ಭಟ್ಕಳ: ಇತ್ತೀಚೆಗೆ ಮೈಸೂರಿನಲ್ಲಿ ಎಂ. ಬಿ. ಎ. ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಘಟನೆಯಿಂದಾಗಿ ರಾಜ್ಯದಲ್ಲಿ ಮಹಿಳೆಯರಿಗೆ, ಯುವತಿಯರಿಗೆ ರಕ್ಷಣೆ ಇಲ್ಲದಂತಾಗಿದ್ದು, ಇವರುಗಳ ರಕ್ಷಣೆಗಾಗಿ ಕಾನೂನು ಕಠಿಣ ರೂಪಿಸಿ, ದೌರ್ಜನ್ಯಕ್ಕೆ ಕಡಿವಾಣ ಹಾಕುವಂತೆ ರಾಜ್ಯ ಸರಕಾರ ಆದೇಶಿಸಬೇಕೆಂದು ಭಟ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯು ಬುಧವಾರದಂದು ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ರಾಜ್ಯದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದ್ದು, ಮಹಿಳೆಯರು, ಯುವತಿಯರು ಮಕ್ಕಳು ಧೈರ್ಯದಿಂದ ತಿರುಗಾಡುವ ಪರಿಸ್ಥಿತಿ ಇಲ್ಲದಂತಾಗಿದೆ. ಇತ್ತೀಚಿಗೆ ಮೈಸೂರಿನಲ್ಲಿ ಎಂ. ಬಿ.ಎ. ವಿಧ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಘಟನೆಯೇ ಇದಕ್ಕೆ ಸಾಕ್ಷಿಯಾಗಿದೆ.

ಅತ್ಯಾಚಾರವೆಸಗಿದ ಐವರು ಆರೋಪಗಳನ್ನು ಪೋಲಿಸರು ಬಂಧಿಸಿದ್ದರೂ, ಮುಖ್ಯ ಇಬ್ಬರು ಆರೋಪಗಳನ್ನು ಇನ್ನು ತನಕ ಪೋಲಿಸರು ಬಂಧಿಸದೇ ಇದ್ದ ಕಾರಣ ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಕುರಿತಂತೆ ರಾಜ್ಯದ ಗ್ರಹಮಂತ್ರಿ ಅರಗ ಜ್ಞಾನೇಂದ್ರ ಅವರು ಉಡಾಫೆಯ ಮಾತುಗಳನ್ನಾಡುತ್ತಿದ್ದು, ಮಹಿಳೆಯರು ರಾತ್ರಿ ಹೊತ್ತು ಏಕೆ ತಿರುಗಾಡಬೇಕು ಎಂದು ಪ್ರಶ್ನಿಸುತ್ತಿದ್ದಾರೆ.

ಹಾಗೆಯೇ ಸರಕಾರದ ಅನೇಕ ಮಂತ್ರಿಗಳು ಸಹ ಮಹಿಳೆಯರು ಬಗ್ಗೆ ನಿರ್ಲಕ್ಷ್ಯ ಭಾವನೆ ಹೊಂದಿದ್ದು, ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಕಾರಣ ಮೈಸೂರಿನಲ್ಲಿ ನಡೆದ ವಿದ್ಯಾರ್ಥಿನಿಯ ಅತ್ಯಾಚಾರದ ಎಲ್ಲಾ ಆರೋಪಿಗಳನ್ನು ಬಂಧಿಸಿ, ಅವರಿಗೆ ಕಾನೂನಿನಂತೆ ಶಿಕ್ಷೆ ವಿಧಿಸಬೇಕು ಹಾಗೂ ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕುವಂತೆ ಸರಕಾರಕ್ಕೆ ಆದೇಶಿಸುವಂತೆ ಮನವಿ ಮಾಡಿದರು. ರಾಜ್ಯದಲ್ಲಿ ಇದೇ ರೀತಿ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ಮುಂದುವರೆದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
ಮನವಿಯನ್ನು ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಸ್ವೀಕರಿಸಿದರು. ತಹಸೀಲ್ದಾರ ಎಸ್. ರವಿಚಂದ್ರ ಇದ್ದರು.ಈ ಸಂದರ್ಭದಲ್ಲಿ ಭಟ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಜಯಲಕ್ಷ್ಮಿ ಗೊಂಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ, ಜಿಲ್ಲಾ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಅಬ್ದುಲ್ ಮಜೀದ್, ಮಾಜಿ ತಾಲೂಕಾ ಪಂಚಾಯತ ಸದಸ್ಯ ವಿಷ್ಣು ದೇವಾಡಿಗ, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷೆ ಜಯಶ್ರೀ ಮೋಗೇರ, ತಾಲೂಕಾ ಪಂಚಾಯತ ಮಾಜಿ ಉಪಾಧ್ಯಕ್ಷೆ ರಾಧಾ ವೈದ್ಯ, ಮಾಜಿ ಜಿಲ್ಲಾ ಪಂಚಾಯತ ಸದಸ್ಯೆ ಸಿಂಧು ನಾಯ್ಕ, ಮಾರುಕೇರಿ ಗ್ರಾಮ ಪಂಚಾಯತ್ ಸದಸ್ಯೆ ನಾಗವೇಣಿ ಮಾರುಕೇರಿ ಮುಂತಾದವರು ಇದ್ದರು.
Leave a Comment