ಮತಿ ಸೂಚಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಕೊರೋನಾ ಸಂದರ್ಭದಲ್ಲಿ ನೆರೆಪರಿಸ್ಥಿತಿ ಎದುರಿಸುವುದು ಸವಾಳಿನ ಕೆಲಸ. ಎಲ್ಲಾ ರೀತಿಯಲ್ಲು ಅಗತ್ಯ ಮುನ್ನೇಚ್ಚರಿಕೆ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿ ವರ್ಗಕ್ಕೆ ಸೂಚಿಸಲಾಗಿದೆ. ಪ್ರವಾಹದ ಪರಿಸ್ಥಿತಿ ಎದುರಿಸುವ ಬಗ್ಗೆ ಇಲ್ಲಿನ ಜನರಿಗೆ ತಿಳಿದಿದೆಯಾದರೂ ಸರ್ಕಾರದ ನೆರವು ಕೂಡ ಅಗತ್ಯ.ಕಾಳಜಿ ಕೇಂದ್ರಗಳಲ್ಲಿ ಎಲ್ಲಾ ರೀತಿಯ ಸೌಲಭ್ಯ ಒದಗಿಸಲು ಸೂಚಿಸಲಾಗಿದೆ. ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲು ಹಣದ ಯಾವುದೇ ತೊಂದರೆ ಇಲ್ಲ. ಕೊರೋನಾ ಸೊಂಕಿತರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ಕಾಳಜಿ ಕೇಂದ್ರಕ್ಕೆ ಬರುವವರು ಭಯಪಡುವ ಅಗತ್ಯ ಇಲ್ಲ ಎಂದರು. ಪ್ರವಾಹ ಸಂತ್ರಸ್ಥರಿಗೆ ಶಾಶ್ವತ ಪರಿಹಾರದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಹಾಯಕ ಉಪ ವಿಭಾಗಾಧಿಕಾರಿ ಮಮತಾ ದೇವಿ,ತಹಶಿಲ್ದಾರ್ ವಿವೇಕ್ ಶೇಣ್ವಿ, ಪಿಎಸೈ ಶಶಿಕುಮಾರ್,ಗ್ರಾ.ಪಂ ಅಧ್ಯಕ್ಷರಾದ ನಾಗರತ್ನ ನಾಯ್ಕ, ವಿಘ್ನೇಶ್ವರ ಹೆಗಡೆ, ಶ್ರೀಧರ್ ನಾಯ್ಕ, ಗಣಪತಿ ಬಿ.ಟಿ, ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Leave a Comment