ನ ವದೆಹಲಿ
ಅಡುಗೆ ಅನಿಲ ಸಿಲಿಂಡರ್ ದರ ಮತ್ತೆ 25ರೂ. ಏರಿಕೆಯಾಗಿದೆ. ಬೆಲೆ ಏರಿಕೆಯಿಂದ ಕಂಗಾಲಾಗಿರುವ ಸಾರ್ವಜನಿಕರಿಗೆ ಎಲ್ಪಿಜಿ ಅಡುಗೆ ಅನಿಲ ಸಿಲಿಂಡರ್ ದರ ಮತ್ತೆ ಏರಿಕೆಯಾಗಿರುವುದು ಮತ್ತಷ್ಟು ಕಂಗಾಲಾಗುವಂತೆ ಮಾಡಿದೆ. ಪೆಟ್ರೋಲಿಯಂ ಕಂಪೆನಿಗಳು ಸಬ್ಸಿಡಿ ರಹಿತ ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು 25 ರೂ.ಗೆ ಏರಿಕೆ ಮಾಡಿದೆ.
ವಾಣಿಜ್ಯ ಬಳಕೆಯ 19ಕೆಜಿ ಸಿಲಿಂಡರ್ ಬೆಲೆ 68 ರೂ.ನಷ್ಟು ಏರಿಕೆಯಾಗಿದೆ.ಕಳೆದ ಜುಲೈ 1ರಂದು ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು 25 ರೂ. 50 ಪೈಸೆಗೆ ಹೆಚ್ಚಳ ಮಾಡಲಾಗಿತ್ತು. ಇದೀಗ ಮತ್ತೆ 25 ರೂ. ಹೆಚ್ಚಳ ಮಾಡಲಾಗಿದೆ. 2021ರ ಆರಂಭದಲ್ಲಿ ಸಿಲಿಂಡರ್ ಬೆಲೆ 694 ರೂ. ಇತ್ತು. ಇದೀಗ ಎಂಟು ತಿಂಗಳಲ್ಲಿ 165 ರೂ. ಹೆಚ್ಚಳವಾಗಿದೆ.ಗೃಹ ಬಳಕೆಯ ಸಿಲಿಂಡರ್ ಬೆಲೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಅಡುಗೆ ಅನಿಲ ಸಿಲಿಂಡರ್ ದರ 862 ರೂ., ದೆಹಲಿಯಲ್ಲಿ 859 ರೂ., ಮುಂಬೈನಲ್ಲಿ 859 ರೂ, ಕೋಲ್ಕತ್ತಾದಲ್ಲಿ 886 ರೂ., ಚೆನ್ನೈನಲ್ಲಿ 875 ರೂ. ಆಗಿದೆ.
ನಿನ್ನೆಯಿಂದ ಸಿಲಿಂಡರ್ ದರದಲ್ಲಿ 25 ರೂ. ಹೆಚ್ಚಳ ಮಾಡಲಾಗಿದೆ. ಈಗಾಗಲೇ ಬೆಲೆ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ. ಪೆಟ್ರೋಲ್, ಡೀಸೆಲ್ ದರ ನಿರಂತರವಾಗಿ ಏರಿಕೆಯಾಗುತ್ತಿದೆ. ದಿನಸಿ ಪದಾರ್ಥಗಳ ಬೆಲೆಯೂ ಕೂಡ ಗಗನಮುಖಿಯಾಗಿದೆ. ಆಟೋ ಸಿಲಿಂಡರ್ ದರವನ್ನು ಕೂಡ ಹೆಚ್ಚಳ ಮಾಡಲಾಗಿದ್ದು, ಮತ್ತೆ ಈಗ ಅಡುಗೆ
ಸಿಲಿಂಡರ್ ದರ ಹೆಚ್ಚಳ ಮಾಡಿರುವುದು ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆದಂತಾಗಿದೆ.ತೈಲ ಬೆಲೆ ಏರಿಕೆಯಾದರೆ ಅಗತ್ಯವಸ್ತುಗಳ ಬೆಲೆಯೂ ಕೂಡ ಏರಿಕೆಯಾಗುತ್ತದೆ. ಸಿಲಿಂಡರ್ ಬೆಲೆ ಹೆಚ್ಚಳವಾದರೆ ಹೊಟೇಲ್ ತಿನಿಸುಗಳ ಬೆಲೆಯೂ ಏರಿಕೆಯಾಗುತ್ತದೆ. ರಸ್ತೆ ಬದಿಯಲ್ಲಿ ಆಹಾರ ಉತ್ಪನ್ನಗಳನ್ನು ಮಾರುವ ಜನರು ಕೂಡ ಸಂಕಷ್ಟಕ್ಕೆ ಸಿಲುಕಲಿದ್ದಾರೆ.
Leave a Comment