ಹೊನ್ನಾವರ: ಲಿಂಗನಮಕ್ಕಿ ಜಲಾಶಯ ಭರ್ತಿಯಾಗುತ್ತಿರುವ ಬಗ್ಗೆ ಕೆ.ಪಿ.ಟಿ.ಸಿ.ಎಲ್ ನೀರು ಬಿಡುವ ಮೊದಲ ಸೂಚನೆ ಶುಕ್ರವಾರವೇ ನೀಡಿತ್ತಾದರೂ ನೀರನ್ನು ಬಿಡಲೇ ಬೇಕಾದ ಸನ್ನಿವೇಶ ನಿರ್ಮಾಣವಾಗಿಲ್ಲ ಎನ್ನುವುದು ಹೊಳೆಸಾಲಿನ ಜನರ ಆತಂಕವನ್ನು ಕೊಂಚ ಕಡಿಮೆ ಮಾಡಿತ್ತು.
ಆದರೆ ಗೇರಸೊಪ್ಪಾದಲ್ಲಿರುವ ಶರಾವತಿ ಟೇಲ್ ರೇಸ್ ಅಣೆಕಟ್ಟೆಯ ಜಲಾನಯನ ಪ್ರದೇಶದ ಸುಮಾರು 35 ಕಿಲೋಮೀಟರ್ ವ್ಯಾಪ್ತಿಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಜಲಾಶಯಕ್ಕೆ 12500 ಕ್ಯೂಸೆಕ್ ನೀರು ಹರಿದುಬರುತ್ತಿದೆ.ಜಲಾಶಯದ ನೀರಿನ ಮಟ್ಟ 50.34 ಮೀಟರ್ ಆಗಿದ್ದು ನಾಲ್ಕು ಘಟಕಗಳಿಂದ ವಿದ್ಯುತ್ ಉತ್ಪಾದಿಸಿ ಹೊರ ಬಿಡುವ ನೀರಿನ ಪ್ರಮಾಣ 22000 ಕ್ಯೂಸೆಕ್ ಆಗಿದೆ.

ಒಂದೊಮ್ಮೆ ವಿದ್ಯುತ್ ಗೆ ಬೇಡಿಕೆ ಇಲ್ಲವಾದರೂ ಜಲಾಶಯದ ನೀರಿನ ಮಟ್ಟ 55 ಮೀಟರ್ ತಲುಪಿದಲ್ಲಿ ಒಳಹರಿವಿನ ಪ್ರಮಾಣದ ನೀರನ್ನು ಗೇಟ್ ಗಳ ಮೂಲಕ ಹೊರಬಿಡುವುದು ಅನಿವಾರ್ಯವಾಗುತ್ತದೆ ಎನ್ನುವ ಸೂಚನೆ ನೀಡಿದ್ದಾರೆ.ವಿದ್ಯುತ್ ಉತ್ಪಾದನೆ ಇರಲಿ ಇಲ್ಲದಿರಲಿ 12,000 – 20,000 ಕ್ಯೂಸೆಕ್ ನೀರನ್ನು ನಿರಂತರವಾಗಿ ನದಿಗೆ ಬಿಡುವ ಸಾಧ್ಯತೆ ಅಧಿಕವಾಗಿದೆ. ಇದರಿಂದ ಜಲಾಶಯದ ಕೆಳಭಾಗದ ಹೊಳೆ ಸಾಲಿನಲ್ಲಿ ನೀರಿನಮಟ್ಟ ಹೇಳಿಕೊಳ್ಳುವಷ್ಟು ಹೆಚ್ಚದಿದ್ದರೂ ನೀರಿನ ಹರಿವು ಕೊಂಚ ಏರಿಕೆಯಾಗುವ ಸಾಧ್ಯತೆ ಇದೆ. ಮೀನುಗಾರಿಕೆ, ತಾರಿ ದಾಟಿಸುವುದು ಸೇರಿದಂತೆ ನದಿಯಲ್ಲಿನ ಚಟುವಟಿಕೆಗೆ ತೆರಳುವಾಗ ಹೆಚ್ಚು ಜಾಗೃತರಾಗಿರುವಂತೆ ಅಧಿಕಾರಿಗಳು ತಿಳಿಸಿದ್ದಾರೆ.
Leave a Comment