ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಚಿವ ಸಂಪುಟ ಸಮಿತಿ ಇಂದು ಶಿಕ್ಷಣ ಸಚಿವಾಲಯಕ್ಕೆ 2021-22ರಿಂದ 2025-26 (31.03.2026ರವರೆಗೆ) ರಾಷ್ಟ್ರೀಯ ಅಪ್ರೆಂಟಿಶಿಪ್ ತರಬೇತಿ ಯೋಜನೆ (ಎನ್ ಎಟಿಎಸ್) ಅಡಿಯಲ್ಲಿ ಅಪ್ರೆಂಟಿಶಿಪ್ ತರಬೇತಿ ಪಡೆಯುವವರಿಗೆ ಸ್ಟೈಫಂಡ್ ಬೆಂಬಲಕ್ಕಾಗಿ 3,054 ಕೋಟಿ ರೂ. ಒದಗಿಸಲು ಅನುಮೋದನೆ ನೀಡಿತು.
ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳಿಂದ ಸುಮಾರು 9 ಲಕ್ಷ ಅಪ್ರೆಂಟೀಸ್ ಗಳು ತರಬೇತಿ ಪಡೆಯುವ ಸಾಧ್ಯತೆ ಇದೆ. ಎನ್ ಎಟಿಎಸ್ ಭಾರತ ಸರ್ಕಾರದ ಅತ್ಯಂತ ವ್ಯವಸ್ಥಿತ ಯೋಜನೆಯಾಗಿದ್ದು, ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶದ ಸಂಭವನೀಯತೆಯನ್ನು ಹೆಚ್ಚಿಸುವಲ್ಲಿ ಉತ್ತಮ ಕೆಲಸ ಮಾಡುತ್ತಿದೆ.
ಎಂಜಿನಿಯರಿಂಗ್, ಲಲಿತಕಲೆಗಳು (ಹ್ಯೂಮ್ಯಾನಿಟೀಸ್), ವಿಜ್ಞಾನ ಮತ್ತು ವಾಣಿಜ್ಯದಲ್ಲಿ ಪದವಿ ಮತ್ತು ಡಿಪ್ಲೊಮಾ ಪೂರ್ಣಗೊಳಿಸಿದ ಅಪ್ರೆಂಟೀಸ್ ಗಳಿಗೆ ಮಾಸಿಕ ಕ್ರಮವಾಗಿ 9,000/- ರೂ ಮತ್ತು 8,000/- ರೂ. ನೀಡಲಾಗುವುದು.
ಮುಂದಿನ 5 ವರ್ಷಗಳಿಗೆ 3,000 ಕೋಟಿ ರೂ.ಗೂ ಅಧಿಕ ಹಣ ವ್ಯಯ ಮಾಡಲು ಸರ್ಕಾರ ಅನುಮೋದನೆ ನೀಡಿದೆ, ಇದು ಹಿಂದಿನ 5 ವರ್ಷಗಳಲ್ಲಿ ವ್ಯಯ ಮಾಡಿದ್ದಕ್ಕಿಂತ 4.5 ಪಟ್ಟು ಹೆಚ್ಚಿನ ಮೊತ್ತವಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020ಯಲ್ಲಿ ಅಪ್ರೆಂಟಿಶಿಪ್ ಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಅದಕ್ಕೆ ಅನುಗುಣವಾಗಿ ಅಪ್ರೆಂಟಿಶಿಪ್ ಗೆ ಹೆಚ್ಚಿನ ಮೊತ್ತವನ್ನು ನಿಗದಿಪಡಿಸಲಾಗಿದೆ.
ಸರ್ಕಾರ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್- ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್’ ಗೆ ಒತ್ತು ನೀಡುವುದರೊಂದಿಗೆ ಎಂಜಿನಿಯರ್ ಜೊತೆಗೆ ಲಲಿತಕಲೆ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳನ್ನೂ ಸಹ ಸೇರಿಸುವ ಮೂಲಕ ಎನ್ ಎಟಿಎಸ್ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲಾಗಿದೆ. ಈ ಯೋಜನೆಯ ಕೌಶಲ್ಯ ಪೂರಕ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಕೌಶಲ್ಯ ಮಟ್ಟದ ಗುಣಮಟ್ಟವನ್ನು ಹೆಚ್ಚಿಸುವ ಗುರಿ ಹೊಂದಿದೆ ಮತ್ತು ಇದರಿಂದ ಮುಂದಿನ 5 ವರ್ಷಗಳಲ್ಲಿ ಸುಮಾರು 7 ಲಕ್ಷ ಯುವಜನರಿಗೆ ಉದ್ಯೋಗವಕಾಶ ದೊರಕಲಿದೆ.
ಮೊಬೈಲ್ ಉತ್ಪಾದನೆ, ವೈದ್ಯಕೀಯ ಸಾಧನಗಳ ಉತ್ಪಾದನೆ, ಫಾರ್ಮಾ ವಲಯ, ಎಲೆಕ್ಟ್ರಾನಿಕ್ಸ್/ ತಂತ್ರಜ್ಞಾನ ಉತ್ಪನ್ನ ಗಳು, ಆಟೋ ಮೊಬೈಲ್ ವಲಯ ಇತ್ಯಾದಿ ಬೆಳವಣಿಗೆ ಹೊಂದುತ್ತಿರುವ ವಲಯದಲ್ಲಿ ಉತ್ಪಾದನೆ ಆಧರಿಸಿ ಪ್ರೋತ್ಸಾಹಧನ (ಪಿಎಲ್ ಐ) ಯೋಜನೆಯಡಿ ಎನ್ ಎಟಿಎಸ್ ಅಪ್ರೆಂಟಿಶಿಪ್ ನೀಡಲಿದೆ. ಈ ಯೋಜನೆಯು ಗತಿಶಕ್ತಿ ಅಡಿ ಗುರುತಿಸಲಾದ ಔದ್ಯಮಿಕ ವಲಯಕ್ಕೆ ಸಂಪರ್ಕ ಮತ್ತು ಸಾರಿಗೆಗೆ ಕೌಶಲ್ಯ ಹೊಂದಿದ ಮಾನವಶಕ್ತಿಯನ್ನು ಸಜ್ಜುಗೊಳಿಸಲಿದೆ.
Leave a Comment