ಭಟ್ಕಳ: ಪಟ್ಟಣದಲ್ಲಿ ಮುಂಜಾನೆ ವೇಳೆ ಕಳ್ಳರು ಕೈಚಳಕ ತೋರಿದ್ದು ಮೂರು ಅಂಗಡಿ ಹಾಗೂ ಒಂದು ಮನೆಯನ್ನು ದೋಚಿ ಪರಾರಿಯಾಗಿದ್ದಾರೆ. ಇಲ್ಲಿನ ಮಾರಿಕಟ್ಟಾ ಬಳಿ ಸರಣಿ ಕಳ್ಳತನ ನಡೆದಿದ್ದು ನಗದು, ಚಿನ್ನಾಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿರುವುದು ಜನತೆಯನ್ನು ಬೆಚ್ಚಿಬೀಳಿಸಿದೆ.
ಕಳ್ಳರು ಚಾಲಾಕಿತನದಿಂದ ಕಳ್ಳತನ ನಡೆಸಿದ್ದು ಈ ಎಲ್ಲ ದೃಶ್ಯಾವಳಿಗಳು ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿವೆ. ಸಿಸಿಕ್ಯಾಮೆರಾ ದೃಶ್ಯಗಳ ಪ್ರಕಾರ ಕಳ್ಳರು ಬೆಳಗಿನಜಾವ 3:30ರ ವೇಳೆಗೆ ಕಳ್ಳತನ ನಡೆಸಿದ್ದಾಗಿ ತಿಳಿದುಬಂದಿದೆ.
ಪಟ್ಟಣದ ಮೂರು ಅಂಗಡಿಗಳಿಗೆ ಕನ್ನ ಹಾಕಿರುವ ಖದೀಮರು, ಬುರ್ಖಾ ಅಂಗಡಿಯಿಂದ ಸುಮಾರು 30,000 ರೂಪಾಯಿ ನಗದು, ಬುರ್ಖಾ ಮತ್ತು ಇತರೆ ವಸ್ತುಗಳನ್ನು ಕಳವು ಮಾಡಿದ್ದಾರೆ. ಇನ್ನೊಂದು ಅಂಗಡಿಯಿಂದ ಸುಮಾರು 10,000 ರೂಪಾಯಿ ನಗದು ಮತ್ತು ಕೆಲವು ವಸ್ತುಗಳನ್ನು ಕಳವು ಮಾಡಲಾಗಿದೆ.
ಬಳಿಕ ಮೂರನೇ ಅಂಗಡಿಯ ಬಾಗಿಲು ಮುರಿದು ಒಳ್ಳನುಗ್ಗಿದ ಕಳ್ಳರಿಗೆ ಏನೂ ಸಿಕ್ಕಿಲ್ಲ. ಹೀಗಾಗಿ, ಚಾಲಾಕಿಗಳು ಈ ಅಂಗಡಿಗಳ ಬಳಿಯೇ ಬೀಗ ಹಾಕಿದ್ದ ಮನೆಗೆ ನುಗ್ಗಿ, 10,000 ನಗದು, ಎರಡು ಚಿನ್ನದ ಸರ, ಮೂರು ಉಂಗುರಗಳು ಸೇರಿದಂತೆ ಆಭರಣಗಳನ್ನು ಕದ್ದು ತೆರಳಿದ್ದಾರೆ.
ಇನ್ನು ಕಳ್ಳರು ಕಳ್ಳತನ ಮಾಡಲು ಕಬ್ಬಿಣದ ಕಂಬಿಯ ಸಹಾಯದಿಂದ ಅಂಗಡಿಯ ಶಟರ್‌ಗಳನ್ನು ಮುರಿದು ದೋಚಿದ್ದು, ಬಾಗಿಲಿನ ಬೀಗವನ್ನು ಒಡೆದು ಮನೆಯೊಳಗೆ ಪ್ರವೇಶಿಸಿದ್ದಾರೆ ಎಂದು ತಿಳಿದುಬಂದಿದೆ.ಕಳ್ಳತನದ ವೇಳೆ ಚಾಕಲಿ ಕಳ್ಳರು
ಕೆಲವು ಸಿಸಿಟಿವಿ ಕ್ಯಾಮೆರಾಗಳ ದಿಕ್ಕನ್ನು ಬದಲಾಯಿಸಿದ್ದಾರಾದರೂ, ಕೆಲವು ಕ್ಯಾಮೆರಾಗಳು ಕಳ್ಳತನವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿವೆ.
ಸರಣಿ ಕಳ್ಳತನದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆದಿದ್ದು ಮಾಹಿತಿ ಕಲೆಹಾಕಿದ್ದಾರೆ. ಈಗಾಗಲೇ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪಡೆದುಕೊಳ್ಳಲಾಗಿದ್ದು ಇದರ ಸಹಾಯದಿಂದ ಕಳ್ಳರನ್ನು ಪತ್ತೆಹಚ್ಚಲು ಬಲೆ ಬೀಸಲಾಗಿದೆ. ಮಾರಿಕಟ್ಟಾದ ಹಲವು ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಅಳವಡಿಸಿದ್ದು, ಕಳ್ಳರನ್ನು ಆದಷ್ಟು ಬೇಗ ಪತ್ತೆ ಮಾಡಬಹುದು ಎಂದು ಸ್ಥಳೀಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Leave a Comment